ಶನಿವಾರ, ಮೇ 30, 2020
27 °C
ಜಾಗತಿಕ ಕೊರೊನಾ ಪ್ರಕರಣ 10 ಲಕ್ಷ ಸಮೀಪ

ಅಮೆರಿಕ: ಸೋಂಕಿನಿಂದ ಒಂದೇ ದಿನ 884 ಮಂದಿ ಸಾವು, 2,00,000 ದಾಟಿದ ಕೊರೊನಾ ಪ್ರಕರಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಪೀಡಿತರ ಚಿಕಿತ್ಸೆ ಸಿದ್ಧರಾಗಿರುವ ಸಿಬ್ಬಂದಿ– ಸಂಗ್ರಹ ಚಿತ್ರ

ಜಿನೇವಾ: ಕೆಲವು ದಿನಗಳಲ್ಲೇ ಜಾಗತಿಕ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 10 ಲಕ್ಷ ಮುಟ್ಟುವ ಸಾಧ್ಯತೆ ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಹಾಗೂ ಜಾಗತಿಕವಾಗಿ ಸೋಂಕು ವ್ಯಾಪಿಸುತ್ತಿರುವುದು ತೀವ್ರ ಕಳವಳ ಉಂಟು ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. 

'ಕಳೆದ ಐದು ವಾರಗಳಲ್ಲಿ ಸೋಂಕು ದೃಢಪಡುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಏರು ಮುಖವಾಗಿದೆ ಹಾಗೂ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕಳೆದ ವಾರ ದುಪ್ಪಟ್ಟಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳು 10 ಲಕ್ಷ ಮುಟ್ಟಲಿವೆ ಹಾಗೂ ಸಾವಿಗೀಡಾಗುವವರ ಸಂಖ್ಯೆ 50,000ಕ್ಕೆ ಏರಿಕೆಯಾಗಲಿದೆ' ಎಂದು ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. 

ಜಗತ್ತಿನಾದ್ಯಂತ ಸೋಂಕು ದೃಢಪಟ್ಟ ಪ್ರಕರಣಗಳು 9,39,181 ತಲುಪಿದ್ದು, ಸೋಂಕಿನಿಂದಾಗಿ 47,118 ಮಂದಿ ಸಾವಿಗೀಡಾಗಿದ್ದಾರೆ. ಚಿಕಿತ್ಸೆಯ ಬಳಿಕ ಗುಣಮುಖರಾದವರ ಸಂಖ್ಯೆ 1,90,816 ಆಗಿದೆ. ಚೇತರಿಕೆ ಕಂಡಿರುವವರ ಪ್ರಮಾಣ ಶೇ 20ರಷ್ಟಿದೆ. 

ಅಮೆರಿಕದಲ್ಲಿ ಆರು ವಾರಗಳ ಕೂಸು ಕೋವಿಡ್‌–19ಗೆ ಬಲಿಯಾಗಿದೆ. ಎಎಫ್‌ಪಿ ಸುದ್ದಿ ಸಂಸ್ಥೆಯ ಪ್ರಕಾರ, ಸೋಂಕಿನಿಂದ ಸಾವಿಗೀಡಾಗಿರುವ ಅತ್ಯಂತ ಸಣ್ಣ ವಯಸ್ಸಿನ ಸಂತ್ರಸ್ತೆ ಆ ಮಗು. ಅಮೆರಿಕದಲ್ಲಿ ಒಂದೇ ದಿನ 884 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿರುವುದು ಎಂದು ಜಾನ್‌ ಹಾಪ್‌ಕಿನ್ಸ್‌ ಯೂನಿವರ್ಸಿ ಮಾಹಿತಿಗಳಿಂದ ತಿಳಿದು ಬಂದಿದೆ. ಮಂಗಳವಾರ ಅಮೆರಿಕದಲ್ಲಿ ಕೋವಿಡ್‌–19ಗೆ 865 ಮಂದಿ ಬಲಿಯಾಗಿದ್ದರು. 

ಇಟಲಿ, ಸ್ಪೇನ್‌, ಚೀನಾ ಎಲ್ಲ ರಾಷ್ಟ್ರಗಳಿಗಿಂತಲೂ ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದ್ದು, ಒಟ್ಟು ಪ್ರಕರಣಗಳು 2,13,713 ತಲುಪಿದೆ. ಸಾವಿಗೀಡಾದವರ ಸಂಖ್ಯೆ 5,000 ದಾಟಿದೆ. ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌  ಮಂಗಳವಾರ ಅಮೆರಿಕನ್ನರಿಗೆ ಎಲ್ಲದಕ್ಕೂ ಸಿದ್ಧವಿರುವಂತೆ ಕರೆ ನೀಡಿದ್ದರು. ಕೊರೊನಾ ವೈರಸ್‌ ವಿರುದ್ಧದ ಈ ಹೋರಾಟದಲ್ಲಿ 2,40,000 ಅಮೆರಿಕನ್ನರು ಬಲಿಯಾದಬಹುದೆಂದು ಶ್ವೇತ ಭವನ ಅಂದಾಜಿಸಿದೆ. 

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು, ಅದರಿಂದ ಸಾವಿಗೀಡಾದವರ ಸಂಖ್ಯೆಯ ಲೆಕ್ಕದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅನುಮಾನ ವ್ಯಕ್ತಪಡಿಸಿದ್ದಾರೆ. 'ಅದು ಸರಿಯಾದ ಲೆಕ್ಕ ಎಂದು ನಮಗೆ ಹೇಗೆ ತಿಳಿಯುತ್ತದೆ' ಎಂದು ಟ್ರಂಪ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ. 

ಇನ್ನೂ ಫ್ರಾನ್ಸ್‌ನಲ್ಲಿ ಸೋಂಕಿನಿಂದ ಒಂದೇ ದಿನ 509 ಜನರು ಸಾವಿಗೀಡಾಗುವ ಮೂಲಕ ದಿನದ ಗರಿಷ್ಠ ಸಾವಿನ ಸಂಖ್ಯೆ ದಾಖಲಾಗಿದೆ. ಅಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 4,032 ತಲುಪಿದೆ. ಸರ್ಕಾರಗಳು ಕೊರೊನಾ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದರೆ ಜಗತ್ತಿನ ಹಲವು ಭಾಗಗಳಲ್ಲಿ ಆಹಾರ ಕೊರತೆ ಉಂಟಾಗಲಿದೆ ಎಂದು ವಿಶ್ವ ಮಟ್ಟದ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 

ಭಾರತದಲ್ಲಿ ಮಾರ್ಚ್‌ 31 ಮತ್ತು ಏಪ್ರಿಲ್‌ 1ರ ನಡುವೆ 437 ಹೊಸ ಪ್ರಕರಣಗಳು ವರದಿಯಾಗಿವೆ. ಆಂಧ್ರ ಪ್ರದೇಶ 24 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳು 1,800 ದಾಟಿದೆ. 41 ಮಂದಿ ಸಾವಿಗೀಡಾಗಿದ್ದಾರೆ. 

ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ರಾಷ್ಟ್ರಗಳು

ದೇಶಸೋಂಕು ಪ್ರಕರಣಗಳುಒಟ್ಟು ಸಾವು
ಅಮೆರಿಕ2,13,713 5,005
ಇಟಲಿ   1,10,57413,155
ಸ್ಪೇನ್‌       1,04,118       9,387
ಚೀನಾ  83,095       3,312
ಜರ್ಮನಿ  78,258       928
ಫ್ರಾನ್ಸ್‌56,989   4,032
ಇರಾನ್‌      47,593 3,036
ಯುನೈಟೆಡ್‌ ಕಿಂಗ್‌ಡಮ್‌      29,474 2,352
ನೆದರ್‌ಲೆಂಡ್ಸ್‌ 13,614      1,173

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು