ಸೋಮವಾರ, ಸೆಪ್ಟೆಂಬರ್ 28, 2020
24 °C

ಚೀನಾದ 47 ಆ್ಯಪ್‌ಗಳ ನಿಷೇಧ: ಭಾರತದ ಕ್ರಮಕ್ಕೆ ಚೀನಾ ರಾಯಭಾರ ಕಚೇರಿ ವಕ್ತಾರರ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ ಭಾರತವು ಮತ್ತೊಂದು ಗುಂಪಿನ ಚೀನಾದ 47 ಆ್ಯಪ್‌ಗಳ ಮೇಲೆ ನಿಷೇಧ ಹೇರಿರುವ ಬೆನ್ನಲ್ಲೇ ಭಾರತದ ಚೀನಾ ರಾಯಭಾರಿ ಕಚೇರಿಯು ಭಾರತದ ಈ ಕ್ರಮವನ್ನು ತೀವ್ರವಾಗಿ ಟೀಕಿಸಿದೆ. 

ಚೀನಾ ವ್ಯವಹಾರ ಸೇರಿದಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕಾಗಿರುವುದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

ಮಾರುಕಟ್ಟೆ ತತ್ವಗಳಿಗೆ ಅನುಗುಣವಾಗಿ ಚೀನಾದ ವ್ಯವಹಾರಗಳು ಸೇರಿದಂತೆ ಭಾರತದ ಅಂತರರಾಷ್ಟ್ರೀಯ ಹೂಡಿಕೆದಾರರ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯು ಭಾರತ ಸರ್ಕಾರದ್ದೇ ಆಗಿದೆ. ಚೀನಾ ಮತ್ತು ಭಾರತದ ನಡುವಿನ ಪ್ರಾಯೋಗಿಕ ಸಹಕಾರವು ಉಭಯ ದೇಶಗಳಿಗೂ  ಪ್ರಯೋಜನಕಾರಿಯಾಗಿದೆ. ಅಂತಹ ಪರಸ್ಪರ ಸಹಕಾರದಲ್ಲಿ ಉದ್ದೇಶಪೂರ್ವಕ ಹಸ್ತಕ್ಷೇಪವು ಭಾರತದ ಕಡೆಯ ಹಿತಾಸಕ್ತಿಗಳಿಗೂ ಧಕ್ಕೆ ತರುತ್ತದೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಹೇಳಿದ್ದಾರೆ.

ಚೀನಾದ ಕಂಪನಿಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಚೀನಾ ಸಹ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಾಂಗ್ ತಿಳಿಸಿದ್ದಾರೆ.

ಚೀನಾದ 59 ಆ್ಯಪ್‌ಗಳನ್ನು ಮೊದಲ ಹಂತದಲ್ಲಿ ನಿಷೇಧಿಸಿದ ಒಂದು ತಿಂಗಳ ನಂತರ ಭಾರತ ಮತ್ತೊಂದು ಗುಂಪಿನ 47 ಆ್ಯಪ್‌ಗಳನ್ನು ನಿಷೇಧಿಸಿದೆ. ಅವುಗಳಲ್ಲಿ ಹೆಚ್ಚಿನವು ಜೂನ್‌ನಲ್ಲಿ ನಿಷೇಧಿಸಿದ್ದ ಅಪ್ಲಿಕೇಷನ್‌ಗಳ ತದ್ರೂಪಗಳಾಗಿವೆ. ಈ 47 ಆ್ಯಪ್‌ಗಳ ಹೆಸರನ್ನು ಸರ್ಕಾರ ತಕ್ಷಣಕ್ಕೆ ಬಹಿರಂಗಪಡಿಸದಿದ್ದರೂ, ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ ಇಟ್ ಲೈಟ್, ಬಿಗೊ ಲೈವ್ ಲೈಟ್ ಕೂಡ ಕೂಡಾ ಈ ಪಟ್ಟಿಯಲ್ಲಿವೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮೂಲಗಳ ಪ್ರಕಾರ, ಬಳಕೆದಾರರ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತಾ ನೀತಿ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ಭಾರತ 250ಕ್ಕೂ ಹೆಚ್ಚು ಚೀನಾದ ಆ್ಯಪ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನಪ್ರಿಯ ಟೆನ್ಸೆಂಟ್‌ನ ಗೇಮಿಂಗ್ ಅಪ್ಲಿಕೇಶನ್ ಪಬ್‌ಜಿ ಮತ್ತು ಚೀನಾದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾದ ಅಲಿಬಾಬಾಕ್ಕೆ ಲಿಂಕ್ ಮಾಡಲಾದ ಅಪ್ಲಿಕೇಶನ್‌ಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಒಂದು ವೇಳೆ PUBG ಅನ್ನು ನಿಷೇಧಿಸಿದರೆ ಇದು ಚೀನಾದ ಟೆಕ್ ಸಂಸ್ಥೆಗಳಿಗೆ ದೊಡ್ಡ ಹೊಡೆತವಾಗಿರುತ್ತದೆ. ಏಕೆಂದರೆ ಈ ಗೇಮಿಂಗ್ ಅಪ್ಲಿಕೇಶನ್‌ ಅನ್ನು ಭಾರತದಲ್ಲಿ ಹೆಚ್ಚಾಗಿ ಡೌನ್‌ಲೋಡ್ ಮಾಡಲಾಗಿದೆ.

ಇತರೆ ದೇಶಗಳಲ್ಲಿ ಕಾರ್ಯಾಚರಿಸುವಾಗ ಚೀನಾದ ಉದ್ಯಮಗಳು ಅಂತರರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕೆಂದು ಚೀನಾದ ಸರ್ಕಾರವು ಸತತವಾಗಿ ಹೇಳುತ್ತಲೇ ಬಂದಿದೆ ಎಂಬುದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ರಾಂಗ್ ತಿಳಿಸಿದ್ದಾರೆ.

ವಾಟ್ಸಾಪ್‌ಗೆ ಸಮನಾದ ಚೀನಾದ ವೀಚಾಟ್, ಇತ್ತೀಚೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದ ಭಾರತೀಯ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವುದನ್ನು ನಿಲ್ಲಿಸುವಂತೆ ಕೇಳಲಾಗಿದೆ ಎನ್ನವ ವರದಿ ಕುರಿತಂತೆ ಪ್ರತಿಕ್ರಿಯಿಸಿದ ರಾಂಗ್, ಈ ಸಂಬಂಧಿತ ವರದಿಗಳನ್ನು ನಾವು ಗಮನಿಸಿದ್ದೇವೆ. ಜೂನ್ 29 ರಂದು ಭಾರತ ಸರ್ಕಾರವು ಚೀನಾದ ಹಿನ್ನೆಲೆ ಹೊಂದಿರುವ ವೀಚಾಟ್‌ ಸೇರಿದಂತೆ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಇದು ಚೀನಾದ ಕಂಪನಿಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ತೀವ್ರವಾಗಿ ಹಾನಿಗೊಳಿಸಿದೆ. ಈ ಕುರಿತು ಚೀನಾದ ಕಡೆಯವರು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಭಾರತವನ್ನು ಕೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು