ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಗೆ ಕೊರೊನಾ ವೈರಸ್ ಸೋಂಕು, ವ್ಹೀಲ್‌ಚೇರ್‌ನಲ್ಲಿಯೇ ಪ್ರಾಣಬಿಟ್ಟ ಅಂಗವಿಕಲ ಮಗ!

Last Updated 4 ಫೆಬ್ರುವರಿ 2020, 10:48 IST
ಅಕ್ಷರ ಗಾತ್ರ

ಬೀಜೀಂಗ್: ಚೀನಾದಾದ್ಯಂತ ಮರಣಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್‌ ಸೊಂಕು ತಗುಲಿ ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಅಂಗವಿಕಲ ಪುತ್ರನೋರ್ವ ವ್ಹೀಲ್‌ಚೇರ್‌ನಲ್ಲಿ ಕುಳಿತಲ್ಲಿಯೇ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

ಮಾತನಾಡಲು, ನಡೆಯಲು ಅಥವಾ ತನ್ನಷ್ಟಕ್ಕೆ ತಾನೆ ತಿನ್ನಲೂ ಆಗದ 17 ವರ್ಷದ ಬಾಲಕ ಯೆನ್ ಚೆಂಗ್ ಎಂಬಾತ ಸೆರಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದನು. ಜ್ವರದಿಂದ ತಂದೆಯು ಆಸ್ಪತ್ರೆ ಸೇರಿದ್ದರೆ ಈತ ಕುಳಿತಲ್ಲಿಯೇ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಕಳೆದ ಕೆಲವು ವರ್ಷಗಳ ಹಿಂದೆಯೇ ತಾಯಿ ಕೂಡ ಮೃತಪಟ್ಟಿದ್ದರಿಂದಾಗಿ ಈತನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ದಿನನಿತ್ಯದ ಕಾಯಕಕ್ಕೆ ಸಹಾಯ ದೊರೆಯದೆಯೇ ಕೊನೆಯುಸಿರೆಳೆದಿದ್ದಾನೆ.

ಅಂಗವಿಕಲ ಪುತ್ರನೊಂದಿಗೆ ಹುಬೆಯಲ್ಲಿ ವಾಸವಾಗಿದ್ದ ಬಾಲಕನ ತಂದೆ ಯೆನ್ ಕ್ಸಿಯಾವೆನ್ ಕಳೆದ ಐದು ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದರಿಂದ ಜನವರಿ 22ರಂದು ಆಸ್ಪತ್ರೆಗೆ ಹೋಗಿದ್ದಾರೆ. ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದಾಗಿ ಚಿಕಿತ್ಸೆಗೆ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದಾರೆ.

ಮನೆಯಲ್ಲಿದ್ದ ಮಗನನ್ನು ನೋಡಿಕೊಳ್ಳುವಂತೆ ಆಸ್ಪತ್ರೆಯಿಂದಲೇ ತಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ತನ್ನ ಸಂಬಂಧಿಕರು, ಗ್ರಾಮದ ಕಾರ್ಯಕರ್ತರು ಮತ್ತು ವೈದ್ಯರ ಬಳಿ ಯೆನ್ ಚೆಂಗ್‌ನನ್ನು ನೋಡಿಕೊಳ್ಳುವಂತೆ ಕೇಳಿಕೊಂಡರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಊಟವನ್ನು ತಿನ್ನಲೂ ಕೂಡ ಆಗದ ಯೆನ್ ಚೆಂಗ್, ಜನವರಿ 29ರಂದು ವ್ಹೀಲ್‌ಚೇರ್‌ನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ ಎಂದು ಹಾಂಗಾನ್ ಕೌಂಟ್ರಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಇವರಿಬ್ಬರ ನೆರವಿಗೆ ಬಾರದ ಸ್ಥಳೀಯ ಹಿರಿಯ ಅಧಿಕಾರಿಗಳ ಕೆಲಸಕ್ಕೂ ಕುತ್ತು ಉಂಟಾಗಿದೆ.
ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದಾಗಿ ಅಲ್ಲಿನ ಸ್ಥಳೀಯ ಕಮ್ಯುನಿಸ್ಟ್​ ಪಕ್ಷದ ಕಾರ್ಯದರ್ಶಿ ಹಾಗೂ ಮೇಯರ್​ ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕುಳಿತಲ್ಲಿಯೇ ಮೃತಪಟ್ಟ ಬಾಲಕನ ದುರಂತ ಅಂತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮತ್ತು ಸಂತಾಪ ವ್ಯಕ್ತವಾಗಿದೆ.ಇದುವರೆಗೂ ಚೀನಾದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಮೃತಪಟ್ಟವರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಸುಮಾರು 12ಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಹರಡಿರುವ ಕುರಿತು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT