ಶುಕ್ರವಾರ, ಜುಲೈ 30, 2021
28 °C

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಹಿರಿತಲೆಗಾಗಿ ಕಿರಿ ತಲೆ ಬಲಿ

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉಪಮುಖ್ಯಮಂತ್ರಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಚಿನ್‌ ಪೈಲಟ್‌ ಅವರನ್ನು ವಜಾ ಮಾಡುವ ನಿರ್ಧಾರದ ಮೂಲಕ ಭಿನ್ನಮತವನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್‌ ಪಕ್ಷವು ನೀಡಿದೆ. ಆದರೆ, ಪಕ್ಷದಲ್ಲಿನ ಹಳೆಯ ತಲೆಮಾರು ಮತ್ತು ಹೊಸ ತಲೆಮಾರು ನಡುವಣ ಸಂಘರ್ಷವನ್ನು ಈ ನಿರ್ಧಾರವು ಇನ್ನಷ್ಟು ತೀವ್ರಗೊಳಿಸಬಹುದು.

ಪಕ್ಷದಲ್ಲಿ ಕಡೆಗಣನೆಗೆ ಒಳಗಾದವರ ದೊಡ್ಡ ಪಟ್ಟಿಗೆ ಈಗ ಪೈಲಟ್‌ ಅವರೂ ಸೇರಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಪಕ್ಷದಲ್ಲಿ ಪ್ರವರ್ಧಮಾನಕ್ಕೆ ಬಂದ ಹಲವರು, ಪಕ್ಷದಲ್ಲಿನ ಜಿಗುಟು ಶ್ರೇಣೀಕರಣ ವ್ಯವಸ್ಥೆಯನ್ನು ಪ್ರಶ್ನಿಸಿದ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚಿನ ಹಿಡಿತ ಇರುವ ಹಿರಿಯ ನಾಯಕರ ಮಾತಿಗೆ ಪಕ್ಷದಲ್ಲಿ ಹೆಚ್ಚು ಬೆಲೆ ಎಂದು ಯುವ ಮುಖಂಡರು ದೂರುತ್ತಿದ್ದಾರೆ.

ಪಕ್ಷದಲ್ಲಿ ಪ್ರತಿಭೆಗೆ ಬೆಲೆ ಇಲ್ಲ. ರಾಜ್ಯಗಳಲ್ಲಿ ಬಲವಾಗಿ ಬೇರೂರಿರುವ ಹಿರಿಯ ನಾಯಕರ ಹಿತಾಸಕ್ತಿಗೆ ಬೇಕಾದಂತೆ ಕಿರಿಯ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಯುವ ತಲೆಮಾರಿನ ದೂರು.

ಭೂಪೇಂದ್ರ ಹೂಡಾ, ಅಶೋಕ್ ಗೆಹ್ಲೋಟ್‌ ಸದ್ದಿಲ್ಲದೆ ಕೆಲಸ ಮಾಡುತ್ತಾರೆ. ಹೊಸ ತಲೆಮಾರಿನ ಮುಖಂಡರು ಅವರಿಗೆ ಸಾಟಿಯೇ ಅಲ್ಲ. ಅಲ್ಲದೆ, ಯುವ ಮುಖಂಡರು ಆತುರ ತೋರುತ್ತಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

‘ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಪೈಲಟ್‌ ಅವರಿಗೆ ಎಷ್ಟೆಲ್ಲ ಅವಕಾಶಗಳು ಸಿಕ್ಕಿಲ್ಲ... ಅವಕಾಶಗಳನ್ನು ಕೊಟ್ಟಾಗ ಅದನ್ನು ಪಡೆದುಕೊಂಡವರು ಸ್ವಲ್ಪ ಮಟ್ಟಿನ ಶಿಸ್ತು ತೋರಬೇಕು’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಹರಿಯಾಣದಲ್ಲಿ ಯುವ ನಾಯಕ ಅಶೋಕ್‌ ತನ್ವರ್‌ ಅವರು ಐದೂವರೆ ವರ್ಷ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಆದರೆ, ಆಗ ಪಕ್ಷದಲ್ಲಿ ಜೀವಕಳೆಯೇ ಇರಲಿಲ್ಲ. ಹೂಡಾ ಅವರು ಕೊನೆಯ ಕ್ಷಣದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಸ್ಪರ್ಧೆ ಒಡ್ಡುವುದು ಸಾಧ್ಯವಾಯಿತು. ಗಣನೀಯ ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ದೊರೆಯದಂತೆ ಮಾಡುವುದು ಸಾಧ್ಯವಾಯಿತು. ಪಂಜಾಬ್‌ನಲ್ಲಿ ಪ‍ಕ್ಷ ಅಧಿಕಾರಕ್ಕೆ ಬರಲು 78 ವರ್ಷ ವಯಸ್ಸಿನ ಅಮರಿಂದರ್ ಸಿಂಗ್‌ ಕಾರಣವೇ ಹೊರತು ಯುವ ಮುಖಂಡರಾದ ಪ್ರತಾಪ್‌ ಸಿಂಗ್‌ ಬಾಜ್ವಾ ಅಥವಾ ನವಜೋತ್‌ ಸಿಂಗ್‌ ಸಿಧು ಅಲ್ಲ ಎಂದು ಕಾಂಗ್ರೆಸ್‌ನ ಒಂದು ವರ್ಗದ ಮುಖಂಡರು ವಾದಿಸುತ್ತಾರೆ.

ಮಧ್ಯಪ್ರದೇಶ ಕಾಂಗ್ರೆಸ್‌ ಘಟಕಕ್ಕೆ ಯುವ ನಾಯಕ ಅರುಣ್‌ ಯಾದವ್‌ ಅವರನ್ನು 2014ರಲ್ಲಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ, ಪಕ್ಷವು ಅಧಿಕಾರಕ್ಕೆ ಬರುವಂತಹ ಸ್ಥಿತಿ ನಿರ್ಮಾಣವಾದದ್ದು ಹಿರಿಯ ಮುಖಂಡ ಕಮಲನಾಥ್‌ ಅವರು 2018ರಲ್ಲಿ ಅಧ್ಯಕ್ಷರಾದ ಬಳಿಕ. ಜಾರ್ಖಂಡ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದ ಅಜೋಯ್‌ ಕುಮಾರ್‌ ಅವರು ಹಿರಿಯ ಮುಖಂಡರ ವಿರುದ್ಧ ಸಿಡಿದೆದ್ದು 2019ರಲ್ಲಿ ಪಕ್ಷ ಬಿಟ್ಟರು. 2019ರಲ್ಲಿ ಈ ರಾಜ್ಯದ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಜಯ ಗಳಿಸಿತ್ತು. ಆದರೆ, 2020ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಜತೆಗಿನ ಮೈತ್ರಿ ಮೂಲಕ ಅಧಿಕಾರಕ್ಕೆ ಏರಿತು ಎಂದು ಹಿರಿಯ ಮುಖಂಡರಿಗೆ ಮಹತ್ವ ನೀಡಬೇಕು ಎಂದು ಪ್ರತಿಪಾದಿಸುವವರು ಹೇಳುತ್ತಾರೆ.

1998ರಲ್ಲಿ ಮಮತಾ ಬ್ಯಾನರ್ಜಿ ಅವರು ಹಿರಿಯ ಮುಖಂಡರ ವಿರುದ್ಧ ಬಂಡಾಯವೆದ್ದು ಹೊಸ ಪಕ್ಷ ಕಟ್ಟಿದ್ದರು. ಆಂಧ್ರ ಪ್ರದೇಶದಲ್ಲಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರೂ ಇದೇ ಹಾದಿ ತುಳಿದರು. ಈ ಇಬ್ಬರಿಗೂ ದೊಡ್ಡ ಯಶಸ್ಸು ಸಿಕ್ಕಿದೆ. ಆದರೆ, ಜಿ.ಕೆ. ವಾಸನ್‌, ಅಜಿತ್‌ ಜೋಗಿ, ಕುಲದೀಪ್‌ ಬಿಷ್ಣೋಯಿ ಮುಂತಾದ ನಾಯಕರು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಕಟ್ಟಿದರೂ ಯಶಸ್ಸು ದೊರೆಯಲಿಲ್ಲ. ಹಲವರು ಕಾಂಗ್ರೆಸ್‌ಗೆ ಮರಳಿದ್ದಾರೆ. ಪೈಲಟ್‌ ಅವರು ಯಾವ ಹಾದಿಯಲ್ಲಿ ಸಾಗಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು