ಮಂಗಳವಾರ, ಆಗಸ್ಟ್ 3, 2021
23 °C

ಬಂಗಲೆ ವಾಸ್ತವ್ಯ: ಪುರಿ -ಪ್ರಿಯಾಂಕಾ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‍ ನಾಯಕಿ ಪ್ರಿಯಾಂಕಾ ಗಾಂಧಿ ಸದ್ಯ ವಾಸವಿರುವ ಬಂಗಲೆ ತೆರವಿಗೆ ವಿಧಿಸಿದ್ದ ಗಡುವು ವಿಸ್ತರಿಸಲು ಕೋರಲಾಗಿದೆ ಎಂಬ ವಿಷಯ ಮಂಗಳವಾರ ಪ್ರಿಯಾಂಕಾ ಗಾಂಧಿ ಮತ್ತು ವಸತಿ ಸಚಿವ ಹರ್ ದೀಪ್ ಸಿಂಗ್ ಪುರಿ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಬಂಗಲೆಯನ್ನು ಆಗಸ್ಟ್ 1ರ ಒಳಗೆ ತೆರವುಗೊಳಿಸಬೇಕು ಎಂದು ಸರ್ಕಾರ ಗಡುವು ವಿಧಿಸಿದೆ. 'ಗಡುವು ವಿಸ್ತರಣೆಗೆ ಕೋರಲಾಗಿದೆ ಎಂಬುದು ಸುಳ್ಳು ಸುದ್ದಿ' ಎಂದು ಪ್ರಿಯಾಂಕಾ ತಳ್ಳಿಹಾಕಿದರೆ, 'ಕಾಂಗ್ರೆಸ್‍ನ ಪ್ರಭಾವಿ ನಾಯಕರ' ಕೋರಿಕೆಯಂತೆ ಎರಡು ತಿಂಗಳು ಅವಧಿ ವಿಸ್ತರಿಸಲಾಗಿದೆ ಎಂದು ಹರದೀಪ್‍ ಸಿಂಗ್ ಪುರಿ ಹೇಳಿದ್ದಾರೆ.

ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ನಿಮ್ಮ ಪಕ್ಷದಲ್ಲಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಿ. ಸೌಲಭ್ಯ ಪಡೆಯುವುದು ಮತ್ತು ಬಾಧಿತರಾದಂತೆ ವರ್ತಿಸುವುದು ಒಟ್ಟಿಗೇ ಸಾಗುವುದಿಲ್ಲ ಎಂದು ಪುರಿ ಟ್ವೀಟ್ ಮಾಡಿದ್ದಾರೆ.

'ಕಾಂಗ್ರೆಸ್ ನಾಯಕರು ಜುಲೈ 4ರಂದು ಕರೆ ಮಾಡಿ `35, ಲೋಧಿ ಎಸ್ಟೇಟ್‍' ಬಂಗಲೆಯನ್ನು ಕಾಂಗ್ರೆಸ್ ಸಂಸದರಿಗೆ ಹಂಚಿಕೆ ಮಾಡಬೇಕು. ಇದರಿಂದ ಪ್ರಿಯಾಂಕಾ ಅಲ್ಲಿಯೇ ನೆಲೆಸಬಹುದು ಎಂದು ಕೋರಿದ್ದರು' ಎಂದು ಪುರಿ ತಿಳಿಸಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, `ಅಂಥ ಯಾವುದೇ ಕೋರಿಕೆ ನಾನು ಸಲ್ಲಿಸಿಲ್ಲ. ನೋಟಿಸ್‍ನಲ್ಲಿ ಇರುವಂತೆ ಆಗಸ್ಟ್ 1ರ ಒಳಗೆ ಬಂಗಲೆ ತೆರವು ಮಾಡುತ್ತೇನೆ' ಎಂದು ತಿಳಿಸಿದ್ದಾರೆ. 

ಪ್ರಿಯಾಂಕಾ ಈ ಬಂಗಲೆಯಲ್ಲಿ 1997ರಿಂದ ವಾಸಿಸುತ್ತಿದ್ದಾರೆ. ಎಸ್.ಪಿ.ಜಿ ಭದ್ರತೆ ಹಿಂತೆಗೆದುಕೊಂಡ ಹಿಂದೆಯೇ ಕಳೆದ ತಿಂಗಳಷ್ಟೇ ನೋಟಿಸ್ ಜಾರಿ ಮಾಡಿದ್ದು ಬಂಗಲೆ ತೆರವುಗೊಳಿಸಲು ಸೂಚಿಸಲಾಗಿತ್ತು.

ಪುರಿ ತಮ್ಮ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಉಲ್ಲೇಖಿಸಿಲ್ಲ. ಆದರೆ, ಅವರು ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ.

ಪುರಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ವಕ್ತಾರ ರಣದೀಪ್‍ ಸಿಂಗ್ ಸುರ್ಜೆವಾಲಾ, 'ಈಗ ಆ ಬಂಗಲೆಯನ್ನು ಕಾಂಗ್ರೆಸ್ ಸಂಸದರಿಗೆ ಹಂಚಿಕೆ ಮಾಡಲಾಯಿತೋ ಅಥವಾ ಬಿಜೆಪಿಯ ವಕ್ತಾರರಿಗೋ' ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು