ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧಿಯಾ ಹಾದಿ ಹಿಡಿಯಬೇಡಿ: ಸಚಿನ್ ಪೈಲಟ್‌ಗೆ‌ ದಿಗ್ವಿಜಯ್‌ ಸಿಂಗ್ ಸಲಹೆ

Last Updated 19 ಜುಲೈ 2020, 9:45 IST
ಅಕ್ಷರ ಗಾತ್ರ

ಭೋಪಾಲ್‌: ‘ಸಚಿನ್‌ ಪೈಲಟ್‌ಗೆ ಕಾಂಗ್ರೆಸ್‌ನಲ್ಲಿ ಒಳ್ಳೆಯ ಭವಿಷ್ಯವಿದೆ. ಅವರು ಜ್ಯೋತಿರಾದಿತ್ಯ ಸಿಂಧಿಯಾ ಅವರ ಹಾದಿಯನ್ನು ಹಿಡಿಯಬಾರದು’ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಸಲಹೆ ನೀಡಿದ್ದಾರೆ.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಾಜಸ್ಥಾನದ ರಾಜಕೀಯ ಅಸ್ಥಿರತೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ ಸಿಂಗ್‌, ‘ಬೇರೆ ಪಕ್ಷದಿಂದ ಬಿಜೆಪಿಗೆ ಹೋಗಿರುವ ಯಾರೂ ಏಳಿಗೆ ಸಾಧಿಸಿಲ್ಲ. ಜ್ಯೋತಿರಾದಿತ್ಯ ಮಾಡಿರುವ ತಪ್ಪನ್ನೇ ನೀವೂ ಮಾಡಬೇಡಿ. ನಿಮಗಿನ್ನೂ ವಯಸ್ಸಿದೆ. ಅಶೋಕ್‌ ಗೆಹ್ಲೋಟ್‌‌ ಅವರಿಂದ ನಿಮಗೆ ಅನ್ಯಾಯ ಆಗಿರಬಹುದು. ಆದರೆ, ಆ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು’ ಎಂದು ಸಚಿನ್‌ ಅವರಿಗೆ ಸಲಹೆ ನೀಡಿದ್ದಾರೆ.

‘ಸಚಿನ್‌ ನನ್ನ ಮಗನಿದ್ದಂತೆ. ನಾವಿಬ್ಬರೂ ಪರಸ್ಪರರನ್ನು ಗೌರವಿಸುತ್ತೇವೆ. ಅವರನ್ನು ಸಂಪರ್ಕಿಸಲು ನಾನು ಪ್ರಯತ್ನಿಸಿದ್ದೆ. ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಅಷ್ಟೇ ಅಲ್ಲ ನನ್ನ ಮೆಸೇಜ್‌ಗಳಿಗೂ ಪ್ರತಿಕ್ರಿಯೆ ನೀಡಲಿಲ್ಲ. ಹಿಂದೆಲ್ಲ ನನ್ನ ಕರೆ, ಮೆಸೇಜ್‌ಗೆ ಶೀಘ್ರ ಪ್ರತಿಕ್ರಿಯೆ ನೀಡುತ್ತಿದ್ದರು. ಮಹತ್ವಾಕಾಂಕ್ಷಿಯಾಗಿರುವುದು ತಪ್ಪಲ್ಲ. ಮಹತ್ವಾಕಾಂಕ್ಷೆ ಇಲ್ಲದೆ ಜೀವನದಲ್ಲಿ ಮುಂದೆ ಹೋಗುವುದು ಅಸಾಧ್ಯ. ಆದರೆ ಪ್ರತಿಯೊಬ್ಬನೂ ತನ್ನ ಸಂಘಟನೆ, ಅದರ ಸಿದ್ಧಾಂತ ಹಾಗೂ ರಾಷ್ಟ್ರಕ್ಕೆ ಬದ್ಧನಾಗಿರಬೇಕು’ ಎಂದು ಸಿಂಗ್‌ ಹೇಳಿದ್ದಾರೆ.

ಸಚಿನ್‌ ಹೊಸ ಪಕ್ಷ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅದರ ಅಗತ್ಯವೇನಿದೆ? 26ನೇ ವಯಸ್ಸಿನಲ್ಲಿ ಅವರನ್ನು ಸಂಸದರನ್ನಾಗಿಸಲಾಗಿತ್ತು. 32ನೇ ವಯಸ್ಸಿನಲ್ಲಿ ಕೇಂದ್ರದ ಸಚಿವರಾಗಿದ್ದರು. 34ನೇ ವಯಸ್ಸಿನಲ್ಲಿ ಕಾಂಗ್ರೆಸ್‌ನ ರಾಜ್ಯಘಟಕದ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾದರು. ಅವರಿಗೆ ಇನ್ನೇನು ಬೇಕು ಎಂದು ಸಿಂಗ್‌ ಪ್ರಶ್ನಿಸಿದ್ದಾರೆ.

ಆಗಿರುವುದನ್ನೆಲ್ಲಾ ಮರೆತು, ಮರಳಿ ಬಂದು ಪಕ್ಷವನ್ನು ಹೇಗೆ ಬಲಪಡಿಸಬಹುದು ಎಂಬ ಬಗ್ಗೆ ಸಚಿನ್‌ ಚಿಂತಿಸಬೇಕು ಎಂದು ದಿಗ್ವಿಜಯ್‌ ಸಿಂಗ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT