ವಿಜಯಾನಂದ ಕಾಶಪ್ಪನವರ ಗೈರು ಜಾಮೀನುರಹಿತ ವಾರಂಟ್‌ಗೆ ಆದೇಶ

ಬುಧವಾರ, ಮಾರ್ಚ್ 27, 2019
26 °C

ವಿಜಯಾನಂದ ಕಾಶಪ್ಪನವರ ಗೈರು ಜಾಮೀನುರಹಿತ ವಾರಂಟ್‌ಗೆ ಆದೇಶ

Published:
Updated:
Prajavani

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಆರೋಪಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೆಂಡ ಕಾರಿದ್ದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಬುಧವಾರ ಬೆಳಗ್ಗೆ ಪ್ರಕರಣವನ್ನು ವಿಚಾರಣೆಗೆ ಕೂಗಿಸಿದಾಗ ಕಾಶಪ್ಪನವರ ಪರ ವಕೀಲರು, ‘ಕಾಶಪ್ಪನವರ ಶೌಚಾಲಯಕ್ಕೆ ಹೋಗಿದ್ದಾರೆ‌’ ಎಂದರು. ಈ ಕಾರಣಕ್ಕಾಗಿ 1.45ಕ್ಕೆ ಪುನಃ ಕರೆಯಲು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ನಿರ್ದೇಶಿಸಿದರು.

1.45ಕ್ಕೆ ಮತ್ತೆ ಕೂಗಿಸಿದಾಗ ಆರೋಪಿ ಮತ್ತು ಆರೋಪಿ ಪರ ವಕೀಲರಿಬ್ವರೂ ಗೈರು ಹಾಜರಾಗಿದ್ದರು. ಇದರಿಂದಾಗಿ ವಿಚಾರಣೆಯನ್ನು ಮಧ್ಯಾಹ್ನ 3 ಕ್ಕೆ ಮುಂದೂಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಕೂಗಿಸಿದಾಗ ಕಾಶಪ್ಪನವರ ಪರ ವಕೀಲರು, ‘ಪರಿಚಿತರು ನಿಧನ ಹೊಂದಿರುವ ಕಾರಣ ಕೋರ್ಟ್‌ನಿಂದ ತುರ್ತಾಗಿ ನಿರ್ಗಮಿಸಿದ್ದಾರೆ. ಆದ್ದರಿಂದ ವಿನಾಯ್ತಿ ನೀಡಬೇಕು’ ಎಂದು ಕೋರಿ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ಓದಿದ ನ್ಯಾಯಾಧೀಶರು ಕನಲಿ ಕೆಂಡವಾಗಿ ವಕೀಲರನ್ನು ತರಾಟೆಗೆ ತೆಗೆದುಕೊಂಡರು.

‘ಏನ್ರೀ ಈ ಮನವಿಯಲ್ಲಿ ಆರೋಪಿಗೂ ಸತ್ತವರಿಗೂ ಏನು ಸಂಬಂಧವಿದೆ. ಸುಮ್ಮಸುಮ್ಮನೆ ಯಾರನ್ನೋ ಕೊಲ್ಲಲು ಹೋಗಬೇಡಿ. ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ ಅವರು ಸತ್ತಿದ್ದಾರೆ ಅಂತಾ’ ಎಂದು ಕಿಡಿ ಕಾರಿದರು.

ಇದಕ್ಕೆ ಉತ್ತರಿಸಲು ವಕೀಲರು ತಡಬಡಾಯಿಸಿದಾಗ, ‘ಬೆಳಗ್ಗೆ ಶೌಚಾಲಯಕ್ಕೆ ಹೋಗಿದ್ರು ಅಂತಾ ಸುಳ್ಳು ಹೇಳ್ತೀರ. ಈಗ ನೋಡಿದರೆ ಪರಿಚಿತರು ಸತ್ತಿದ್ದಾರೆ ಅಂತಾ ಹೇಳ್ತೀರಾ’ ಎಂದು ಜಾಮೀನು ರಹಿತ ವಾರಂಟ್‌ಗೆ ಆದೇಶಿಸಿದರು.

‘ಮುಂದಿನ ವಿಚಾರಣೆಗೆ ಹಾಜರಾಗಲಿ ಆವಾಗ ಏನಾಗುತ್ತೊ ನೋಡಿ, ನಿಮ್ಮ ಹಣೆಬರಹ’ ಎಂದು ಕಾಶಪ್ಪನವರ ಪರ ವಕೀಲರಿಗೆ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !