ಶುಕ್ರವಾರ, ಜುಲೈ 30, 2021
27 °C

ಕೇರಳ| ಹೆಚ್ಚುತ್ತಿದೆ ಮಕ್ಕಳ ಆತ್ಮಹತ್ಯೆ; ಪರಿಹಾರ ರೂಪಿಸಲು 'ನಗು' ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಲಾಕ್‌ಡೌನ್‌ ದಿನಗಳಲ್ಲಿ ಕೇರಳದಲ್ಲಿ ಮಕ್ಕಳ ಆತ್ಮಹತ್ಯೆ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಆತಂಕಕ್ಕೀಡು ಮಾಡಿದೆ.

‘ಮಾರ್ಚ್ 25ರಿಂದ ಇದುವರೆಗೆ ರಾಜ್ಯದಲ್ಲಿ ಒಟ್ಟು 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ, ಇಷ್ಟವಿಲ್ಲದ ಸಂಗತಿಗಳಿಗೆ ಪೋಷಕರು ಬಲವಂತ ಮಾಡುವುದು, ಪೋಷಕರೊಂದಿಗೆ ಭಿನ್ನಾಭಿಪ್ರಾಯ ಮತ್ತು ತಂದೆಯ ಮದ್ಯಪಾನದಂತಹ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿವೆ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. 

ಸರ್ಕಾರ ಮಕ್ಕಳ ಸಮಸ್ಯೆಗಳಿಗಾಗಿ ಆರಂಭಿಸಿರುವ ಆನ್‌ಲೈನ್ ಸಮಾಲೋಚನಾ ಕೇಂದ್ರಕ್ಕೆ ಪೋಷಕರಿಂದ ಕರೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ವರ್ಷ ಸುಮಾರು 9,500ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲಾಗಿದೆ. 

‘ಲಾಕ್‌ಡೌನ್ ಇದ್ದುದ್ದರಿಂದ ಅನೇಕ ಪೋಷಕರಿಗೆ ಕೌನ್ಸೆಲಿಂಗ್‌ಗೆ ಮಕ್ಕಳನ್ನು ಕರೆದುಕೊಂಡು ಬರಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಶಾಲೆಗಳು ಮುಚ್ಚಿರುವ ಸಂಗತಿಯೇ ಮಕ್ಕಳಲ್ಲಿ ಖಿನ್ನತೆ ಮತ್ತು ಒತ್ತಡಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಹದಿಹರೆಯದ ಗುಂಪಿನ ಮಕ್ಕಳಿಗೆ ತಮ್ಮ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜಿತವಾಗಿರುವ ಎಸ್‌ಎಟಿ ಆಸ್ಪತ್ರೆಯ ಮಕ್ಕಳ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್. ಜಯಪ್ರಕಾಶ್ ವಿಶ್ಲೇಷಿಸುತ್ತಾರೆ.

ಅಷ್ಟೇ ಅಲ್ಲ, ಕೋವಿಡ್‌–19 ಕಾರಣಕ್ಕಾಗಿ ಭವಿಷ್ಯದ ಬಗೆಗಿನ ಅನಿಶ್ಚಿತತೆಯಿಂದಾಗಿ ಪೋಷಕರೂ ಒತ್ತಡಕ್ಕೊಳಗಾಗುತ್ತಿದ್ದಾರೆ. ಅನೇಕ ಪೋಷಕರು ಮಕ್ಕಳೊಂದಿಗೆ ಸರಿಯಾಗಿ ಸಮಯ ವಿನಿಯೋಗಿಸುತ್ತಿಲ್ಲ. ಹಾಗಾಗಿ, ಅನೇಕ ಮಕ್ಕಳು ಒಂಟಿತನದಿಂದ ಬಳಲುತ್ತಿದ್ದಾರೆ. 

ಈ ನಡುವೆ ಕೇರಳ ಸರ್ಕಾರವು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ‘ಚಿರಿ’ (ನಗು) ಅನ್ನುವ ಯೋಜನೆಗೆ ಚಾಲನೆ ನೀಡಿದೆ. ವಿದ್ಯಾರ್ಥಿ ಪೊಲೀಸ್ ಕೆಡೆಟ್ ಈ ಯೋಜನೆಯ ಭಾಗವಾಗಿದ್ದು, ಶಾಲಾ ಮಕ್ಕಳು, ಇಲ್ಲಿ ಇತರ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ. ಈ ಸಂಬಂಧ ಅಧ್ಯಯನ ನಡೆಸಲು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಮಹಾ ನಿರ್ದೇಶಕರಾದ ಆರ್. ಶ್ರೀಲೇಖಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನೂ ರಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು