ಮಂಗಳವಾರ, ಆಗಸ್ಟ್ 3, 2021
20 °C

ನಟ ಸುಶಾಂತ್‌ ಸಾವಿನ ತನಿಖೆ: ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರ ವಾಕ್ಸಮರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ವಹಿಸಲು ಹಿಂಜರಿಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ನೀಡಿರುವ ಹೇಳಿಕೆಯ ವಿರುದ್ಧ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹರಿಹಾಯ್ದಿದ್ದಾರೆ. 

ಸುಶಾಂತ್‌ ಸಿಂಗ್‌ ಆತ್ಮಹತ್ಯೆಯ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ದಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಅನುಮಾನಿಸುವುದು ಸರಿಯಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ. 

ಕೊರೊನಾ ವಿರುದ್ಧದ ಹೋರಾಟದ ನಡುವೆಯೇ ಮುಂಬೈ ಪೊಲೀಸರು ಸುಶಾಂತ್‌ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

‘ಸುಶಾಂತ್‌ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದು ಬಹುತೇಕ ಸಾರ್ವಜನಿಕರ ಭಾವನೆಯಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಅದನ್ನು ಸಿಬಿಐಗೆ ವಹಿಸಲು ಹಿಂಜರಿಯುತ್ತಿದೆ’ ಎಂದು ದೇವೇಂದ್ರ ಫಡಣವೀಸ್‌ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉದ್ಧವ್‌ ಠಾಕ್ರೆ 'ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಅತ್ಯಂತ ಶೋಚನೀಯ ವಿಷಯ' ಎಂದಿದ್ದಾರೆ. 

'ಮುಂಬೈ ಪೊಲೀಸರು ಅಸಮರ್ಥರಾಗಿಲ್ಲ. ಯಾರಾದರೂ ಯಾವುದೇ ಪುರಾವೆ ಹೊಂದಿದ್ದರೆ ಅದನ್ನು ನಮ್ಮ ಬಳಿಗೆ ತರಬಹುದು. ನಾವು ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ, ಶಿಕ್ಷಿಸುತ್ತೇವೆ. ಮಹಾರಾಷ್ಟ್ರ ಮತ್ತು ಬಿಹಾರದ ನಡುವೆ ಘರ್ಷಣೆ ಸೃಷ್ಟಿಸಲು ದಯವಿಟ್ಟು ಈ ಪ್ರಕರಣವನ್ನು ಬಳಸಿಕೊಳ್ಳಬೇಡಿ' ಎಂದು ಉದ್ಧವ್‌ ತಿಳಿಸಿದ್ದಾರೆ.   

'ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಇತ್ತೀಚೆಗೆ ಹೇಳಿದ್ದರು.

ಸುಶಾಂತ್‌‌ ಆತ್ಮಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 40 ಜನರ ವಿಚಾರಣೆ ನಡೆಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು