ಭಾನುವಾರ, ಆಗಸ್ಟ್ 1, 2021
27 °C

ಅಯೋಧ್ಯೆ ರಾಮಮಂದಿರ ಭೂಮಿಪೂಜೆ: ವಿಡಿಯೊ ಕಾನ್ಫರೆನ್ಸ್ ಮೂಲಕ ಅಡ್ವಾಣಿ, ಜೋಶಿ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರು ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ಭೇಟಿ ನೀಡುವುದಿಲ್ಲ. ಬದಲಿಗೆ ಉಭಯ ನಾಯಕರು ಆಗಸ್ಟ್ 5 ರ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ದೇಗುಲ ನಿರ್ಮಾಣದ ಮೇಲ್ವಿಚಾರಣೆಗೆ ಸ್ಥಾಪಿಸಲಾಗಿರುವ ಟ್ರಸ್ಟ್‌ ಶನಿವಾರ ಉಭಯ ನಾಯಕರನ್ನು ದೂರವಾಣಿ ಕರೆ ಮೂಲಕ ಸಮಾರಂಭಕ್ಕೆ ಆಹ್ವಾನಿಸಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಸ್ಥಾಪಿಸಲಾಗಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮೂಲಕ ಇಬ್ಬರು ಹಿರಿಯ ಮುಖಂಡರಿಗೆ ಆಹ್ವಾನವನ್ನು ಕಳುಹಿಸಲಾಗುತ್ತಿದೆ. 

ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮವು ಇದೇ ತಿಂಗಳ 5ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿಗದಿಯಾಗಿದೆ. ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಲಾಗಿದ್ದು, 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಅಡಿಪಾಯದ ಕಲ್ಲಿನಂತೆ ಇಟ್ಟು ಶಿಲಾನ್ಯಾಸ ನೆರವೇರಿಸಲಾಗುತ್ತದೆ. 

ಕೊರೊನಾ ವೈರಸ್‌ ಮತ್ತು ಪ್ರಯಾಣ ಮತ್ತು ಒಟ್ಟಿಗೆ ಸೇರುವ ಸಮಾರಂಭಗಳ ಮೇಲೆ ನಿರ್ಭಂದ ವಿರುವ ಕಾರಣಕ್ಕಾಗಿ ಸುಮಾರು 50 ವಿಐಪಿಗಳಿಗೆ ಮಾತ್ರ ಆಹ್ವಾನ ನೀಡಲು ತೀರ್ಮಾನಿಸಿರುವುದಾಗಿ ಟ್ರಸ್ಟ್ ಹೇಳಿದೆ.
ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರಿಗೂ ಶನಿವಾರ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಇವರು ಬಾಬರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. 

ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯಾಜಿ ಜೋಶಿ ಸೇರಿ ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವುದಾಗಿ ದೇವಾಲಯದ ಟ್ರಸ್ಟಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು