ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಯಾವುದೇ ಶಕ್ತಿ ನಮ್ಮ ಒಂದಿಂಚು ನೆಲ ಕಸಿಯಲೂ ಬಿಡೆವು: ರಾಜನಾಥ್ ಸಿಂಗ್

Last Updated 17 ಜುಲೈ 2020, 10:08 IST
ಅಕ್ಷರ ಗಾತ್ರ

ಲುಕುಂಗ್‌ (ಲಡಾಕ್‌): ಚೀನಾದೊಂದಿಗೆ ಲಡಾಕ್‌ ಪ್ರದೇಶದಲ್ಲಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೂ ಖಚಿತವಾಗಿ ಹೇಳಲಾಗದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಶುಕ್ರವಾರ ಅವರು ಲಡಾಕ್‌ನ ಲುಕುಂಗ್‌ ಪ್ರದೇಶಕ್ಕೆ ಭೇಟಿ ನೀಡಿದರು. ಭಾರತೀಯ ಸೇನೆ ಮತ್ತು ಇಂಡೊ–ಟಿಬೆಟನ್‌ ಗಡಿ ಪೊಲೀಸ್‌ ಪಡೆ (ಐಟಿಬಿಪಿ) ಸಿಬ್ಬಂದಿಯೊಂದಿಗೆ ರಾಜನಾಥ್‌ ಸಿಂಗ್‌ ಸಂವಾದ ನಡೆಸಿದರು. ಚಹಾ ಸೇವಿಸುತ್ತ, ಕೆಲವು ಸಿಬ್ಬಂದಿಗೆ ಸಿಹಿ ತಿನ್ನಿಸಿ ಕುಶಲೋಪರಿ ವಿಚಾರಿಸಿದರು. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಜೊತೆಗಿದ್ದರು.

ಜೂನ್ 15ರಂದು ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಪಡೆಗಳ ನಡುವಿನ ಸಂಘರ್ಷದ ಬಳಿಕವೂ ಉಭಯ ರಾಷ್ಟ್ರಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಗಡಿ ಸಮಸ್ಯೆ ಶಮನಗೊಳಿಸುವ ಸಲುವಾಗಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.

'ಗಡಿ ವಿವಾದ ಬಗೆಹರಿಸಿಕೊಳ್ಳಲು ಪರಸ್ಪರ ಮಾತುಕತೆ ನಡೆಯುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಪರಿಹಾರವಾಗಲಿದೆ ಎಂಬುದನ್ನು ಖಚಿತಪಡಿಸಲಾರೆ. ಜಗತ್ತಿನ ಯಾವುದೇ ಶಕ್ತಿಯಿಂದ ನಮ್ಮ ನೆಲೆದ ಒಂದು ಇಂಚು ಜಾಗವನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇವೆ.' ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಮುಂದುವರಿದು, 'ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಂಡರೆ, ಅದಕ್ಕಿಂತಲೂ ಉತ್ತಮ ಮತ್ತೊಂದಿಲ್ಲ' ಎಂದರು.

'ಪಿಪಿ14ರಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ಪಡೆಗಳ ನಡುವೆ ನಡೆದದ್ದು, ಗಡಿ ರಕ್ಷಣೆ ನಡೆಸುತ್ತಲೇ ನಮ್ಮ ಕೆಲವು ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದರು. ನಿಮ್ಮೆಲ್ಲರನ್ನೂ ಭೇಟಿ ಮಾಡಿರುವುದು ನನಗೆ ಸಂತಸ ತಂದಿದೆ, ಆದರೆ ಅವರನ್ನು ಕಳೆದು ಕೊಂಡಿರುವುದಕ್ಕೆ ದುಃಖಿತನಾಗಿರುವೆ. ಅವರಿಗೆ ನನ್ನ ಗೌರವಗಳನ್ನು ಸಮರ್ಪಿಸುತ್ತೇನೆ' ಎಂದು ಹೇಳಿದರು.

ಬೆಳಿಗ್ಗೆ ರಾಜನಾಥ್‌ ಸಿಂಗ್‌ ಪ್ಯಾರಾ ಡ್ರಾಪಿಂಗ್‌, ದೂರದರ್ಶಕ ಶಸ್ತ್ರಾಸ್ತ್ರಗಳು ಹಾಗೂ ಪಿಕೆ ಮೆಷಿನ್‌ ಗನ್‌ ಬಳಕೆ ಗಮನಿಸಿದರು. ರಕ್ಷಣಾ ಸಚಿವರ ಎದುರು ಲೆಹ್‌ನ ಸ್ಟಕನಾದಲ್ಲಿ ಭಾರತೀಯ ಸೇನೆಯ ಟಿ–90 ಟ್ಯಾಂಕರ್‌ಗಳು ಹಾಗೂ ಬಿಎಂಪಿ ಇನ್ಫ್ಯಾಂಟ್ರಿ ಸಮರ ವಾಹನಗಳು ಅಭ್ಯಾಸ ನಡೆಸಿದವು.

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಎರಡೂ ಕಡೆಯ ಪರಿಸ್ಥಿಯ ಅವಲೋಕನ ನಡೆಸಲು ರಾಜನಾಥ್‌ ಸಿಂಗ್‌, ಲಡಾಕ್‌ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ದಿನಗಳ ಭೇಟಿಯಲ್ಲಿದ್ದಾರೆ.

ಪಾಕಿಸ್ತಾನ ಯುದ್ಧ ವಿರಾಮ ಒಪ್ಪಂದ ಉಲ್ಲಂಘಿಸುವ ಮೂಲಕ ಗಡಿ ನಿಯಂತ್ರಣ ರೇಖೆ ಸಮೀಪ ಆಗಾಗ್ಗೆ ದಾಳಿ ನಡೆಸುತ್ತಿದೆ. ಚೀನಾ ಲಡಾಕ್‌ನಲ್ಲಿ ಭಾರತದ ಭೂ ಪ್ರದೇಶ ಅತಿಕ್ರಮಿಸುವುದನ್ನು ನಡೆಸುತ್ತಿರುವುದು, ಗಡಿ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದೆ. ಗಾಲ್ವಾನ್‌ ಕಣಿವೆಯಲ್ಲಿ ಜೂನ್‌ 15ರಂದು ಭಾರತ–ಚೀನಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಸಾವಿಗೀಡಾದರು. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಹಾಗೂ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯ ಬಳಿಕ ಚೀನಾ ಪಡೆಗಳು ಲಡಾಕ್‌ ಪ್ರದೇಶದಿಂದ ಹಿಂದೆ ಸರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT