ವೈಟ್‌ ಟಾಪಿಂಗ್‌: ನಾಗರಿಕರಿಂದ ಕಾನೂನು ಸಮರ

ಭಾನುವಾರ, ಮೇ 26, 2019
27 °C

ವೈಟ್‌ ಟಾಪಿಂಗ್‌: ನಾಗರಿಕರಿಂದ ಕಾನೂನು ಸಮರ

Published:
Updated:
Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವೈಟ್‌ ಟಾಪಿಂಗ್‌ ಕಾಮಗಾರಿಗಾಗಿ ಸುಸ್ಥಿಯಲ್ಲಿದ್ದ ರಸ್ತೆಗಳನ್ನೇ ಹಾಳು ಮಾಡಿರುವುದರ ವಿರುದ್ಧ ನಾಗರಿಕರು ಧ್ವನಿ ಎತ್ತಿದ್ದಾರೆ. ಜಯನಗರ ಹಾಗೂ ಬಸವನಗುಡಿಯ ನಾಗರಿಕ ಸಂಘಟನೆಗಳಂತೂ ಹೈಕೋರ್ಟ್‌ ಮೊರೆಯನ್ನೇ ಹೋಗಿವೆ.

ಕೆಲ ತಿಂಗಳುಗಳ ಹಿಂದೆ ಟಾರು ಕಂಡಿದ್ದ ಹಾಗೂ ತುಂಬಾ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆದು ಹಾಳು ಮಾಡಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಕೂಡಲೇ ಮಧ್ಯೆ ಪ್ರವೇಶಿಸಿ, ಮಾಧವನ್‌ ಉದ್ಯಾನದಿಂದ ನಾಗಸಂದ್ರ ವೃತ್ತದವರೆಗೂ ನಡೆಯುತ್ತಿರುವ ಕಾಮಗಾರಿಗೆ ತಡೆ ನೀಡಬೇಕು ಎಂದು ಸಂಘಟನೆಗಳ ಸದಸ್ಯರು ಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

‘ಈ ಪ್ರದೇಶದಲ್ಲಿ ಮೂರು ವಾರಗಳ ಹಿಂದೆ ವೈಟ್‌ ಟಾಪಿಂಗ್ ಕಾಮಗಾರಿಯನ್ನು ಆರಂಭಿಸಲಾಯಿತು. ಏಕಾಏಕಿ ರಸ್ತೆಯನ್ನು ಅಗೆಯಲಾಯಿತು. ಇದರಿಂದ ನೀರಿನ ಪೈಪ್‌ಗಳಿಗೂ ಹಾನಿಯುಂಟಾಯಿತು. ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಈ ಸಂಬಂಧ ಕರೆಮಾಡಿ ತಿಳಿಸಿದೆ’ ಎಂದು ಜಯನಗರದ ನಿವಾಸಿ ಎ.ಸಿ.ಚಂದ್ರಶೇಖರ ತಿಳಿಸಿದರು.

‘ಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಗಳನ್ನು ಸ್ಥಳಾಂತರಿಸಿಲ್ಲ. ಕೆಲಸ ಮಾಡುವವರಿಗೆ ಪೈಪ್‌ ಇರುವುದೂ ಗೊತ್ತಾಗುವುದಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಈಜೀಪುರ, ನಿಮ್ಹಾನ್ಸ್‌, ಜಯನಗರ, ಸಿದ್ದಾಪುರ ಹಾಗೂ ಡಬಲ್‌ ರಸ್ತೆ ಭಾಗಗಳ ಪೈಪ್‌ಗಳು ಸುಮಾರು 30 ವರ್ಷಗಳಷ್ಟು ಹಳೆಯವು. ಪೈಪ್‌ಗಳಿಗೆ ಹಾನಿಯಾದರೆ, ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಇದರಿಂದ ಲಕ್ಷಾಂತರ ಜನ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಜಯನಗರ 2ನೇ ಹಂತದ ನಿವಾಸಿ ಕಿರಣ್‌ ಕುಮಾರ್ ಹೇಳಿದರು.

‘ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡುವಾಗ ಟಾರು ತೆಗೆಯಬೇಕು. ಆದರೆ, ಪಾಲಿಕೆಯವರು ಟಾರಿನ ಮೇಲೆಯೇ ಹೊಸ ರಸ್ತೆ ನಿರ್ಮಿಸುತ್ತಾರೆ. ಈಗಾಗಲೇ ರಸ್ತೆ 2 ಅಡಿ ಎತ್ತರವಿದೆ. ವೈಟ್‌ ಟಾಪಿಂಗ್‌ನಿಂದ ಅದು ಇನ್ನೂ ಎತ್ತರವಾಗಲಿದೆ. ಮಳೆ ಬಂದಾಗ ಮನೆಯೊಳಗೆ ನೀರು ಬರುತ್ತದೆ’ ಎಂದು ಜಯನಗರದ ಆರ್‌.ವಿ.ನಾಗರಾಜ ತಿಳಿಸಿದರು.

‘ಮನೆಮುಂದೆ 10 ಅಡಿ ಎತ್ತರದ ಕಾಂಪೌಂಡ್‌ ಕಟ್ಟಲಾಗಿತ್ತು. ವೈಟ್‌ ಟಾಪಿಂಗ್‌ನಿಂದಾಗಿ ಅದು ಈಗ 2 ಅಡಿ ಮಾತ್ರ ಇದೆ. ಮನೆ ಹತ್ತಿರ ರಸ್ತೆ ಅಗೆಯುವಾಗ ನೀರಿನ ಪೈಪ್‌ಗೆ ಹಾನಿ ಮಾಡಲಾಗಿತ್ತು. ದೂರು ನೀಡಿದ ಸ್ವಲ್ಪ ದಿನಗಳ ಬಳಿಕ ಅದನ್ನು ಸರಿಪಡಿಸಲಾಯಿತು. ಪಾಲಿಕೆ ಈ ಕಾಮಗಾರಿಯನ್ನು ಕೈಬಿಟ್ಟು ಕೆರೆಗಳನ್ನು ಅಭಿವೃದ್ಧಿಪಡಿಸಲಿ’ ಎಂದು ಇಲ್ಲಿನ ನಿವಾಸಿ ಜಿ.ಎಸ್‌.ಭಾಸ್ಕರ್‌ ಒತ್ತಾಯಿಸಿದರು.

‘ವೈಟ್‌ ಟಾಪಿಂಗ್‌ನಿಂದ ಹಳೆ ಕಾಲದ ಚರಂಡಿ ಪೈಪ್‌ಗಳು ಹಾಳಾಗುತ್ತವೆ. ಇದರಿಂದ ವ್ಯಾಪಾರವೂ ಕಡಿಮೆಯಾಗಿದೆ’ ಎಂದು ವ್ಯಾಪಾರಿ ಎಸ್‌.ಮಂಜುನಾಥ ತಿಳಿಸಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಹೈಕೋರ್ಟ್‌, ಬಿಬಿಎಂಪಿ ಆಯುಕ್ತರಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಿದೆ.

ಸಾರ್ವಜನಿಕ ಸಮಾಲೋಚನೆ ಯಾಕಿಲ್ಲ?

‘‌ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿದೆ. ರಸ್ತೆ ಕೆಳಗೆ ಪೈಪ್‌ಗಳಿರುವ ಕುರಿತು ಅಗೆದ ಮೇಲೆ ಪ್ರಾಧಿಕಾರಕ್ಕೆ ಗೊತ್ತಾಗಿದೆ. ಯೋಜನೆ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ಯಾಕೆ ನಡೆಸಲಿಲ್ಲ’ ಎಂದು ಸಂಘಟನೆಗಳ ಪರ ವಕೀಲ ಎಸ್‌.ಶೇತ್ಕರ್‌ ಪ್ರಶ್ನಿಸಿದ್ದಾರೆ.

14 ಮರಗಳಿಗೆ ಕೊಡಲಿ

ಯೋಜನೆಯಿಂದ 14 ಹಸಿರು ಮರಗಳಿಗೆ ಕೊಡಲಿ ಬೀಳಲಿದೆ ಎನ್ನುವುದು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲು ಮುಖ್ಯ ಕಾರಣ.

ಪ್ರಕರಣದ ಸದ್ಯದ ಸ್ಥಿತಿ

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !