ಶನಿವಾರ, ಜುಲೈ 31, 2021
28 °C

ವಿಶ್ವದಾದ್ಯಂತ ಕೊರೊನಾ: ಕಠಿಣ ಕ್ರಮ ಜಾರಿ ಮಾಡಿ ಸಾವು ಗೆದ್ದ ರಾಷ್ಟ್ರಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ವಿಶ್ವವೇ ತಲ್ಲಣಗೊಂಡಿದ್ದರೂ, ಕೆಲ ರಾಷ್ಟ್ರಗಳಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದು ಸಾವೇ ಸಂಭವಿಸದಂತೆ ಎಚ್ಚರಿಕೆ ವಹಿಸಿವೆ.

ವಿಶ್ವದಲ್ಲಿ ಒಟ್ಟು 67.03 ಲಕ್ಷ ಸೋಂಕು ಪ್ರಕರಣ ದಾಖಲಾಗಿದ್ದು, ವಿಶ್ವದಲ್ಲಿ ಇದುವರೆಗೂ 3.93ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 3.25 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮರಿಕಾದಲ್ಲಿ 19.24 ಲಕ್ಷ ಮಂದಿ ಸೋಂಕಿತರಿದ್ದು, 1.10 ಲಕ್ಷ ಮಂದಿ ಸಾವನ್ನಪ್ಪಿದ್ದು, 11.01 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸಾವಿನಿಂದ ಕೆಲ ಘಟಾನುಘಟಿ ರಾಷ್ಟ್ರಗಳು ತತ್ತರಿಸಿದ್ದರೂ, ಕೆಲ ರಾಷ್ಟ್ರಗಳು ಈ ಸೋಂಕಿಗೆ ಪ್ರಜೆಗಳು ತುತ್ತಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿವೆ.

ಇವುಗಳಲ್ಲಿ ಪ್ರಮುಖ ರಾಷ್ಟ್ರ ಭಾರತದ ನೆರೆಯ ಭೂತಾನ್ ಕೂಡ ಒಂದು. ಭೂತಾನ್ ಪ್ರಧಾನಿ ಡಾ. ಲೊತೆ ಶೇರಿಂಗ್ ಹಾಗೂ ಆರೋಗ್ಯ ಸಚಿವ ಡಾ. ಡೆಕೆನ್ ವಾಂಗ್ಮೋ ಇಬ್ಬರೂ ರಾಜಕೀಯಕ್ಕೆ ಪ್ರವೇಶ ಪಡೆಯುವ ಮುನ್ನ ಸರ್ಕಾರಿ ವೈದ್ಯಾಧಿಕಾರಿಗಳಾಗಿದ್ದವರು. ಇಡೀ ರಾಷ್ಟ್ರವನ್ನು ಕೊರೊನಾದಿಂದ ರಕ್ಷಿಸಲು ಹಗರಲಿರುಳು ಶ್ರಮಿಸುತ್ತಿದ್ದಾರೆ.

ಪ್ರಧಾನಿ ಲೊತೆ ಶೇರಿಂಗ್ ತಾವೇ ಖುದ್ದಾಗಿ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ರಾಷ್ಟ್ರಗಳಂತೆ ಭೂತಾನ್ ನಲ್ಲಿಯೂ ಕೊರೊನಾ ಹರಡಲು ಆರಂಭಿಸಿತ್ತು. ಆ ಸಮಯದಲ್ಲಿ ಎಲ್ಲಾ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಯಿತು. ಭೂತಾನ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಿದರೂ ರಾಷ್ಟ್ರದೊಳಗೆ ಇರುವ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ದೇಶದ ಗ್ರಾಮೀಣ ಭಾಗದಲ್ಲಿಯೂ ಕ್ವಾರಂಟೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿಯೊಂದು ಗ್ರಾಮದಲ್ಲಿಯೂ ಬಿದಿರಿನ ಬೊಂಬುಗಳ ಮೂಲಕ ಕ್ವಾರಂಟೈನ್ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಗ್ರಾಮಗಳಿಗೆ ಯಾರೇ ಪ್ರವೇಶಿಸಿದರೂ ಇಡೀ ಗ್ರಾಮದ ಜನರು ಅವರಿಗೆ ಊಟ ಸೇರಿದಂತೆ ಇತರೆ ಅಗತ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವುದಾಗಿ ಪಣತೊಟ್ಟಿದ್ದಾರೆ.

ಭೂತಾನ್‌ನಲ್ಲಿ ಮಾರ್ಚ್ 22ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಯಿತು. ಅಮೆರಿಕಾದ 76 ವರ್ಷದ ಪ್ರವಾಸಿಗನಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಕೂಡಲೆ ವೈದ್ಯಾಧಿಕಾರಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು.
ದೇಶದಲ್ಲಿ ಪ್ರತಿಯೊಂದು ರೆಸ್ಪೋರೆಂಟ್ ತೆರೆದು ಪ್ರಜೆಗಳಿಗೂ ಉಚಿತ ಊಟ ಮತ್ತು ನೀರನ್ನು ಒದಗಿಸುತ್ತಿದ್ದಾರೆ.

ಭೂತಾನ್ ಪ್ರಧಾನ ಮಂತ್ರಿ ಸ್ವತಃ ವೈದ್ಯರಾಗಿರುವುದರಿಂದ ಎಲ್ಲಾ ಕ್ರಮಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು ಅಲ್ಲಿನ ಪ್ರಜೆಗಳಿಗೆ ನೈತಿಕ ಬಲ ತುಂಬಿದೆ. ಇವೆಲ್ಲಾ ಕ್ರಮಗಳಿಂದಾಗಿ ಈ ದೇಶದಲ್ಲಿ ಇದುವರೆಗೂ ಸಾವು ಸಂಭವಿಸಿಲ್ಲ. 48 ಪ್ರಕರಣಗಳು ಪತ್ತೆಯಾಗಿದ್ದರೂ ಇವರಿಗೆಲ್ಲಾ ಅತ್ಯಂತ ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಭೂತಾನ್ ಅಲ್ಲದೆ, ವಿಶ್ವದ ಇತರೆ ರಾಷ್ಟ್ರಗಳಲ್ಲಿಯೂ ಸೋಂಕು ಹರಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ವಿಯಟ್ನಾಂ(328) ಒಟ್ಟು ಗುಣಮುಖರಾದವರ ಸಂಖ್ಯೆ 302, ಮಂಗೋಲಿಯಾ(ಒಟ್ಟು ಸೋಂಕಿತರ ಸಂಖ್ಯೆ 191) ಗಿಬ್ರಾಲ್ಟರ್( ಒಟ್ಟು ಸೋಂಕಿತರ ಸಂಖ್ಯೆ 173)  ಕಾಂಬೋಡಿಯಾ (ಒಟ್ಟು ಸೋಂಕಿತರ ಸಂಖ್ಯೆ 125), ಭೂತಾನ್, ಮಕಾವ್ (ಒಟ್ಟು ಸೋಂಕಿತರ ಸಂಖ್ಯೆ 45),  ನಮೀಬಿಯಾ(ಒಟ್ಟು ಸೋಂಕಿತರ ಸಂಖ್ಯೆ 25),  ನ್ಯೂ ಕಲೆಡೋನಿಯಾ (ಒಟ್ಟು ಸೋಂಕಿತರ ಸಂಖ್ಯೆ 20), ಲಾವೋಸ್(ಒಟ್ಟು ಸೋಂಕಿತರ ಸಂಖ್ಯೆ 19), ಸೆಂಟ್ ಲೂಸಿಯಾ( ಒಟ್ಟು ಸೋಂಕಿತರ ಸಂಖ್ಯೆ 19), ಇಲ್ಲಿನ ಜನಸಂಖ್ಯೆ 1.83 ಲಕ್ಷ, ಡೊಮಿನಿಕಾ(ಒಟ್ಟು ಸೋಂಕಿತರ ಸಂಖ್ಯೆ 18 ಮಂದಿ), ಒಟ್ಟು ಜನಸಂಖ್ಯೆ 71.97 ಸಾವಿರ , ಫಿಜಿ (ಒಟ್ಟು ಸೋಂಕಿತರ ಸಂಖ್ಯೆ 18ಮಂದಿ) ಜನಸಂಖ್ಯೆ 8.95 ಲಕ್ಷ ಮಂದಿ. ಸೆಂಟ್ ಕಿಟ್ಸ್ ಮತ್ತು ನೆವಿಸ್ (ಒಟ್ಟು ಸೋಂಕಿತರ ಸಂಖ್ಯೆ 15) ಒಟ್ಟು ಜನಸಂಖ್ಯೆ 53.10ಸಾವಿರ, ಗ್ರೀನ್ ಲ್ಯಾಂಡ್ (ಒಟ್ಟು ಸೋಂಕಿತರ ಸಂಖ್ಯೆ 13) ಒಟ್ಟು ಜನಸಂಖ್ಯೆ 56.76 ಸಾವಿರ ಮಂದಿ. ವ್ಯಾಟಿಕನ್ ಸಿಟಿ (ಒಟ್ಟು ಸೋಂಕಿತರ ಸಂಖ್ಯೆ 12ಮಂದಿ) ಕೆರಿಬಿಯನ್ ನೆದರ್ಲಾಂಡ್ , ಸೆಂಟ್ ಬರ್ತ್, ಅಂಗುಲಾಗಳಲ್ಲಿಯೂ ಯಾವುದೇ ಸಾವು ಸಂಭವಿಸಿಲ್ಲ.

ಉಗಾಂಡಾದಲ್ಲಿ ಎರಡು ತಿಂಗಳಿಂದ ಒಂದು ಸಾವೂ ಕೂಡ ಸಂಭವಿಸಿರಲಿಲ್ಲ. ಈಗ ಮೊದಲ ಸಾವು ಸಂಭವಿಸಿದೆ.

ಇದನ್ನು ಹೊರತುಪಡಿಸಿ ಕಠಿಣ ಲಾಕ್‌‌ಡೌನ್ ಗುರುವಾರ ಸಡಿಲಿಸಿದ್ದರಿಂದ ಜನರೆಲ್ಲಾ ತಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಖಾಸಗಿ ಟ್ಯಾಕ್ಸಿ, ಬಸ್ಸುಗಳಲ್ಲಿ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.  ಉಗಾಂಡಾ ಅಧ್ಯಕ್ಷ ಯಾವೆರಿ ಮ್ಯುಸಿವೇನಿ ಟ್ಯಾಕ್ಸಿ ಚಾಲಕರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ದಕ್ಷಿಣ ಸುಡಾನ್‌ನಿಂದ ಜನರನ್ನು ಕರೆತರುವುದನ್ನು ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ದಕ್ಷಿಣ ಸುಡಾನ್‌ನಲ್ಲಿ ಹೆಚ್ಚಿನ ಸೋಂಕಿತರಿದ್ದು, ಅವರನ್ನು ರಾಷ್ಟ್ರದೊಳಗೆ ಬರುವ ಮುನ್ನ ಕ್ವಾರಂಟೈನ್‌ಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.

ಉಳಿದಂತೆ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್‌‌ ಜಾರಿಗೆ ಬಂದಂತೆ ಈ ರಾಷ್ಟ್ರಗಳೂ ಲಾಕ್ ಡೌನ್ ಜಾರಿಗೊಳಿಸಿ ಕೊರೊನಾ ಸೋಂಕು ನಿವಾರಿಸಲು ಶ್ರಮ ವಹಿಸುತ್ತಿವೆ. ಆದರೆ, ಸೋಂಕಿತರು ಸಾವಿನ ಹಂತಕ್ಕೆ ತಲುಪುವುದನ್ನು ತಡೆಯುವಲ್ಲಿ ಯಶಸ್ವಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು