ಭಾನುವಾರ, ಜೂನ್ 7, 2020
22 °C

ಲಸಿಕೆ ಸಂಶೋಧನೆಗೆ ಕಳ್ಳ ಕಣ್ಣು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣುವಿನಿಂದ ಬರುವ ಕೋವಿಡ್–19 ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳ ವೈದ್ಯರು, ವಿಜ್ಞಾನಿಗಳು ಅವಿರತ ಪರಿಶ್ರಮ ಮುಂದುವರಿಸಿದ್ದಾರೆ. ಈ ನಡುವೆ, ಆ ಒಳ್ಳೆಯ ಕೆಲಸದ ಮೂಲಕ ಸಿಗುವ ಫಲವನ್ನು ಕದಿಯುವ ಪ್ರಯತ್ನ ಕೂಡ ನಡೆದಿದೆಯಂತೆ!

ಕೋವಿಡ್–19ಕ್ಕೆ ಔಷಧ ಅಭಿವೃದ್ಧಿಪಡಿಸುತ್ತಿರುವ ಪ್ರಯೋಗಾಲಯಗಳ ಮೇಲೆ ವಿದೇಶಿ ಗೂಢಚರ ಸಂಸ್ಥೆಗಳು ಕಣ್ಣಿಟ್ಟಿರುವುದು ಗೊತ್ತಾಗುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ಇದು ವಿದೇಶಿ ಗೂಢಚರ್ಯೆ ಕೆಲಸಗಳ ಮೇಲೆ ನಿಗಾ ಇಡುವ ಸಂಸ್ಥೆ.

ಯಾವ ದೇಶ ಈ ರೋಗಕ್ಕೆ ಮೊದಲು ಲಸಿಕೆಯನ್ನು ಕಂಡುಹಿಡಿಯುತ್ತದೆಯೋ, ಆ ದೇಶದ ಜನ ಕೋವಿಡ್–19 ರೋಗದ ಪಾಶದಿಂದ ಮೊದಲು ಮುಕ್ತರಾಗುತ್ತಾರೆ. ಹಾಗಾಗಿ, ಔಷಧ ಸಂಶೋಧನೆ ನಡೆಸಬಲ್ಲ ಪ್ರತಿ ದೇಶವೂ ತನ್ನಿಂದಾದಷ್ಟು ಶ್ರಮ ಹಾಕಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಾಗಾದರೆ, ಅನ್ಯ ದೇಶಗಳ ಗೂಢಚರರರು ಏಕೆ ಇಂತಹ ಸಂಶೋಧನೆಗಳ ಮೇಲೆ ಕಳ್ಳ ಕಣ್ಣು ಇಟ್ಟಿರಬಹುದು?!

ಸಂಶೋಧನೆಯಿಂದ ಮಹತ್ವದ ಅಂಶಗಳನ್ನು ಕದ್ದು, ತಮ್ಮ ದೇಶದಲ್ಲೇ ಔಷಧ ಸಿದ್ಧಪಡಿಸುವ ಉದ್ದೇಶದಿಂದ ಹೀಗೆ ಮಾಡುತ್ತ ಇದ್ದಿರಬಹುದು. ಅಥವಾ, ಇನ್ನೊಂದು ದೇಶ ಔಷಧ ಸಿದ್ಧಪಡಿಸದಂತೆ ಏನಾದರೂ ಕೆಡುಕು ಉಂಟುಮಾಡಿ, ಆ ದೇಶಕ್ಕಿಂತ ಮೊದಲು ತಾನೇ ಔಷಧ ಸಿದ್ಧಪಡಿಸುವ ಉದ್ದೇಶವೂ ಇದರ ಹಿಂದೆ ಇರಬಹುದು ಎನ್ನುತ್ತಾರೆ ತಜ್ಞರು.

ಕೋವಿಡ್–19 ಲಸಿಕೆ ಸಂಶೋಧನಾ ಪ್ರಕ್ರಿಯೆಯ ಮೇಲೆ ಕಳ್ಳ ಕಣ್ಣು ಇರಿಸಿ, ಅಲ್ಲಿಂದ ಮಾಹಿತಿ ಕದಿಯಲು ಚೀನಾ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಇಲ್ಲಿ ಚೀನಾದ ಉದ್ದೇಶ ಏನಿರಬಹುದು ಎಂಬುದನ್ನು ಊಹಿಸುವುದು ಓದುಗರಿಗೆ ಬಿಟ್ಟಿದ್ದು!

ಈ ರೋಗಕ್ಕೆ ಔಷಧ ಅಭಿವೃದ್ಧಿಪಡಿಸಲು ಯತ್ನಿಸುತ್ತಿರುವ ಸಂಸ್ಥೆಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕದಿಯಲು ಪ್ರಯತ್ನ ನಡೆಯಬಹುದು ಎಂದು ಕೆನಡಾ ಕೂಡ ಎಚ್ಚರಿಕೆ ನೀಡಿದೆ. ಜೆಕ್ ಗಣರಾಜ್ಯದ ಎರಡು ಆಸ್ಪತ್ರೆಗಳ ಮೇಲೆ ಏಪ್ರಿಲ್‌ ತಿಂಗಳಲ್ಲಿ ಸೈಬರ್ ದಾಳಿ ನಡೆಸುವ ಯತ್ನಗಳು ಆಗಿವೆ.

ಕೋವಿಡ್‌–19 ಕಾಯಿಲೆ ತಡೆಯಲು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೂರಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಸರಿಸುಮಾರು 30 ಲಸಿಕೆಗಳು ಭಾರತದವು ಎಂಬುದು ಗಮನಾರ್ಹ ವಿಚಾರ. ಈ ಮೂವತ್ತು ಲಸಿಕೆಗಳಲ್ಲಿ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತ ಕೈಜೋಡಿಸಿರುವುದೂ ಸೇರಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು