ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ರಕ್ತದ ಗುಂಪು: ಬಾಲಕಿಯ ಚಿಕಿತ್ಸೆಗೆ ತೊಡಕು

Last Updated 11 ಜುಲೈ 2020, 10:28 IST
ಅಕ್ಷರ ಗಾತ್ರ

ತಿರುವನಂತಪುರ: ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಐದು ವರ್ಷದ ಬಾಲಕಿಯ ಚಿಕಿತ್ಸೆಗೆ ಆಕೆಯ ರಕ್ತದ ಗುಂಪೇ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಾಲಕಿಯ ರಕ್ತವು ‘ಪಿ ನಲ್‌’ (P Null) ಗುಂಪಿನದ್ದಾಗಿದ್ದು, ಅದು ಅಲಭ್ಯವಾಗಿದೆ.

ಗುಜರಾತ್‌ ಮೂಲದ ಸಂತೋಷ್‌ ಎಂಬುವವರ ಪುತ್ರಿ ಅನುಷ್ಕಾ, ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಟ್ಟಡದ ಮೊದಲ ಮಹಡಿಯಿಂದ ಬಿದ್ದಿದ್ದಳು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಆಕೆಗೆ ಗುಜರಾತ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದಾಗಿ ಸ್ವಲ್ಪ ಸಮಯದ ಬಳಿಕ ಆಕೆಯಲ್ಲಿ ಸೋಂಕು ಕಾಣಿಸಿದ್ದರಿಂದ ಚಿಕಿತ್ಸೆಗಾಗಿ ಕೊಚ್ಚಿಯ ಅಮೃತಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ಗೆ (ಎಐಎಂಎಸ್‌) ದಾಖಲಿಸಲಾಯಿತು. ಆಕೆಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಆಕೆಯ ರಕ್ತವು ಅಪರೂಪದ ಗುಂಪಿಗೆ ಸೇರಿದ್ದು ಎಂಬುದು ವೈದ್ಯರ ಗಮನಕ್ಕೆ ಬಂದದ್ದು ಪ್ರಸಕ್ತ, ಆಕೆಯ ಶರೀರದಿಂದಲೇ ರಕ್ತವನ್ನು ತೆಗೆದಿಟ್ಟು, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅದನ್ನೇ ಬಳಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

2018ರಲ್ಲಿ ಮಣಿಪಾಲ ಆಸ್ಪತ್ರೆಗೆ ಬಂದಿದ್ದ ಒಬ್ಬ ರೋಗಿಯಲ್ಲಿ ‘ಪಿ ನಲ್‌’ ಗುಂಪಿನ ರಕ್ತ ಪತ್ತೆಯಾಗಿತ್ತು. ಅದನ್ನು ಬಿಟ್ಟರೆ ಭಾರತದ ಬೇರೆ ಯಾರಲ್ಲೂ ಇದು ಕಂಡುಬಂದಿಲ್ಲ. ಆ ವ್ಯಕ್ತಿಯಿಂದ ರಕ್ತವನ್ನು ಪಡೆಯುವ ಪ್ರಯತ್ನ ನಡೆಸಲಾಯಿತಾದರೂ, ಅವರ ಆರೋಗ್ಯವೂ ಸರಿಯಾಗಿರದ ಕಾರಣ ಅದು ಈಡೇರಲಿಲ್ಲ.

‘ಶೇ 99.9ರಷ್ಟು ಮಂದಿಯ ರಕ್ತದಲ್ಲಿ ‘ಪಿ’ ಪ್ರತಿಜನಕಗಳು ಇರುತ್ತವೆ. ಆದರೆ ಪಿ ನಲ್‌ ಗುಂಪಿನಲ್ಲಿ ಇದು ಇರುವುದಿಲ್ಲ. ಇಂಥವರಿಗೆ ಹೊಂದುವ ರಕ್ತವನ್ನು ಸಂಗ್ರಹಿಸುವುದು ತುಂಬಾ ಕಷ್ಟ. ಅಷ್ಟೇ ಅಲ್ಲ, ಈ ರಕ್ತದ ಮಾದರಿಯನ್ನು ಪರೀಕ್ಷಿಸುವ ವ್ಯವಸ್ಥೆ ಕೇರಳದ ಯಾವ ರಕ್ತನಿಧಿಯಲ್ಲೂ ಇಲ್ಲ’ ಎಂದು ಆಲುವಾದ ಪ್ರಾದೇಶಿಕ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಎನ್‌. ವಿಜಯಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT