ಫಲಾನುಭವಿಗಳ ಆಯ್ಕೆಗೆ ಸಮಿತಿ ಲೆಕ್ಕಕ್ಕಿಲ್ಲ; ವಾರ್ಡ್‌ ಸಮಿತಿಯೇ ಸುಪ್ರೀಂ

7
ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ: ಆಯ್ಕೆ ಪ್ರಕ್ರಿಯೆಯಲ್ಲಿ

ಫಲಾನುಭವಿಗಳ ಆಯ್ಕೆಗೆ ಸಮಿತಿ ಲೆಕ್ಕಕ್ಕಿಲ್ಲ; ವಾರ್ಡ್‌ ಸಮಿತಿಯೇ ಸುಪ್ರೀಂ

Published:
Updated:

ಬೆಂಗಳೂರು: ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದುದು ವಾರ್ಡ್‌ ಸಮಿತಿಯಲ್ಲಿ. ಆದರೆ, ಬಹುತೇಕ ವಾರ್ಡ್‌ಗಳಲ್ಲಿ ಈ ಸಮಿತಿಯನ್ನು ಕತ್ತಲಲ್ಲಿಟ್ಟು ಫಲಾನುಭವಿಗಳ ಆಯ್ಕೆ ನಡೆಯುತ್ತಿದೆ.

ಬಹುತೇಕ ಕಡೆ ಪಾಲಿಕೆ ಸದಸ್ಯರೇ ಫಲಾನುಭವಿಗಳ ಪಟ್ಟಿ ಮಾಡುತ್ತಿದ್ದಾರೆ. ಕೆಲವೆಡೆ ಸಮಿತಿಯ ಗಮನಕ್ಕೆ ತಾರದೆಯೇ ಈ ಪಟ್ಟಿಗೆ ಮಂಜೂರಾತಿಯನ್ನೂ ನೀಡಲಾಗುತ್ತಿದೆ. ಇನ್ನು ಕೆಲವು ಕಡೆ ಫಲಾನುಭವಿಗಳ ಪಟ್ಟಿಯನ್ನು ಕಾಟಾಚಾರಕ್ಕೆ ವಾರ್ಡ್‌ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತಿದೆ. ಹಾಗಾಗಿ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ದೂರುತ್ತಾರೆ ವಾರ್ಡ್‌ ಸಮಿತಿ ಬಲಪಡಿಸಲು ಶ್ರಮಿಸುತ್ತಿರುವ ಹೋರಾಟಗಾರರು.

‘ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆ ವಾರ್ಡ್‌ ಸಮಿತಿಗಳ ಮೂಲಕವೇ ನಡೆಯಬೇಕು. ಈ ಬಗ್ಗೆ ಕೌನ್ಸಿಲ್‌ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲ ವಾರ್ಡ್‌ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಆಯುಕ್ತರು ಈ ಬಗ್ಗೆ ಆದೇಶ ಹೊರಡಿಸಿದ್ದರೂ ಬಹುತೇಕ ವಾರ್ಡ್‌ ಸಮಿತಿಗಳು ಈ ನಿಯಮ ಪಾಲಿಸುತ್ತಿಲ್ಲ. ಹೆಚ್ಚಿನ ಕಡೆ ಸಮಿತಿ ಸಭೆಗಳೇ ನಡೆಯುತ್ತಿಲ್ಲ. ಆದರೆ, ಇತ್ತೀಚೆಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಸಭೆಗಳು ಸರಿಯಾಗಿ ನಡೆದರೆ, ಕ್ರಮೇಣ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೂ ನಿಯಮ ಪ್ರಕಾರವೇ ನಡೆಯಲಿದೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ಅಭಿಪ್ರಾಯಪಟ್ಟರು.

‘ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆಯ್ಕೆ ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ನಡೆಯುತ್ತದೆ. ಹಾಗಾಗಿ ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗುವುದಿಲ್ಲ. ಆ ಕಾರಣಕ್ಕೆ ವಾರ್ಡ್‌ ಸಮಿತಿಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತಿಲ್ಲ ಎನ್ನಲಾಗದು. ನನ್ನ ವಾರ್ಡ್‌ನಲ್ಲಂತೂ ಈ ನಿಯಮವನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ’ ಎಂದು ಬಾಗಲಗುಂಟೆ ವಾರ್ಡ್‌ನ ಸದಸ್ಯ ಕೆ.ನರಸಿಂಹ ನಾಯಕ ತಿಳಿಸಿದರು.

‘ಸಾಮಾನ್ಯವಾಗಿ ವಾರ್ಡ್‌ ಸಮಿತಿಗಳಲ್ಲಿ ಪಾಲಿಕೆ ಸದಸ್ಯರ ಜೊತೆ ಉತ್ತಮ ಸಂಬಂಧ ಹೊಂದಿರುವವರನ್ನೇ ಸದಸ್ಯರನ್ನಾಗಿ ನೇಮಿಸಲಾಗಿರುತ್ತದೆ. ಹಾಗಾಗಿ ಸಮಿತಿ ಸಭೆಯಲ್ಲೇ ಫಲಾನುಭವಿಗಳ ಆಯ್ಕೆಗೆ ತೊಡಕೇನೂ ಇಲ್ಲ. ಸಮಿತಿಯ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯರ ಮಾತನ್ನು ಸದಸ್ಯರು ತಿರಸ್ಕರಿಸುವ ಸಾಧ್ಯತೆ ಕಡಿಮೆ’ ಎಂದು ಹೇಳಿದರು. 

‘ಪಾಲಿಕೆ ಸದಸ್ಯರೇ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಕೆಲವು ಕಡೆ ನಡೆಯುತ್ತದೆ. ಆದರೆ, ಬಡಜನರ ಸಂಕಷ್ಟಗಳು ಅಧಿಕಾರಿಗಳಿಗಿಂತ ಹೆಚ್ಚಾಗಿ ಪಾಲಿಕೆ ಸದಸ್ಯರಿಗೆ ತಿಳಿದಿರುತ್ತದೆ. ಹಾಗಾಗಿ ಅವರು ಆಯ್ಕೆ ಮಾಡಿದರೆ ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಿಸಲು ಸಾಧ್ಯವಾಗುತ್ತದೆ. ಆದರೆ, ಕೆಲವು ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸವಲತ್ತು ನೀಡಿದ ಉದಾಹರಣೆಗಳೂ ಇವೆ. ಇಂತಹ ಪ್ರಕರಣಗಳು ಹೆಚ್ಚೆಂದರೆ ಶೇ 20ರಷ್ಟು ಇರಬಹುದು’ ಎಂದು ವಿವರಿಸಿದರು.

‘ಫಲಾನುಭವಿಗಳನ್ನು ವಾರ್ಡ್‌ ಸಮಿತಿಯಲ್ಲೇ ಆಯ್ಕೆ ಮಾಡಬೇಕೆಂಬ ಅಂಶ ಕಾನೂನಿನಲ್ಲಿ ಇಲ್ಲ. ಆದರೆ ಸಮಿತಿಗಳಲ್ಲೇ ಈ ಪ್ರಕ್ರಿಯೆ ನಡೆದರೆ ಒಳ್ಳೆಯದು, ಇದರಿಂದ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರುತ್ತದೆ’ ಎಂದರು ಜಯಮಹಲ್‌ ವಾರ್ಡ್‌ನ ಸದಸ್ಯ ಎಂ.ಕೆ.ಗುಣಶೇಖರ.

ಕೆಲವು ವಾರ್ಡ್‌ಗಳಲ್ಲಿ ಫಲಾನುಭವಿ ಆಯ್ಕೆ ಸಮರ್ಪಕವಾಗಿ ನಡೆಯದ ಕಾರಣ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನ ಬಳಕೆ ಆಗುತ್ತಿಲ್ಲ. ಇನ್ನು ಕೆಲವು ವಾರ್ಡ್‌ಗಳ ಸದಸ್ಯರು ಮೀಸಲಿಟ್ಟ ಅನುದಾನಕ್ಕಿಂತಲೂ ಹೆಚ್ಚು ಅನುದಾನಕ್ಕೆ ಬೇಡಿಕೆ ಇಟ್ಟ ಉದಾಹರಣೆಗಳೂ ಇವೆ.

ಕಾರ್ಯಕ್ರಮದಡಿ ಏನೆಲ್ಲ ಸವಲತ್ತು?
ಪಾಲಿಕೆಯು ಕಲ್ಯಾಣ ಕಾರ್ಯಕ್ರಮಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಬಡವರಿಗೆ ಅನೇಕ ಸವಲತ್ತುಗಳನ್ನು ನೀಡುತ್ತದೆ.

ಇದರಲ್ಲಿ ಬಡವರಿಗೆ ಮನೆ ನಿರ್ಮಿಸಲು ₹ 5 ಲಕ್ಷ ಅನುದಾನ ನೀಡುವುದು ಪ್ರಮುಖವಾದುದು. ಅದನ್ನು ಹೊರತುಪಡಿಸಿದರೆ, ಟ್ಯಾಕ್ಸಿ ಖರೀದಿ, ಆಟೊರಿಕ್ಷಾ ಖರೀದಿಗೂ ಆರ್ಥಿಕ ನೆರವು ನೀಡಲಾಗುತ್ತದೆ. ವಿಧವೆಯರಿಗೆ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‌, ಸೈಕಲ್‌, ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ನೀಡಲಾಗುತ್ತದೆ.

‘2018–19ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇದುವರೆಗೆ ಇದುವರೆಗೆ ₹ 210 ಕೋಟಿ ವೆಚ್ಚಕ್ಕೆ ಮಂಜೂರಾತಿ ನೀಡಿದ್ದೇವೆ. ಈ ಪೈಕಿ ₹ 157 ಕೋಟಿ ಖರ್ಚಾಗಿದೆ’ ಎಂದು ಆಯುಕ್ತರು ತಿಳಿಸಿದರು.

2017–18ನೇ ಸಾಲಿನಲ್ಲಿ ₹ 191 ಕೋಟಿ ಖರ್ಚು ಮಾಡಬೇಕಿತ್ತು. ಹಿಂದಿನ ವರ್ಷ ಖರ್ಚಾಗದೇ ಉಳಿದ ಮೊತ್ತ ಸೇರಿಸಿ ಒಟ್ಟು ₹ 337 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿತ್ತು.
**
16ರಂದು ಸಂವಾದ

ವಾರ್ಡ್‌ ಸಮಿತಿಗಳ ಬಲವರ್ಧನೆ ಕುರಿತು ‘ಪ್ರಜಾವಾಣಿ’ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ‘ದಿ ಚಾನ್ಸರಿ ಪೆವಿಲಿಯನ್‌’ ಹೋಟೆಲ್‌ನಲ್ಲಿ ಇದೇ 16ರಂದು ಸಂಜೆ 4.30ರಿಂದ ಸಂವಾದ ಏರ್ಪಡಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ (https://www.deccanherald.com/ward-committees-event) ನೋಂದಣಿ ಮಾಡಿಸಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !