ದಾವಣಗೆರೆಯ ಯಲೋದಹಳ್ಳಿ ಕೆರೆ ನಿರ್ಮಾಣ ಆರಂಭ

ಶುಕ್ರವಾರ, ಜೂಲೈ 19, 2019
23 °C
₹ 75 ಲಕ್ಷ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿ

ದಾವಣಗೆರೆಯ ಯಲೋದಹಳ್ಳಿ ಕೆರೆ ನಿರ್ಮಾಣ ಆರಂಭ

Published:
Updated:
Prajavani

ಬಸವಾಪಟ್ಟಣ: ಸಮೀಪದ ಯಲೋದಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆ ₹ 75 ಲಕ್ಷ ವೆಚ್ಚದಲ್ಲಿ ಕೆರೆಯೊಂದನ್ನು ನಿರ್ಮಿಸುತ್ತಿದೆ.

ಮಾಯಕೊಂಡ ಕ್ಷೇತ್ರದ ಹಿಂದಿನ ಶಾಸಕರಾಗಿದ್ದ ಕೆ.ಶಿವಮೂರ್ತಿ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ಯಲೋದಹಳ್ಳಿ ಗ್ರಾಮದಲ್ಲಿ ಸರ್ವೆ ನಡೆಸಿ, ಕೆರೆ ನಿರ್ಮಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರದ ಮಂಜೂರಾತಿ ದೊರೆತು ಈಗ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹತ್ತು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಈ ಕಾಮಗಾರಿಯಲ್ಲಿ ಯಲೋದಹಳ್ಳಿಯ ಇಬ್ಬರು ರೈತರ ಕೊಡುಗೆಯೂ ಇದೆ. ತಾವು ಉಳುಮೆ ಮಾಡುತ್ತಿದ್ದ 2.20 ಎಕರೆ ಜಮೀನನ್ನು ಎಂ.ಜಿ.ಭುವನೇಶ್ವರಪ್ಪ ಮತ್ತು 1.22 ಎಕರೆ ಜಮೀನನ್ನು ಎಂ.ಎಲ್‌ ಗೌಡ ಅವರು ಇದಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ಪ್ರತಿ ಎಕರೆಗೆ ₹ 10 ಲಕ್ಷ ಪ್ರೋತ್ಸಾಹಧನವನ್ನು ನಿಗದಿ ಪಡಿಸಿದ್ದು, ಸರ್ಕಾರ ಪ್ರತಿ ಎಕರೆಗೆ ₹ 8 ಲಕ್ಷ ನೀಡುತ್ತಿದೆ. ಉಳಿದ ಹಣವನ್ನು ಗ್ರಾಮದ ರೈತರು ವಂತಿಗೆಯಾಗಿ ನೀಡಲಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಕೆರೆ ಕಾಮಗಾರಿ ಆರಂಭವಾಗಿದೆ. ಮಳೆಗಾಲದಲ್ಲಿ ಕೆರೆ ತುಂಬುವ ಸಾಧ್ಯತೆ ಇದೆ.

ಉಳಿದಂತೆ ಗ್ರಾಮದ ಈಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು ಆರು ಎಕರೆ ಭೂಮಿಯನ್ನು ಈ ಕೆರೆಗಾಗಿ ಪಡೆಯಲಾಗಿದೆ. ಗ್ರಾಮಸ್ಥರು, ಜಮೀನು ದಾನಿಗಳು, ಅಧಿಕಾರಿಗಳ ಮಧ್ಯೆ ಕೊಂಡಿಯಂತೆ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಕೆರೆ 6 ಮೀಟರ್‌ ಎತ್ತರ, 236 ಮೀ ಉದ್ದ ಮತ್ತು 1.70 ಹೆಕ್ಟೇರ್‌ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಗುಡ್ಡದ ಬದಿಗೆ ಕೆರೆ ನಿರ್ಮಾಣವಾಗುತ್ತಿರುವುದರಿಂದ ಮಳೆ ನೀರು ಸಾಕಷ್ಟು ಹರಿದು ಬಂದು ಕೆರೆ ತುಂಬುವ ಸಾಧ್ಯತೆಗಳಿವೆ. ಗ್ರಾಮದ ಮುಖಂಡ ಎಸ್‌.ಜಿ.ಚನ್ನನಗೌಡ, ಬಸವಂತಪ್ಪ, ರುದ್ರಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್‌.ಆರ್‌.ರವಿಕುಮಾರ್‌, ಕಾಳೇಶ್‌, ಈ ಕೆರೆ ನಿರ್ಮಾಣ ಕಾರ್ಯಕ್ಕೆ ಸಂಪೂರ್ಣ ಶ್ರಮ ವಹಿಸಿದ್ದಾರೆ’ ಎಂದು ತೇಜಸ್ವಿ ಪಟೇಲ್‌ ತಿಳಿಸಿದರು.

‘ಯಲೋದಹಳ್ಳಿ ಗ್ರಾಮದಲ್ಲಿ ಕೆರೆ ಇಲ್ಲದೇ ಜನ–ದನ ಕರುಗಳಿಗೂ ನೀರಿಗೆ ತೊಂದರೆಯಾಗಿದೆ. ಇಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಅದನ್ನು ಹೆಚ್ಚಿಸಲು ಪೂರಕವಾಗಿ ಮತ್ತು ರೈತರ ಹಿತ ದೃಷ್ಟಿಯಿಂದ ಈ ಕೆರೆಯನ್ನು ನಿರ್ಮಿಸುವ ಬಗ್ಗೆ ನಿರ್ಧರಿಸಲಾಯಿತು. ಸರ್ಕಾರದ ಮೇಲೆ ಒತ್ತಡ ಹಾಕಿ ಹಣ ಮಂಜೂರು ಮಾಡಿಸಿದ್ದೇನೆ’ ಎಂದು ಮಾಜಿ ಶಾಸಕ ಕೆ.ಶಿವಮೂರ್ತಿ ಹೇಳಿದರು.

**

ಕೇರಿಗೊಂದು ದೇವಸ್ಥಾನ ನಿರ್ಮಿಸುವಲ್ಲಿ ಜನ ಆಸಕ್ತಿ ತೋರುತ್ತಾರೆ. ಆದರೆ ಗ್ರಾಮಕ್ಕೆ ಒಂದು ದೇವಸ್ಥಾನ, ಮೂರ್ನಾಲ್ಕು ಕೆರೆಗಳು ಇರಬೇಕು ಎಂಬುದು ನನ್ನ ಪ್ರತಿಪಾದನೆ
- ತೇಜಸ್ವಿ ಪಟೇಲ್‌, ಜಿಲ್ಲಾ ಪಂಚಾಯಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !