ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಇಂಧನ ಬಳಕೆ ನಿಯಂತ್ರಣಕ್ಕೆ ಹಸಿರುಪೀಠ ಸೂಚನೆ

Last Updated 17 ಜುಲೈ 2020, 11:10 IST
ಅಕ್ಷರ ಗಾತ್ರ

ನವದೆಹಲಿ: ‘ತೈಲ ಸಂಸ್ಕರಣಾ ಘಟಕಗಳಿಂದ ತ್ಯಾಜ್ಯ ರೂಪದಲ್ಲಿ ಬರುವ ಪೆಟ್‌ಕೋಕ್‌, ಘನ ಇಂಗಾಲ, ಮತ್ತು ಕುಲುಮೆ ಎಣ್ಣೆಯನ್ನು, ಉದ್ದಿಮೆಗಳಲ್ಲಿ ಇಂಧನವಾಗಿ ಬಳಸುವುದರ ಮೇಲೆ ವಿಧಿಸಿರುವ ನಿರ್ಬಂಧವು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು’ ಎಂದು ರಾಷ್ಟ್ರೀಯ ಹಸಿರು ಪೀಠವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶುಕ್ರವಾರ ನಿರ್ದೇಶನ ನೀಡಿದೆ.

ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ವರದಿಯಲ್ಲಿ ಕಂಡುಬಂದಿದ್ದರಿಂದ, ಪೀಠದ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಅವರು ಈ ನಿರ್ದೇಶನ ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ಪ್ರದೇಶದ ಉದ್ದಿಮೆಗಳಲ್ಲಿ ಈ ವಸ್ತುಗಳನ್ನು ಇಂಧನವಾಗಿ ಬಳಸುವುದರ ಮೇಲೆ ನಿಷೇಧ ವಿಧಿಸಿ ಸುಪ್ರೀಂ ಕೋರ್ಟ್‌ ಹಿಂದೆ ಆದೇಶ ನೀಡಿದ್ದಲ್ಲದೆ, ಇತರ ರಾಜ್ಯಗಳಲ್ಲೂ ಇದನ್ನು ಜಾರಿಗೆ ತರುವಂತೆ ಸೂಚಿಸಿತ್ತು.

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಅಧಿಕಾರವನ್ನು ಬಳಸಿ, ಅಗತ್ಯ ನಿರ್ದೇಶನಗಳನ್ನು ನೀಡುವ ಮೂಲಕ ಈ ಆದೇಶವನ್ನು ಜಾರಿಗೆ ತರಬೇಕು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸಬೇಕು’ ಎಂದು ಪೀಠ ಹೇಳಿದೆ. 2021ರ ಜನವರಿ 25ಕ್ಕೆ ಮುಂದಿನ ವಿಚಾರಣೆಯನ್ನು ನಡೆಸುವುದಾಗಿಯೂ ತಿಳಿಸಿದೆ.

ಈ ಉತ್ಪನ್ನಗಳನ್ನು ದಹಿಸುವುದರಿಂದ ಸಲ್ಫರ್‌ ಡಯಾಕ್ಸೈಡ್‌ ಹಾಗೂ ಅತಿಸೂಕ್ಷ್ಮ ಕಣಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಇವು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಸುಮಿತ್‌ ಕುಮಾರ್‌ ಹಾಗೂ ಅಮರ್‌ಜೀತ್‌ ಕುಮಾರ್‌ ಎಂಬುವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಪೀಠ ಈ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT