ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದೊಂದಿಗೆ ಎಲ್ಲ ಬಾಂಧವ್ಯ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

Last Updated 15 ಮೇ 2020, 1:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದೊಂದಿಗೆ ಎಲ್ಲ ರೀತಿಯ ಬಾಂಧವ್ಯವನ್ನು ಕಳೆದುಕೊಳ್ಳುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ವೈರಸ್ ಇಡೀ ಜಗತ್ತಿಗೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಅವರಿಂದ ಈ ಎಚ್ಚರಿಕೆ ಮೂಡಿಬಂದಿದೆ. ಸೋಂಕಿನಿಂದಾಗಿ ವಿಶ್ವದಾದ್ಯಂತ ಈವರೆಗೆ ಮೃತಪಟ್ಟವರ ಸಂಖ್ಯೆ 3 ಲಕ್ಷ ದಾಟಿದೆ. ಅಮೆರಿಕವೊಂದರಲ್ಲೇ ಸುಮಾರು 80 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ನಾವು ಮಾಡಬೇಕಾದ ಅನೇಕ ಕೆಲಸಗಳಿವೆ. ಚೀನಾದೊಂದಿಗೆ ಎಲ್ಲ ರೀತಿಯ ಬಾಂಧವ್ಯವನ್ನೂ ನಾವು ಕಡಿದುಕೊಳ್ಳಬಹುದಾಗಿದೆ ಎಂದು ಫಾಕ್ಸ್ ಬ್ಯುಸಿನೆಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಚೀನಾದ ವುಹಾನ್ ನಗರದಿಂದ ಇಡೀ ವಿಶ್ವಕ್ಕೆ ಸೋಂಕು ಹರಡಿದೆ ಎಂದು ತಜ್ಞರು ಮತ್ತು ಜನಪ್ರತಿನಿಧಿಗಳು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ಕ್ರಮಕೈಗೊಳ್ಳುವಂತೆ ಟ್ರಂಪ್ ಮೇಲೆ ಕಳೆದ ಕೆಲವು ವಾರಗಳಿಂದ ಒತ್ತಡ ಹೆಚ್ಚುತ್ತಿದೆ.

ಈ ವಿಚಾರವಾಗಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ‘ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುರಿತು ಈಗ ಮಾತನಾಡಲು ಬಯಸುವುದಿಲ್ಲ. ಅವರ ಜೊತೆ ಉತ್ತಮ ಬಾಂಧವ್ಯವಿದೆ. ಆದರೆ ಚೀನಾದ ಬಗ್ಗೆ ತೀರ ಹತಾಶೆಯಾಗಿದೆ’ ಎಂದು ಹೇಳಿದ್ದಾರೆ.

ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ವುಹಾನ್ ನಗರದ ಪ್ರಯೋಗಾಲಯಕ್ಕೆ ಅಂತರರಾಷ್ಟ್ರೀಯ ಸಮುದಾಯದ ತಜ್ಞರನ್ನು ಕಳುಹಿಸಿಕೊಡಲು ಅವಕಾಶ ನೀಡಬೇಕೆಂದು ಅಮೆರಿಕ ಹಲವುಬಾರಿ ಚೀನಾವನ್ನು ಒತ್ತಾಯಿಸಿದೆ. ಆದರೆ ಚೀನಾ ಅದಕ್ಕೆ ಅವಕಾಶ ನೀಡಿಲ್ಲ.

‘ನಾವಲ್ಲಿಗೆ ತಂಡವನ್ನು ಕಳುಹಿಸಬೇಕೆಂದಾಗ ಅವರು ಬೇಡವೆಂದರು. ಅವರು ನಮ್ಮ ಸಹಾಯವನ್ನು ಬಯಸಲಿಲ್ಲ. ಅದು ಸರಿ ಎಂದು ನಾನು ಅಂದುಕೊಂಡಿದ್ದೇನೆ. ಆದರೆ ಅವರು ಏನು ಮಾಡುತ್ತಿದ್ದಾರೆ ಎಂಬುದರ ಅರಿವು ಅವರಿಗೆ ಇರಬೇಕು. ಹೀಗಾಗಿ ಇದು ಅವರ ಮೂರ್ಖತನ, ಅಸಮರ್ಥತೆ ಅಥವಾ ಉದ್ದೇಶಪೂರ್ವಕ ಕೃತ್ಯ ಆಗಿರಬೇಕು’ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರಕ ವೈರಸ್ ಚೀನಾದ ವುಹಾನ್‌ನ ಪ್ರಯೋಗಾಲಯದಿಂದಲೇ ಹರಡಿದೆ ಎಂದು ಟ್ರಂಪ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT