ಶುಕ್ರವಾರ, ಜನವರಿ 27, 2023
18 °C
ಚೀನಾ: ಸೋಂಕಿಗೆ ಬಲಿಯಾದವರ ಸಂಖ್ಯೆ 81ಕ್ಕೆ ಏರಿಕೆ

ಕೊರೊನಾ ನಿಯಂತ್ರಣಕ್ಕೆ ₹62,000 ಕೋಟಿ ಬಿಡುಗಡೆ ಮಾಡಿದ ಚೀನಾ ಸರ್ಕಾರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕು ನಿಯಂತ್ರಣ ಕಾರ್ಯಗಳಿಗೆ ಚೀನಾದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಆಯೋಗ ಸುಮಾರು ₹62 ಸಾವಿರ ಕೋಟಿ ಬಿಡುಗಡೆ ಮಾಡಿದೆ.

ಈ ಸೋಂಕಿಗೆ ಬಲಿಯಾದವರ ಸಂಖ್ಯೆ ಸೋಮವಾರ 81ಕ್ಕೇರಿದೆ. 2,744 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 461 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಉದ್ಯಮಗಳು ಕೆಲಸ ಸ್ಥಗಿತಗೊಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. ಹೊಸ ವರ್ಷದ ರಜೆಯನ್ನು ಸರ್ಕಾರ ವಿಸ್ತರಿಸಿದೆ.

ಪ್ರಧಾನಿ ಭೇಟಿ:ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ವುಹಾನ್‌ ನಗರಕ್ಕೆ ಪ್ರಧಾನಿ ಲಿ ಕೆಕಿಯಾಂಗ್‌ ಸೋಮವಾರ ಭೇಟಿ ನೀಡಿ, ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಕಾರ್ಯಗಳನ್ನು ಪರಿಶೀಲಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಲಿ ಕೆಕಿಯಾಂಗ್‌ ನೇತೃತ್ವದ ಉನ್ನತ ಅಧಿಕಾರಿಗಳ ನಿಯೋಗ ತಿಳಿಸಿದೆ.

ಸೋಂಕು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಮತ್ತು ಆನ್‌ಲೈನ್‌ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ.

 ‘769 ಮಂದಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿತ್ತು. 583 ಮಂದಿಯನ್ನು ವೈದ್ಯಕೀಯ ತಪಾಸಣೆಯ ಬಳಿಕ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. 30,453 ಮಂದಿಯ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ನಿಗಾ ಇರಿಸಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಎಂಟು ಮಂದಿ, ಮಕಾವೊದಲ್ಲಿ ಐವರು ಮತ್ತು ತೈವಾನ್‌ನಲ್ಲಿ ನಾಲ್ವರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದೂ ಹೇಳಿದ್ದಾರೆ.

ಥಾಯ್ಲೆಂಡ್‌ನಲ್ಲಿ ಏಳು ಮಂದಿ, ಸಿಂಗಪುರ, ಆಸ್ಟ್ರೇಲಿಯಾದಲ್ಲಿ ತಲಾ ನಾಲ್ವರು, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ಫ್ರಾನ್ಸ್‌, ಅಮೆರಿಕದಲ್ಲಿ ತಲಾ ಮೂವರು, ವಿಯೆಟ್ನಾಂನಲ್ಲಿ ಇಬ್ಬರು ಮತ್ತು ನೇಪಾಳದಲ್ಲಿ ಒಬ್ಬರು ಈ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.

ಏಷ್ಯಾದ ಪ್ರವಾಸೋದ್ಯಮಕ್ಕೆ ಹೊಡೆತ

ಟೋಕಿಯೊ: ಕೊರೊನಾ ವೈರಸ್‌ ಸೋಂಕು ಭೀತಿಯಿಂದ ಚೀನಾಕ್ಕೆ ಪ್ರವಾಸ ಕೈಗೊಳ್ಳುವುದಕ್ಕೆ ನಿರ್ಬಂಧ ಹೇರಿರುವುದುದರಿಂದ ಏಷ್ಯಾದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

ಜಪಾನ್‌ನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಚೀನಾದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಜಪಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು