ಬುಧವಾರ, ಏಪ್ರಿಲ್ 1, 2020
19 °C
ಇಷ್ಟಕ್ಕೂ ಮಸಮ್ಮತ್‌ ರಷೀದಾ ಮಾಡಿದ ಅಪರಾಧವೇನು ಗೊತ್ತೆ?

ಹೆಣ್ಣಿನ ಜೀವನ ನರಕವಾಗಿಸುವ ಮೂಢನಂಬಿಕೆಗಳು: ಬಾಂಗ್ಲಾದೇಶದ ‘ಹುಲಿ ವಿಧವೆ’ಯರ ವ್ಯಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ಯಾಮ್‌ನಗರ (ಬಾಂಗ್ಲಾದೇಶ) : ಜನ್ಮಕೊಟ್ಟ ಮಕ್ಕಳಿಂದಲೇ ಆಕೆಯೀಗ ಪರಿತ್ಯಕ್ತೆ. ಅವಳನ್ನು ನೆರೆಹೊರೆಯವರು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಜತೆಯಲ್ಲೇ ಆಕೆಗೆ ಮಾಟಗಾತಿ ಎಂಬ ಪಟ್ಟ ಬೇರೆ.

ಇಷ್ಟಕ್ಕೂ ಮಸಮ್ಮತ್‌ ರಷೀದಾ ಮಾಡಿದ ಅಪರಾಧವೇನು ಗೊತ್ತೆ? ನರಭಕ್ಷಕ ಹುಲಿಯಿಂದ ತನ್ನ ಪತಿಯನ್ನು ಕಳೆದುಕೊಂಡಿದ್ದು!

ಬಾಂಗ್ಲಾದೇಶದ ಗ್ರಾಮೀಣ ಭಾಗಗಳಲ್ಲಿ ರಷೀದಾ ಅವರಂತಹ ಮಹಿಳೆಯರಿಗೆ ಸಮಾಜದಿಂದ ಬಹಿಷ್ಕಾರ ಹಾಕಲಾಗುತ್ತದೆ. ಪುರುಷರ ಅಸಹಜ ಸಾವಿಗೆ ಅವರ ಪತ್ನಿಯರ ಮೂಲಕ ಒದಗಿದ ದುರದೃಷ್ಟವೇ ಕಾರಣ ಎಂದು ದೂರಲಾಗುತ್ತದೆ.

‘ನಾನೊಬ್ಬ ಮಾಟಗಾತಿ ಎಂದು ನನ್ನ ಮಕ್ಕಳೇ ನನ್ನನ್ನು ಹೀಯಾಳಿಸಿದರು’ ಎಂದು ರಷೀದಾ ಕಣ್ಣೀರು ಹಾಕುತ್ತಲೇ ಹೇಳುತ್ತಾರೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಹರಡಿಕೊಂಡಿರುವ ಸುಂದರಬನ ಕಾಡಿನ ಅಂಚಿನಲ್ಲಿರುವ ಗಬುರಾ ಎಂಬ ಹಳ್ಳಿ ಅವರೂರು. ಜೇನು ಸಂಗ್ರಹ
ಈ ಹಳ್ಳಿಯ ಪ್ರತಿ ಕುಟುಂಬದ ಮುಖ್ಯ ವೃತ್ತಿ.

ರಷೀದಾ ಅವರ ಪತಿಯು ಜೇನು ಸಂಗ್ರಹಕ್ಕಾಗಿ ಕಾಡಿಗೆ ಹೋದಾಗ ಹುಲಿ ದಾಳಿಗೆ ತುತ್ತಾಗಿದ್ದರು. ‘ಸುಂದರಬನದ ನೈಋತ್ಯ ಪ್ರದೇಶದಲ್ಲಿ ಜೇನು ಚೆನ್ನಾಗಿ ಸಿಗುತ್ತದೆ ಎಂದು ಬಹುತೇಕ ಸಂಗ್ರಹಕಾರರು ಅತ್ತ ಕಡೆಗೇ ಹೋಗುವುದು ರೂಢಿ. ಆದರೆ, ಅದೇ ಭಾಗದಲ್ಲಿ ನರಭಕ್ಷಕ ಹುಲಿಗಳು ಹೆಚ್ಚಾಗಿರುವುದು’ ಎನ್ನುತ್ತಾರೆ ಜಹಂಗೀರ್‌ನಗರ ವಿಶ್ವವಿದ್ಯಾಲಯದ ಹುಲಿತಜ್ಞ ಮುನೀರುಲ್‌ ಖಾನ್‌.

ಹುಲಿಗಳೂ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿವೆ. ಹವಾಮಾನ ಬದಲಾವಣೆ, ಕಾಡಿನಲ್ಲಿ ಹೆಚ್ಚಿರುವ ಮಾನವನ ಚಟುವಟಿಕೆಗಳ ಕಾರಣದಿಂದ ಹುಲಿಗಳ ಆವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಆಹಾರಕ್ಕಾಗಿ ಅವುಗಳು ಹಳ್ಳಿಗಳತ್ತ ಮುಖಮಾಡಲು ಆರಂಭಿಸಿವೆ. ಬಾಂಗ್ಲಾದೇಶದ ಸರಹದ್ದಿನಲ್ಲಿರುವ ಸುಂದರಬನ ಅರಣ್ಯ ಪ್ರದೇಶದಲ್ಲಿ ಸುಮಾರು ನೂರು ಹುಲಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.

2001ರಿಂದ 2011ರ ಅವಧಿಯಲ್ಲಿ ಸುಮಾರು 50 ಹಳ್ಳಿಗಳಲ್ಲಿ ನರಭಕ್ಷಕಗಳು ನಡೆಸಿದ ದಾಳಿಗೆ 519 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪತ್ನಿಯರೆಲ್ಲ ವಿಧವೆಯರಾಗಿ ಈಗ ನರಕಸದೃಶ ಬದುಕು ಸಾಗಿಸುವಂತಾಗಿದೆ. ಅವರೊಂದು ಗೌರವದ ಬದುಕು ಕಂಡುಕೊಳ್ಳಲು ಹಲವು ಸ್ವಯಂಸೇವಾ ಸಂಸ್ಥೆಗಳು ನೆರವಿನಹಸ್ತ ಚಾಚುತ್ತಿವೆ.

ರಜಿಯಾ ಖಾತೂನ್‌ ಅವರದು ಇನ್ನೊಂದು ವಿಧದ ಕಥೆ. 15 ವರ್ಷಗಳ ಹಿಂದೆಯೇ ಅವರು ಪತಿಯನ್ನು ಕಳೆದುಕೊಂಡಿದ್ದಾರೆ. ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದರೂ ಸಂಬಂಧಿಕರಿಂದ ಅವರಿಗೆ ಗುಟ್ಟಾಗಿ ಸಹಾಯ ಸಿಕ್ಕಿದೆಯಂತೆ.

‘ಪತಿಯ ಸಾವಿಗೆ ನನ್ನನ್ನೇ ದೂಷಿಸಲು ಆರಂಭಿಸಿದಾಗ ನನಗೆ ತುಂಬಾ ವ್ಯಥೆಯಾಗಿತ್ತು. ನನ್ನದೇನು ತಪ್ಪಿತ್ತೋ ನನಗೆ ಈಗಲೂ ಗೊತ್ತಾಗುತ್ತಿಲ್ಲ. ಈ 15 ವರ್ಷಗಳಲ್ಲಿ ಪ್ರತಿಕೂಲ ಸನ್ನಿವೇಶಗಳ ಮಧ್ಯೆ ಬದುಕುವುದು ರೂಢಿಯಾಗಿದೆ. ಸಂಬಂಧಿಗಳ ಸಹಕಾರ ಸಿಕ್ಕಿದೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು