ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗಿಲ್ಲ ಕಡಿವಾಣ: ಜಗವೇ ತಲ್ಲಣ, ಅರ್ಥ ವ್ಯವಸ್ಥೆ ಮೇಲೆ ಭಾರಿ ಪ್ರಹಾರ

ಕೋವಿಡ್‌ ಬಾಧೆ: ಜಗತ್ತಿನಾದ್ಯಂತ 10 ಲಕ್ಷ ಮೀರಿದ ಸೋಂಕಿತರ ಸಂಖ್ಯೆ * ಸಾವು 56 ಸಾವಿರಕ್ಕೆ ಏರಿಕೆ
Last Updated 3 ಏಪ್ರಿಲ್ 2020, 21:36 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್‌: ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಹೆಚ್ಚುತ್ತಲೇ ಇದೆ. ಶುಕ್ರವಾರದ ಹೊತ್ತಿಗೆ ಸೋಂಕಿತರ ಸಂಖ್ಯೆಯು 10.66ಲಕ್ಷಕ್ಕೆ ಏರಿದೆ. ಸತ್ತವರ ಸಂಖ್ಯೆ 56 ಸಾವಿರವನ್ನು ಮೀರಿದೆ. 2.23 ಲಕ್ಷ ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆಯು 3,031 ಮತ್ತು ಸಾವಿನ ಸಂಖ್ಯೆಯು 84ಕ್ಕೆ ಹೆಚ್ಚಿದೆ.

ಜಗತ್ತಿನ ಅರ್ಧಕ್ಕಿಂತ ಹೆಚ್ಚು ಭಾಗವು ಲಾಕ್‌ಡೌನ್‌ ಆಗಿದೆ. ಹಾಗಿದ್ದರೂ, ವೈರಾಣುವಿನ ಪಸರಿಸುವಿಕೆಯ ವೇಗ ತಗ್ಗದಿರುವುದು ಆತಂಕ ಹೆಚ್ಚಿಸಿದೆ. ಅಮೆರಿಕ, ಸ್ಪೇನ್‌ ಮತ್ತು ಬ್ರಿಟನ್‌ನಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ.

ಅಮೆರಿಕದಲ್ಲಿ 66.5 ಲಕ್ಷ ಜನರು ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ, ಕೋವಿಡ್‌ನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗಿಗಳಾದವರ ಸಂಖ್ಯೆ ಒಂದು ಕೋಟಿಗೆ ಏರಿಕೆಯಾಗಿದೆ.

ಕೊರೊನಾದಿಂದಾಗಿ ಜಾಗತಿಕ ಆರ್ಥಿಕತೆಗೆ ₹300 ಲಕ್ಷ ಕೋಟಿ ನಷ್ಟ ಉಂಟಾಗಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಅಂದಾಜಿಸಿದೆ.

ಅಮೆರಿಕದಲ್ಲಿ ಒಂದೇ ದಿನ 1,100 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಸಾವಿನ ಸಂಖ್ಯೆ ಆರು ಸಾವಿರ ದಾಟಿದೆ. ಸ್ಪೇನ್‌ ಮತ್ತು ಬ್ರಿಟನ್‌ನಲ್ಲಿ ಕ್ರಮವಾಗಿ 950 ಮತ್ತು 569 ಮಂದಿ ಶುಕ್ರವಾರ ಸಾವಿಗೀಡಾಗಿದ್ದಾರೆ. ಸ್ಪೇನ್‌, ಇಟಲಿಯಲ್ಲಿ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ, ಅಮೆರಿಕ ಈಗ ಸೋಂಕು ಕೇಂದ್ರವಾಗಿ ಪರಿವರ್ತನೆಯಾಗಿದೆ. ಕೋವಿಡ್‌ನಿಂದಾಗಿ ಅಲ್ಲಿ ಒಂದು ಲಕ್ಷದಿಂದ 2.4 ಲಕ್ಷ ಜನರು ಜೀವ ಕಳೆದುಕೊಳ್ಳುವ ಅಪಾಯವಿದೆ ಎಂದು ಶ್ವೇತಭವನದ ಪರಿಣತರು ಅಂದಾಜಿಸಿದ್ದಾರೆ.

9 ನಿಮಿಷ ದೀಪ ಹಚ್ಚಿ ಮೋದಿ ಕರೆ
ನವದೆಹಲಿ (ಪಿಟಿಐ): ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಹೇರಲಾದ ಲಾಕ್‌ಡೌನ್‌ ಭಾನುವಾರ 9ನೇ ದಿನ ಪೂರ್ಣಗೊಳಿಸಲಿದೆ. ಅಂದು, ರಾತ್ರಿ ಒಂಬತ್ತು ಗಂಟೆಗೆ ಜನರು ದೀಪ, ಮೊಂಬತ್ತಿ, ಟಾರ್ಚ್ ಅಥವಾ ಮೊಬೈಲ್‌ ಫೋನ್‌ನ ಫ್ಲ್ಯಾಷ್‌ಲೈಟ್‌ಗಳನ್ನು ಒಂಬತ್ತು ನಿಮಿಷ ಬೆಳಗಿಸಬೇಕು. ಆ ಹೊತ್ತಿನಲ್ಲಿ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಕೋರಿದ್ದಾರೆ.

ಕೊರೊನಾ ವೈರಾಣುವನ್ನು ಸೋಲಿಸುವ ನಮ್ಮ ‘ಸಾಮೂಹಿಕ ದೃಢ ನಿಶ್ಚಯ’ವನ್ನು ತೋರಿಸುವುದ್ಕಾಗಿ ಇದನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲಿ ಇರುವ ಜನರಲ್ಲಿ ಏಕಾಂಗಿಯಾಗಿದ್ದೇವೆ ಎಂಬ ಭಾವನೆ ಬರಬಹುದು. ಆದರೆ, ಇಡೀ ದೇಶದ 130 ಕೋಟಿ ಜನರ ಸಾಮೂಹಿಕ ಶಕ್ತಿ ತಮ್ಮಲ್ಲಿ ಇದೆ ಎಂಬುದನ್ನು ಅವರು ಮರೆಯಬಾರದು ಎಂದರು.

ಎಲ್ಲೆಡೆ ಜನರು ದೀಪ, ಮೊಂಬತ್ತಿ ಅಥವಾ ತಮ್ಮ ಮೊಬೈಲ್‌ ಫೋನ್‌ನ ಫ್ಲ್ಯಾಷ್‌ಲೈಟ್‌ ಬೆಳಗಿಸಿದಾಗ ಅದು ಬೆಳಕಿನ ಮಹಾಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಮತ್ತು ನಮ್ಮ ಹೋರಾಟದ ಸಾಮೂಹಿಕ ದೃಢನಿಶ್ಚಯವನ್ನು ತೋರುತ್ತದೆ. ಈ ಬೆಳಕಿನಲ್ಲಿ ನಾವು ಏಕಾಂಗಿಯಲ್ಲ, ಯಾರೂ ಏಕಾಂಗಿಯಲ್ಲ ಎಂಬ ದೃಢನಿಶ್ಚಯವನ್ನೂ ಕೈಗೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಭಾರಿ ಸಂಖ್ಯೆಯ ಬಡಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರೆಲ್ಲರನ್ನೂ ನಿಮ್ಮ ಮನಸ್ಸಿನಲ್ಲಿ ಇರಿಸಿಕೊಳ್ಳಿ, ಕೊರೊನಾ ವೈರಾಣು ಹರಡಿರುವ ಕತ್ತಲಿನಿಂದ ಅವರೆಲ್ಲರೂ ಬೆಳಕು ಮತ್ತು ಆಶಾವಾದದತ್ತ ನಡೆಯಲು ಸಹಕರಿಸಿ ಎಂದೂ ಕೋರಿದರು.

11 ನಿಮಿಷಗಳ ವಿಡಿಯೊ ಸಂದೇಶದಲ್ಲಿ ಮೋದಿ ಅವರು ಈ ವಿನಂತಿಯನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಹೀಗೆ ದೀಪ ಬೆಳಗಿಸುವಾಗಲೂ ಜನರು ಗುಂಪಾಗಿ ಮಾಡಬಾರದು. ಮನೆಯ ಒಳಗೇ ಇರುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ‘ಲಕ್ಷ್ಮಣ ರೇಖೆ’ಯನ್ನು ಮೀರಬಾರದು ಎಂದು ಹೇಳಿದ್ದಾರೆ.

ಮಾರ್ಚ್‌ 22ರ ‘ಜನತಾ ಕರ್ಫ್ಯೂ’ ಸಂದರ್ಭದಲ್ಲಿ, ಚಪ್ಪಾಳೆ ಅಥವಾ ಗಂಟೆ ಬಾರಿಸುವ ಮೂಲಕ ಕೊರೊನಾ ಹೋರಾಟದ ಮುಂಚೂಣಿಯಲ್ಲಿ ಇರುವವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಮೋದಿ ಕೇಳಿಕೊಂಡಿದ್ದರು. ಆದರೆ, ದೇಶದ ವಿವಿಧ ಭಾಗಗಳಲ್ಲಿ ಜನರು ಗುಂಪಾಗಿ ಮೆರವಣಿಗೆ ಮಾಡಿದ್ದರು ಮತ್ತು ಗುಂಪು ಗುಂಪಾಗಿ ಸೇರಿ ಗಂಟೆ, ಜಾಗಟೆ, ತಟ್ಟೆ ಇತ್ಯಾದಿಗ
ಳನ್ನು ಬಾರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಮಂತ್ರವನ್ನೇ ಉಲ್ಲಂಘಿಸಿದ್ದರು. ಹಾಗಾಗಿ, ಗುಂಪಾಗಿ ಸೇರಲೇಬಾರದು ಎಂದು ಮೋದಿ ಅವರು ಈ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ.

* ಭಾರತದಲ್ಲಿ ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ 647, ತಬ್ಲೀಗ್‌ ಜಮಾತ್‌ ಸಭೆಗೆ ಸಂಬಂಧಿಸಿದ್ದಾಗಿದೆ. ಈ ಸಭೆಯ ಕಾರಣದಿಂದಾಗಿ ಸೋಂಕು 14 ರಾಜ್ಯಗಳಿಗೆ ಹರಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ

* ಸರ್ಕಾರಿ ಸೇವೆ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ ಮತ್ತು ಖಾಸಗಿ ಕ್ಷೇತ್ರದ ಆಸ್ಪತ್ರೆಗಳಿಂದ ನಿವೃತ್ತರಾದ 30,100 ವೈದ್ಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂಪ್ರೇರಣೆಯಿಂದ ಕೈಜೋಡಿಸುವುದಾಗಿ ಹೇಳಿದ್ದಾರೆ ಎಂದು ಸರ್ಕಾರ ತಿಳಿಸಿದೆ

* ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಟ್ರಕ್‌ ಚಾಲಕರಿಗಾಗಿ ಟೋಲ್‌ ಕೇಂದ್ರಗಳಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ
ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ. 93 ಲಕ್ಷ ಟ್ರಕ್ ಚಾಲಕರು ಬೇರೆ ಬೇರೆ ಸ್ಥಳಗಳಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ

* ಕೊರೊನಾ ವೈರಸ್‌ ತಡೆಗಾಗಿ ಕ್ವಾರಂಟೈನ್‌ ಸೌಲಭ್ಯ ಹಾಗೂ ಸೋಂಕು ಪರೀಕ್ಷೆ ವ್ಯವಸ್ಥೆಗಳನ್ನು ಸ್ಥಾಪಿಸುವುದಕ್ಕಾಗಿ ರಾಜ್ಯಗಳಿಗೆ ₹11,092 ಕೋಟಿ ಬಿಡುಗಡೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅನುಮೋದನೆ ನೀಡಿದ್ದಾರೆ. ಪ್ರಧಾನಿಯವರು ಮುಖ್ಯಮಂತ್ರಿಗಳ
ಜತೆಗಿನ ವಿಡಿಯೊ ಕಾನ್ಫರೆನ್ಸ್‌ನಲ್ಲಿ ನೀಡಿದ ಭರವಸೆಯಂತೆ ಈ ಮೊತ್ತ ಬಿಡುಗಡೆ ಮಾಡಲಾಗಿದೆ.

*

ಕೊರೊನಾ ವೈರಾಣು ಪಿಡುಗು ಕತ್ತಲೆಯನ್ನು ಹರಡಿರುವ ಈ ಹೊತ್ತಿನಲ್ಲಿ ನಾವು ನಿರಂತರವಾಗಿ ಬೆಳಕು ಮತ್ತು ಆಶಾವಾದದತ್ತ ಮುನ್ನಡೆಯುತ್ತಿರಬೇಕು
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT