ಬುಧವಾರ, ಆಗಸ್ಟ್ 4, 2021
21 °C
ರೈಲ್ವೆ ಲೈನ್‌ಗಳಿಗೆ ವಿದ್ಯುತ್ ಪೂರೈಸಲು ಸೌರಶಕ್ತಿಗೆ ಮೊರೆ ಹೋದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆಯಿಂದ ಸೌರಶಕ್ತಿ ಸ್ಥಾವರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈಲ್ವೆ ಓವರ್‌ಹೆಡ್‌ ಲೈನ್‌ಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡಲು ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾದಲ್ಲಿ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದ್ದು, ವಿಶ್ವದಲ್ಲಿ ಈ ರೀತಿಯ ಯೋಜನೆ ಕೈಗೊಂಡಿರುವ ದೇಶಗಳಲ್ಲಿ ಭಾರತ ಪ್ರಥಮವಾಗಿದೆ.

‘ವಿದ್ಯುತ್ ಲೋಕೊಮೋಟಿವ್ ವ್ಯವಸ್ಥೆಯ ಮೂಲಕ ಸಂಚರಿಸುವ ರೈಲುಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡುವ ಈ ರೀತಿಯ ಯೋಜನೆ ಇದೇ ಮೊದಲ ಬಾರಿಗೆ ಆಗಿದೆ. ಸೌರಶಕ್ತಿಯ ಮೂಲಕ ನೇರವಾಗಿ ಓವರ್‌ಹೆಡ್ ಲೈನ್‌ಗಳಿಗೆ ವಿದ್ಯುತ್ ಸರಬರಾಜು ಆಗುತ್ತದೆ’ ಎಂದು ರೈಲ್ವೆ ಮಂಡಳಿಯ ಆಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ. 

‌‘ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಎಚ್‌ಇಎಲ್‌) ಸಹಯೋಗದಲ್ಲಿ ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾ ಟ್ರ್ಯಾಕ್ಷನ್ ಉಪ ಕೇಂದ್ರದಲ್ಲಿ 1.7 ಮೆಗಾ ವಾಟ್ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದೆ. ಈ ಸ್ಥಾವರವು ವಾರ್ಷಿಕವಾಗಿ 25 ಲಕ್ಷ ಯೂನಿಟ್ ವಿದ್ಯುತ್‌ ಉತ್ಪಾದಿಸುತ್ತದೆ. ಇದರಿಂದಾಗಿ ರೈಲ್ವೆ ಇಲಾಖೆಗೆ ವರ್ಷಕ್ಕೆ ಸುಮಾರು ₹ 1.37 ಕೋಟಿ ಉಳಿತಾಯವಾಗಲಿದೆ’ ಅವರು ಮಾಹಿತಿ ನೀಡಿದ್ದಾರೆ. 

ಬೈನಾದಲ್ಲಿ ಸೌರಶಕ್ತಿ ಸ್ಥಾವರವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ. ರೈಲ್ವೆಯ ಓವರ್‌ಹೆಡ್ ಟ್ರ್ಯಾಕ್ಷನ್ ವ್ಯವಸ್ಥೆಗೆ ನೇರವಾಗಿ ಬೇಕಾಗುವ ಡೈರೆಕ್ಟ್ ಕರೆಂಟ್ (ಡಿಸಿ) ಅನ್ನು ಏಕ ಹಂತದ ಆಲ್ಟರ್‌ನೇಟಿವ್ ಕರೆಂಟ್ (ಎಸಿ) ಆಗಿ ಪರಿವರ್ತಿಸಲು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. 

‘ಸೌರಫಲಕಗಳಿಂದ ಉತ್ಪತ್ತಿಯಾಗುವ ಡಿಸಿ ಶಕ್ತಿಯನ್ನು ರೈಲ್ವೆ ಟ್ರ್ಯಾಕ್ಷನ್ ವ್ಯವಸ್ಥೆಗೆ ಬಳಸಲಾಗುವ ಏಕಹಂತದ 25 ಕೆವಿ ಎಸಿ ವಿದ್ಯುತ್‌ಗೆ ಪರಿವರ್ತಿಸುವುದು ಈ ಯೋಜನೆಯ ಪ್ರಮುಖ ಸವಾಲಾಗಿದೆ. ಸೌರಫಲಕಗಳು ಉತ್ಪಾದಿಸುವ ಡಿಸಿ ಶಕ್ತಿಯನ್ನು ವಿಶಿಷ್ಟ ಇನ್ವರ್ಟರ್‌ಗಳ ಮೂಲಕ ಎಸಿ ಶಕ್ತಿಯನ್ನಾಗಿ ಪರಿವರ್ತಿಸಿ, ಟ್ರಾನ್ಸ್‌ಫಾರ್ಮರ್ ಮೂಲಕ 25 ಕೆವಿ ಎಸಿಗೆ ಅಳವಡಿಸಲಾಗುವುದು. ನಂತರ ಬೈನಾದ ಉಪ ಕೇಂದ್ರಕ್ಕೆ ನೇರವಾಗಿ ವಿದ್ಯುತ್ ನೀಡಿ ಅಲ್ಲಿಂದ ರೈಲುಗಳ ಓಡಾಟಕ್ಕೆ ಬಳಸಲಾಗುವುದು’ ಎಂದು ಯಾದವ್ ವಿವರಿಸಿದ್ದಾರೆ. 

‘ಪ್ರಸ್ತುತ ಒಂದು ಮೆಗಾವಾಟ್‌ ಸೌರ ವಿದ್ಯುತ್ ಸ್ಥಾವರವು ಪರೀಕ್ಷೆಯಲ್ಲಿದೆ. ಇದು 15 ದಿನಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರೈಲ್ವೆಯು ಒಟ್ಟು ಎರಡು ಗಿಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪಿಸಲಿದೆ. ಈ ಯೋಜನೆಗೆ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ. ಇನ್ನು ಎರಡು–ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು