ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ಬಾಗಿಲು ತೆರೆಯಲಿದೆ ತಾಜ್‌ ಮಹಲ್‌: ನಿತ್ಯ 5,000 ಜನರಿಗೆ ಅವಕಾಶ

Last Updated 5 ಜುಲೈ 2020, 9:25 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನಿಂದಾಗಿ ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ವಿಶ್ವ ವಿಖ್ಯಾತ ತಾಜ್‌ ಮಹಲ್‌ ಪ್ರವಾಸಿಗರಿಗೆ ಮತ್ತೆ ತೆರೆದುಕೊಳ್ಳಲಿದೆ. 17ನೇ ಶತಮಾನದ ಪಾರಂಪರಿಕ ಸ್ಮಾರಕ ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು ಹಾಗೂ ಆಕರ್ಷಣೀಯ ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಮುಟ್ಟುವಂತಿಲ್ಲ.

ರಜಾ ದಿನಗಳಲ್ಲಿ ದಿನಕ್ಕೆ ಸುಮಾರು 80,000 ಪ್ರವಾಸಿಗರು ತಾಜ್‌ ಮಹಲ್‌ಗೆ ಭೇಟಿ ನೀಡುತ್ತಿದ್ದರು. ಇದೀಗ ನಿತ್ಯ ಗರಿಷ್ಠ 5,000 ಪ್ರವಾಸಿಗರಿಗೆ ಪ್ರವೇಶ ಅವಕಾಶ ನೀಡಲಾಗುತ್ತದೆ. ಎರಡು ಗುಂಪುಗಳಾಗಿ ವಿಂಗಡಿಸಿ ಪರಸ್ಪರ ಅಂತರ ಕಾಯ್ದುಕೊಂಡು ವೀಕ್ಷಿಸುವಂತೆ ಕ್ರಮವಹಿಸಲಾಗುತ್ತಿದೆ. 'ಎಲ್ಲ ಪಾರಂಪರಿಕ ಸ್ಮಾರಕ ಸ್ಥಳಗಳಲ್ಲಿ ಸೋಂಕು ನಿವಾರಕ ಸಿಂಪಡಣೆ, ಅಂತರ ಕಾಯ್ದುಕೊಳ್ಳುವುದು ಹಾಗೂ ಇತರೆ ಆರೋಗ್ಯ ಸಂಬಂಧಿಸಿದ ನಿಯಮಗಳಿಗೆ ಬದ್ಧರಾಗಿರಬೇಕು' ಎಂದು ಪ್ರವಾಸ ಸಚಿವಾಲಯ ಟ್ವೀಟಿಸಿದೆ.

ನವದೆಹಲಿಯ ಐತಿಹಾಸಿಕ ಕೆಂಪು ಕೋಟೆ, ತಾಜ್‌ ಮಹಲ್‌ ಸೇರಿದಂತೆ ದೇಶದ ಇತರೆ ಪ್ರಮುಖ ಸ್ಮಾರಕ ಸ್ಥಳಗಳನ್ನು ಪ್ರವಾಸಿಗರಿಗೆ ತೆರೆಯಲಾಗುತ್ತಿದೆ. ಮೂರು ತಿಂಗಳಲ್ಲಿ ಅತಿ ವೇಗವಾಗಿ ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಸಮಯದಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 24,850 ಹೊಸ ಪ್ರಕರಣಗಳು ಹಾಗೂ ಸೋಂಕಿನಿಂದ 600ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಮಾಡಿದೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕಾರ್ಯ ಚಟುವಟಿಕೆಗಳು ಹಾಗೂ ಉದ್ಯಮಗಳು ಸ್ಥಗಿತಗೊಂಡಿದ್ದು, ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುವ ಪ್ರಯತ್ನದಲ್ಲಿದೆ. ಪ್ರಾದೇಶಿಕ ಸಾರಿಗೆ ಸಂಚಾರ ಈಗಾಗಲೇ ಆರಂಭವಾಗಿದ್ದು ಪ್ರಮುಖ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯನ್ನು ಸರ್ಕಾರ ವ್ಯಕ್ತಪಡಿಸಿದೆ. ಆದರೆ, ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಇನ್ನೂ ಕಾರ್ಯಾರಂಭಿಸಿಲ್ಲ.

ಉತ್ತರ ಪ್ರದೇಶದಲ್ಲೂ ಕೊರೊನಾ ಸೋಂಕು ಪ್ರಮಾಣ ಹೆಚ್ಚಿದ್ದು, ಆಗ್ರಾ ಕೂಡ ಅದರ ಪ್ರಭಾವದಿಂದ ಹೊರತಾಗಿಲ್ಲ. 'ತಾಜ್‌ ಮಹಲ್‌ ಸುತ್ತಲಿನ ಪ್ರದೇಶಗಳು ಕಂಟೈನ್‌ಮೆಂಟ್‌ ವಲಯಗಳಾಗಿವೆ' ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳಾಗಿ ಗುರುತಿಸಲಾಗುತ್ತದೆ. ಅಲ್ಲಿ ಅತ್ಯಗತ್ಯ ವಸ್ತುಗಳು ಮತ್ತು ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ. ತಾಜ್ ಮಹಲ್‌ ಸುತ್ತಮುತ್ತಲಿನ ಅಂಗಡಿ ಹಾಗೂ ಹೊಟೇಲ್‌ಗಳು ಮುಚ್ಚಿವೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT