ಶನಿವಾರ, ಜನವರಿ 16, 2021
21 °C

ಕಾಸರಗೋಡು: ಟಾಟಾದಿಂದ 540 ಹಾಸಿಗೆಗಳ ಕೋವಿಡ್ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕಾಸರಗೋಡಿನಲ್ಲಿ ಆರೋಗ್ಯ ಸೇವಾ ಕ್ಷೇತ್ರಕ್ಕೆ ಬೆಂಬಲ ನೀಡುವ ಸಲುವಾಗಿ ಟಾಟಾ ಕಂಪನಿಯು ಸ್ಥಾಪಿಸುತ್ತಿರುವ 540 ಹಾಸಿಗೆಗಳ ಕೋವಿಡ್ ಆಸ್ಪತ್ರೆಯು ಪೂರ್ಣಗೊಳ್ಳುವ ಹಂತದಲ್ಲಿದೆ.

ಆಸ್ಪತ್ರಗೆ ವೈದ್ಯರು ಸೇರಿದಂತೆ ಇತರ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆಗೆ ಕೇರಳ ಸರ್ಕಾರ ಕ್ರಮ ಕೈಗೊಂಡಿದ್ದು, ಆಸ್ಪತ್ರೆ ಮುಂದಿನ ತಿಂಗಳು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಮಾರ್ಚ್ ತಿಂಗಳಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆರೋಗ್ಯಸೇವೆಗೆ ಸಂಬಂಧಿಸಿದ ಮೂಲಸೌಕರ್ಯಗಳು ಇಲ್ಲದೆ ಇರುವುದು ಬೆಳಕಿಗೆ ಬಂದಿದ್ದವು. ಇದನ್ನು ಮನಗಂಡ ಟಾಟಾ, ಕಾಸರಗೋಡು ನಗರದಿಂದ 10 ಕಿ.ಮೀ. ದೂರದಲ್ಲಿರುವ ತೆಕ್ಕಿಲ್ ಎಂಬಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಿಸಲು ಮುಂದಾಯಿತು.

ಸರ್ಕಾರ ನೀಡಿದ ಭೂಮಿಯಲ್ಲಿ ಏಪ್ರಿಲ್ ತಿಂಗಳಾಂತ್ಯದಲ್ಲಿ ಆಸ್ಪತ್ರೆ ಕಾಮಗಾರಿ ಪ್ರಾರಂಭವಾಯಿತು. ಇಲ್ಲಿ 128 ಫೈಬರ್ ಬಲವರ್ಧಿತ ಪಾಲಿಮರ್ ಘಟಕಗಳನ್ನು ಸ್ಥಾಪಿಸಲಾಗಿದೆ. ಅಡುಗೆ, ಕ್ವಾರಂಟೈನ್ ಮತ್ತು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹೀಗೆ ಮೂರು ವಲಯಗಳನ್ನಾಗಿ ಮಾಡಲಾಗಿದೆ.

ಟಾಟಾ ಕಂಪನಿಯು ಸುಮಾರು ₹ 60 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಿದೆ. ಆರೋಗ್ಯ ಮೂಲಸೌಕರ್ಯಗಳಾದ ವೆಂಟಿಲೇಟರ್‌ಗಳು, ಐಸಿಯು ಘಟಕಗಳು ಮತ್ತು ರಸ್ತೆ ನಿರ್ಮಾಣದಂಥ ಸೌಕರ್ಯಗಳನ್ನು ಕೇರಳ ಸರ್ಕಾರವೇ ಕಲ್ಪಿಸಲಿದೆ.

ಆಸ್ಪತ್ರೆಯ ಕಾಮಗಾರಿಯನ್ನು ಪರಿಶೀಲಿಸಿದ ಉದುಮ ಕ್ಷೇತ್ರದ ಶಾಸಕ ಕುಞಿರಾಮನ್, ವೈದ್ಯರ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಮುಂದಿನ ತಿಂಗಳು ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದೂ ತಿಳಿಸಿದರು. 

ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ 400 ಸಕ್ರಿಯ ಕೋವಿಡ್ ರೋಗಿಗಳಿದ್ದಾರೆ. ಜಿಲ್ಲೆಯ ಸುಮಾರು 30 ಪ್ರದೇಶಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸರ್ಕಾರ ಏಪ್ರಿಲ್‌ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಡಳಿತ ವಿಭಾಗವನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿತ್ತು.

ಈ ಮಧ್ಯೆ, ಕಾಸರಗೋಡಿನಲ್ಲಿ ಟಾಟಾ ನಿರ್ಮಿಸಿರುವ ಕೋವಿಡ್ ಆಸ್ಪತ್ರೆಯು ಶಾಶ್ವತವಾಗಿ ಇರಲಿದೆಯೇ ಎಂಬುದು ಹಲವರಲ್ಲಿ ಪ್ರಶ್ನೆ ಹುಟ್ಟುಹಾಕಿದೆ. ಟಾಟಾವು ತನ್ನ ಸಿಎಸ್‌ಆರ್ ಯೋಜನೆಯ ಭಾಗವಾಗಿ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಸರ್ಕಾರವು ಇದನ್ನು ಜಿಲ್ಲೆಯಲ್ಲಿ ಆಸ್ಪತ್ರೆಯನ್ನಾಗಿ ಉಳಿಸಿಕೊಳ್ಳಬಹುದು ಎಂದು ಶಾಸಕ ಕುಞಿರಾಮನ್ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು