ಬುಧವಾರ, ಮೇ 27, 2020
27 °C
ಸೇನೆಯಿಂದ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ; ಕ್ರೀಡಾಂಗಣಗಳ ಬಳಕೆ

ಕೊರೊನಾ ವೈರಸ್‌ ಭೀತಿ: ಸಂಕಷ್ಟದಲ್ಲಿದೆ ಅಮೆರಿಕದ ಆರೋಗ್ಯ ವ್ಯವಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಜಗತ್ತಿನಲ್ಲೇ ಅತ್ಯುತ್ತಮ ಆರೋಗ್ಯ ರಕ್ಷಣೆ ವ್ಯವಸ್ಥೆ ಹೊಂದಿರುವ ಖ್ಯಾತಿಗಳಿಸಿದ್ದ ಅಮೆರಿಕ ರಾಷ್ಟ್ರವೇ ಈಗ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ.

ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ  ಸಾವಿರಾರು ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಲಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಫುಟ್ಬಾಲ್‌ ಕ್ರೀಡಾಂಗಣಗಳು, ಒಳಾಂಗಣ ಕ್ರೀಡಾಂಗಣಗಳು, ಸಮುದಾಯ ಕೇಂದ್ರಗಳು ಮತ್ತು ಕುದುರೆ ರೇಸ್‌ ಟ್ರ್ಯಾಕ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಹೈಡ್ರೊಕ್ಸಿಕ್ಲೋರೊಕ್ವಿನ್‌ ಔಷಧಿಪ್ರಯೋಗ: ನ್ಯೂಯಾರ್ಕ್‌ನಲ್ಲಿರುವ 1,100 ಕೋವಿಡ್‌–19 ರೋಗಿಗಳಿಗೆ ಮಲೇರಿಯಾಗೆ ನೀಡುವ ಔಷಧಿಯಾದ ‘ಹೈಡ್ರೊಕ್ಸಿಕ್ಲೋರೊಕ್ವಿನ್‌’ ನೀಡಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

‘ಪ್ರಾಯೋಗಿಕವಾಗಿ ಕಳೆದ ಎರಡು ದಿನದಿಂದ ರೋಗಿಗಳಿಗೆ ಹೈಡ್ರೊಕ್ಸಿಕ್ಲೋರೊಕ್ವಿನ್ ಜೊತೆಗೆ ಅಜಿಥ್ರೊಮೈಸಿನ್‌ ಕೂಡಾ ನೀಡಲಾಗುತ್ತಿದ್ದು, ಫಲಿತಾಂಶ ನಿರೀಕ್ಷಿಸಲಾಗಿದೆ’ ಎಂದು ಶ್ವೇತಭವನದಲ್ಲಿ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಸಿದ್ಧ ಹಾಸ್ಯ ನಟ ನಿಧನ: ಜಪಾನ್‌ನ ಪ್ರಸಿದ್ಧ ಹಾಸ್ಯ ನಟ ಕೆನ್‌ ಶಿಮುರಾ (70) ಅವರು ಕೋವಿಡ್‌–19ನಿಂದ ಭಾನುವಾರ ಮೃತಪಟ್ಟಿದ್ದಾರೆ. ಶಿಮುರಾ ಅವರು ಜಪಾನ್‌ನಲ್ಲಿ ಕೋವಿಡ್‌–19ನಿಂದ ಮೃತಪಟ್ಟ ಮೊದಲ ಸೆಲೆಬ್ರಿಟಿ ಆಗಿದ್ದಾರೆ.

ಕ್ವಾರಂಟೈನ್‌ನಲ್ಲಿ ನೆತನ್ಯಾಹು: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕ್ವಾರಂಟೈನ್‌ಲ್ಲಿ (ಮನೆಯಲ್ಲಿಯೇ ಪ್ರತ್ಯೇಕ ವಾಸ) ಇರಲು
ನಿರ್ಧರಿಸಿದ್ದಾರೆ. ತಮ್ಮ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿರುವ ಕಾರಣದಿಂದ ನೆತನ್ಯಾಹು ಈ ನಿರ್ಧಾರಕ್ಕೆ ಬಂದಿದ್ದಾರೆ. 

ಚಾರ್ಲ್ಸ್‌ ಆರೋಗ್ಯ ಸ್ಥಿತಿ ಉತ್ತಮ: ‘ಕೋವಿಡ್‌–19ರಿಂದ ಬಳಲುತ್ತಿದ್ದ ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌ ಅವರು ಪ್ರತ್ಯೇಕ ವಾಸದಿಂದ ಹೊರಬಂದಿದ್ದಾರೆ. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ’ ಎಂದು ಅರಮನೆ ವಕ್ತಾರ ತಿಳಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು