ಶುಕ್ರವಾರ, ಜುಲೈ 23, 2021
22 °C

ಉತ್ತರ ಪ್ರದೇಶ: ಪೊಲೀಸರ ಹತ್ಯೆ ಪ್ರಕರಣ, ರೌಡಿ ದುಬೆ ಸಹಚರನ ಕಾಲಿಗೆ ಗುಂಡು, ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾನ್ಪುರ (ಉತ್ತರಪ್ರದೇಶ): ಎಂಟು ಪೊಲೀಸರ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಎಂಟು ಮಂದಿ ಪೊಲೀಸರಿಗೆ ಗುಂಡಿಕ್ಕಿದ್ದ ಆರೋಪಿ ದಯಾಶಂಕರ್ ಅಗ್ನಿಹೋತ್ರಿ ಎಂದು ಗುರುತಿಸಲಾಗಿದೆ.

ಆರೋಪಿ ಕಾನ್ಪುರ ನಗರದ ಸಮೀಪ ಕಲ್ಯಾಣಪುರ ಪ್ರದೇಶದಲ್ಲಿ ಅಡಗಿರುವ ಮಾಹಿತಿ ತಿಳಿದ ಕೂಡಲೆ ಪೊಲೀಸರು ಅಡಗುದಾಣದ ಮೇಲೆ ದಾಳಿ ನಡೆಸಿದರು. ಕೂಡಲೆ ಆರೋಪಿ ಪ್ರತಿದಾಳಿ ನಡೆಸಲು ಮುಂದಾಗಿದ್ದ. ಪೂರ್ವತಯಾರಿ ಮಾಡಿಕೊಂಡಿದ್ದ ಪೊಲೀಸರು ಆತನ ಕಾಲಿಗೆ ಗುಂಡುಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಹೋತ್ರಿ ಬಳಿ ಪೊಲೀಸರು ಬಂದೂಕು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ವಿಕಾಸ್ ದುಬೆಯ 18 ಮಂದಿ ಸಹಚರರಲ್ಲಿ ಈತನೂ ಪ್ರಮುಖವಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮಾಹಿತಿ ನೀಡಿದವರಿಗೆ ₹ 25 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.

ಎರಡು ದಿನಗಳ ಹಿಂದೆ ಕಾನ್ಪುರದ ಡೆಹತ್‌ನ ಬಿಕ್ರಿ ಗ್ರಾಮದಲ್ಲಿ ಪೊಲೀಸರು ಬಂಧಿಸಲು ಹೋದಾಗ ಆರೋಪಿ ವಿಕಾಸ್ ದುಬೆ ಹಾಗೂ ಆತನ ಸಹಚರರು ದಾರಿಗೆ ಅಡ್ಡಲಾಗಿ ಕಲ್ಲು ಗುಂಡುಗಳನ್ನು ಜೋಡಿಸಿದ್ದ. ಪೊಲೀಸರಿಗೆ ಅನತಿ ದೂರದಲ್ಲಿಯೇ ಮರೆಯಾಗಿ ನಿಂತು ಪೊಲೀಸರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದ. ಪರಿಣಾಮ ಒಬ್ಬ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರು ಹತ್ಯೆಯಾಗಿದ್ದರು.

ದುಬೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳಲ್ಲಿನ ಹಣ ಹಾಗೂ ಅಕ್ರಮ ಆಸ್ತಿ ವಶಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಕಾಸ್ ದುಬೆಗೆ ಪೊಲೀಸ್ ಠಾಣೆಯಿಂದ ಫೋನ್ ಬಂತು. ಪೊಲೀಸರು ನಿನ್ನನ್ನು ಬಂಧಿಸಲು ಬರುತ್ತಿದ್ದಾರೆ ಎಂದು ತಿಳಿಯಿತು. ಕೂಡಲೆ ಆತ 25 ರಿಂದ 30 ಮಂದಿಯನ್ನು ಕರೆದ. ನಂತರ ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದ. ಆ ಗುಂಡಿನ ಚಕಮಕಿ ಸಮಯದಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು ಎಂದು ಆರೋಪಿ ದಯಾಶಂಕರ ಅಗ್ನಿಹೋತ್ರಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು