ಬುಧವಾರ, ಜನವರಿ 29, 2020
30 °C

Explainer | ಹೊಸ ದೇಶದ ಸೃಷ್ಟಿ ಹೇಗೆ? ಏನೆಲ್ಲಾ ನಿಯಮಗಳಿವೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಾನು ಸೃಷ್ಟಿಸಿರುವ ‘ಕೈಲಾಸ’ದ ಪೌರತ್ವ ಪಡೆಯುವಂತೆ ವಿಶ್ವದ ಎಲ್ಲ ದೇಶಗಳ ಜನರಿಗೆ ಮುಕ್ತ ಆಹ್ವಾನ ನೀಡಿದ ನಂತರ ಹೊಸ ದೇಶ ರಚನೆಯಾಗುವ ಪ್ರಕ್ರಿಯೆ ಬಗ್ಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಅಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ನಿತ್ಯಾನಂದ ಸ್ವಾಮಿಯ ‘ಕೈಲಾಸ’ ಸೃಷ್ಟಿಯಾಗಿರುವ ವಿಶಾಲ ಶಾಂತಸಾಗರದ ಒಂದು ಮೂಲೆಯಲ್ಲಿರುವ ಬೋಗನ್‌ವಿಲ್ಲಾ ದ್ವೀಪದಲ್ಲಿ ನ.23ರಂದು ಜನಮತಗಣನೆ ಆರಂಭವಾಯಿತು. ನಾವಿನ್ನು ಪಪ್ವಾ ನ್ಯೂಗಿನಿಯಾ ದೇಶದ ಭಾಗವಾಗಿರಲು ಸಾಧ್ಯವಿಲ್ಲ, ನಮಗೆ ಸ್ವಾತಂತ್ರ್ಯಬೇಕು ಎನ್ನುವುದು ಅವರ ಒತ್ತಾಯವಾಗಿತ್ತು. ಈ ಪ್ರಕ್ರಿಯೆ ಡಿ.7ಕ್ಕೆ ಮುಕ್ತಾಯವಾಗಲಿದ್ದು, ಡಿ.20ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಮುಂದಿನ ದಿನಗಳಲ್ಲಿ ವಿಶ್ವ ಭೂಪಟದಲ್ಲಿ ಮತ್ತೊಂದು ಸ್ವತಂತ್ರ ದೇಶ ಉದಯವಾಗಬಹುದು ಎನ್ನುವ ಲೆಕ್ಕಾಚಾರಗಳು ನಡೆದಿವೆ.

ಈ ಜನಮತಗಣನೆಯ ಬೆನ್ನಿಗೇ ಚರ್ಚೆಗೆ ಬಂದಿದ್ದು ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯು ಅದೇ ಶಾಂತ ಸಾಗರದಲ್ಲಿ ಸ್ಥಾಪಿಸಿದ್ದಾರೆ ಎನ್ನಲಾದ ಕೈಲಾಸ ದೇಶ. ಇಂದಿಗೂ ವಿಶ್ವದ ಹಲವೆಡೆ ಸ್ವಾತಂತ್ರ್ಯ ದೇಶಕ್ಕಾಗಿ ಸಾಕಷ್ಟು ಪ್ರಾಂತ್ಯಗಳು, ಜನಾಂಗಗಳು ಹೋರಾಡುತ್ತಿವೆ. ಪಾಕಿಸ್ತಾನದ ಬಲೂಚಿಸ್ತಾನ್, ಸ್ಪೇನ್‌ನ ಕ್ಯಾಟಲೋನಿಯಾ, ಇರಾಕ್‌ನ ಕುರ್ದಿಸ್ತಾನ್, ಚೀನಾದ ಟಿಬೆಟ್‌ ಪ್ರಾಂತ್ಯಗಳಲ್ಲೂ ಸ್ವಾತಂತ್ರ್ಯದ ಹಂಬಲ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !

ಯಾವಾಗ ಒಂದು ಪ್ರಾಂತ್ಯ ದೇಶವಾಗುತ್ತೆ?

ದೇಶವೊಂದನ್ನು ಹೇಗೆ ರೂಪುಗೊಳ್ಳುತ್ತೆ ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ತಾನು ಘೋಷಿಸಿಕೊಂಡ ಸ್ವಾತಂತ್ರ್ಯಕ್ಕೆ ಎಷ್ಟು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು ಮಾನ್ಯತೆ ನೀಡಿದೆ ಎನ್ನುವುದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ವಿಶ್ವಸಂಸ್ಥೆಯು ಜಾಗತಿಕ ಸಂಘಟನೆಯಾಗಿ ಯಾವುದೇ ಪ್ರಾಂತ್ಯಕ್ಕೆ ದೇಶದ ಮಾನ್ಯತೆ ನೀಡುವುದು ಬಹುಮುಖ್ಯ ಮತ್ತು ಅದು ಕೊನೆಯ ಹಂತ ಎಂದು ಪರಿಗಣಿಸಲಾಗಿದೆ.

ಒಂದು ನಿರ್ದಿಷ್ಟ ಭೂಪ್ರದೇಶವನ್ನು ಸ್ವತಂತ್ರ ದೇಶ ಎಂದು ಯಾರು ಘೋಷಿಸಬಹುದು?

ಇದಕ್ಕೂ ನಿರ್ದಿಷ್ಟವಾಗಿ ಇಂಥದ್ದೇ ಎನ್ನುವ ಕಾನೂನುಗಳಿಲ್ಲ. ಜಾರ್ಝಂಡ್‌ನಲ್ಲಿ 2017–18ರಲ್ಲಿ ಪ್ರಬಲವಾಗಿದ್ದ ಪತ್ಥಲ್‌ಗಡಿ ಚಳವಳಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಚಳವಳಿಯ ಭಾಗವಾಗಿ ಆದಿವಾಸಿಗಳು ಹಳ್ಳಿಗಳ ಅಂಚಿನಲ್ಲಿ ಶಾಸನಾಸ್ತಂಭಗಳನ್ನು ಸ್ಥಾಪಿಸಿದ್ದರು. ‘ಈ ಪ್ರದೇಶದಲ್ಲಿ ಗ್ರಾಮಸಭೆಗೇ ಪರಮಾಧಿಕಾರ’ ಎಂದು ಆ ಸ್ತಂಭಗಳು ಘೋಷಿಸಿದ್ದವು. ಇಂದಿಗೂ ಬುಡಕಟ್ಟು ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಸಂಪೂರ್ಣವಾಗಿ ನಿಂತಿಲ್ಲ.

1991ರಿಂದಲೂ ಸೋಮಾಲಿಯಾದ ಸೊಮಾಲಿಲ್ಯಾಂಡ್ ತನ್ನನ್ನು ತಾನು ಪ್ರತ್ಯೇಕ ದೇಶ ಎಂದು ಘೋಷಿಸಿಕೊಂಡಿದೆ. ಆದರೆ ಈವರೆಗೆ ಯಾರೂ ಅದಕ್ಕೆ ಮಾನ್ಯತೆ ಕೊಟ್ಟಿಲ್ಲ. ಸರ್ಬಿಯಾದ ಭಾಗವಾಗಿದ್ದ ಕೊಸೊವೊ 2008ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಕೆಲವೇ ದೇಶಗಳು ಕೊಸೊವೊಗೆ ಮಾನ್ಯತೆ ನೀಡಿವೆ.

ದೇಶವಾಗಲು ಯಾವೆಲ್ಲಾ ನಿಬಂಧನೆಗಳನ್ನು ಪೂರೈಸಬೇಕು?

ನಿರ್ದಿಷ್ಟ ಭೂಪ್ರದೇಶ, ಸಾರ್ವಭೌಮ ಆಳ್ವಿಕೆಯನ್ನು ಒಪ್ಪಲು ಸಿದ್ಧರಿರುವ ಪ್ರಜೆಗಳು, ಸರ್ಕಾರ ಮತ್ತು ಆಳ್ವಿಕೆ ನಡೆಸಲು ಸಿದ್ಧವಾಗಿರುವ ಸಶಕ್ತ ಇತರ, ದೇಶಗಳೊಂದಿಗೆ ಬಾಂಧವ್ಯ ಬೆಸೆಯುವ ಸಾಮರ್ಥ್ಯ ಇರುವ ನಾಯಕರು ಇದ್ದರೆ ಒಂದು ದೇಶವಾಗಬಹುದು ಎಂದು 1933ರ ಮೊಟೊವಿಡೊ ಸಮಾವೇಶ ಘೋಷಿಸಿತು.

ದೇಶವೆಂದು ಘೋಷಿಸಿಕೊಳ್ಳುವ, ಮಾನ್ಯತೆ ನೀಡುವ ಪ್ರಕ್ರಿಯೆಗೆ ಈ ಘೋಷಣೆಯೇ ಇಂದಿಗೂ ಸ್ಥೂಲ ತಳಹದಿ. ದೇಶವೆಂದು ಘೋಷಿಸಿಕೊಳ್ಳುವ ಪ್ರಕ್ರಿಯೆಗೆ ರಾಷ್ಟ್ರೀಯತೆಯಲ್ಲಿ ಸಮಾನ ನಂಬಿಕೆ ಇರುವ ಗಮನಾರ್ಹ ಪ್ರಮಾಣದ ಜನಸಂಖ್ಯೆ ಇರುವುದು ಗಮನಾರ್ಹ ಸಂಗತಿ. ಈಗಾಗಲೇ ಒಂದು ದೇಶದ ಭಾಗವಾಗಿರುವ ಪ್ರಾಂತ್ಯದ ಬಹುಸಂಖ್ಯಾತರು ತಮಗೆ ಸ್ವಾತಂತ್ರ್ಯ ಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸುವ ಜೊತೆಗೆ ಆ ಪ್ರಾಂತ್ಯದಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗುವುದು ಎನ್ನುವ ಭರವಸೆ ಕೊಡಬೇಕು. ಈ ಭರವಸೆ ವಾಸ್ತವಿಕವಾಗಿದೆ ಮತ್ತು ನಂಬಲರ್ಹ ಎಂದು ಇತರ ದೇಶಗಳು ಒಪ್ಪುವುದು ಬಹಳ ಮುಖ್ಯ.

ಸ್ವಯಂ ಘೋಷಣೆ ಮತ್ತು ಪ್ರಾದೇಶಿಕ ಏಕತೆ

ಜೂನ್ 1945ರಲ್ಲಿ ‘ಸ್ವಯಂ ಘೋಷಣೆ’ಯನ್ನು ವಿಶ್ವಸಂಸ್ಥೆಯ ನಿಯಮಾವಳಿಗಳಲ್ಲಿ ಸೇರಿಸಲಾಯಿತು. ಒಂದು ಜನಸಮೂಹವು ತನ್ನನ್ನು ಯಾರು ಮತ್ತು ಹೇಗೆ ಆಳ್ವಿಕೆ ನಡೆಸಬೇಕು ಎಂದು ಘೋಷಿಸಿಕೊಳ್ಳುವ ಹಕ್ಕು ಅದರಲ್ಲಿ ಸಿಗುತ್ತದೆ. ಪ್ರತಿದೇಶವೂ ಇತರ ದೇಶಗಳ ಪ್ರಾದೇಶಿಕ ಗಡಿಗಳನ್ನು ಗೌರವಿಸಬೇಕು ಎನ್ನುವುದು ಮತ್ತೊಂದು ಬಹು ಒಪ್ಪಿತ ಅಂತರರಾಷ್ಟ್ರೀಯ ನಿಯಮ.

ಹೊಸ ದೇಶಗಳ ಸೃಷ್ಟಿಯ ವಿಚಾರದಲ್ಲಿ ಈ ನಿಯಮವೂ ಕೆಲವೊಮ್ಮೆ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಒಂದು ದೊಡ್ಡ ಜನಸಮುದಾಯವು ತಾನು ಭಾಗವಾಗಿದ್ದ ದೇಶದಿಂದ ಹೊರಬಂದು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ವಿಶ್ವಸಂಸ್ಥೆಯ ನಿಯಮಗಳಲ್ಲಿ ಅವಕಾಶವೇನೋ ಇದೆ. ಆದರೆ ಇಂಥ ಭೂಪ್ರದೇಶಕ್ಕೆ ಅಥವಾ ಅದು ಘೋಷಿಸಿಕೊಂಡ ಸ್ವಾತಂತ್ರ್ಯಕ್ಕೆ ಇತರ ದೇಶಗಳು ಮಾನ್ಯತೆ ನೀಡಿದರೆ ಮತ್ತೊಂದು ದೇಶದ ಪ್ರಾದೇಶಿಕ ಗಡಿಗೆ ಅಗೌರವ ತೋರಿದಂತೆ ಆಗುತ್ತೆ.

ವಿಶ್ವದಲ್ಲಿ ಹಲವು ವಸಾಹತು ಆಡಳಿತಗಳು ಇದ್ದ ಕಾಲದಲ್ಲಿ ಸ್ವಯಂ ಘೋಷಣೆ ಪರಿಣಾಮಕಾರಿ ಎನಿಸಿತ್ತು. ಇಂಥ ಪ್ರದೇಶಗಳಲ್ಲಿ ಜನಸಮುದಾಯದ ಹಕ್ಕುಗಳನ್ನು ಗುರುತಿಸುವುದು ಸುಲಭವೂ ಆಗಿತ್ತು. 
ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸ್ವಾತಂತ್ರ್ಯ ಘೋಷಣೆ ವಿಚಾರವು ಹಲವು ಸಂದಿಗ್ಧಗಳಿಂದ ಕೂಡಿದೆ. ಸಾಕಷ್ಟು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ವತಂತ್ರ ದೇಶಕ್ಕಾಗಿ ಆರಂಭವಾದ ಹಲವು ಹೋರಾಟಗಳು ಪ್ರಾದೇಶಿಕ ಸ್ವಾಯತ್ತತೆ ದಕ್ಕಿಸಿಕೊಳ್ಳುವುದರಲ್ಲಿ ಪರ್ಯಾವಸನಗೊಂಡಿವೆ. ಕೆಲವಂತೂ ಹತ್ತಾರು ವರ್ಷಗಳಿದ ಸಶಸ್ತ್ರ ಹೋರಾಟಗಳು ನಡೆಯುತ್ತಿದ್ದರೂ ತಾರ್ಕಿಕ ಅಂತ್ಯ ಕಂಡಿಲ್ಲ.

ಹೀಗಾಗಿಯೇ ತೈವಾನ್ ತನ್ನನ್ನು ತಾನು ಸ್ವತಂತ್ರ ದೇಶ ಎಂದು ಕರೆದುಕೊಂಡರೂ, ಇತರ ದೇಶಗಳು ಚೀನಾದ ಭಾವನೆಗೆ ಬೆಲೆಕೊಟ್ಟು ತೈವಾನ್ ಮಾತನ್ನು ಒಪ್ಪಲು ತಯಾರಿಲ್ಲ. ಚೀನಾದ ಆಕ್ಷೇಪಗಳಿಂದಾಗಿಯೇ ಕಳೆದ ವರ್ಷ ಏರ್‌ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ತೈವಾನ್‌ ಹೆಸರನ್ನು ಚೀನೀಸ್ ತೈಪೆ ಎಂದು ಬದಲಿಸಬೇಕಾಯಿತು.

ವಿಶ್ವಸಂಸ್ಥೆಯ ಮಾನ್ಯತೆ ಏಕೆ ಮುಖ್ಯ

ಯಾವುದೇ ದೇಶಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕರೆ ಮಾತ್ರ ವಿಶ್ವಬ್ಯಾಂಕ್, ವಿಶ್ವ ಹಣಕಾಸು ಸಂಸ್ಥೆಯ ಸಂಪನ್ಮೂಲಗಳು ಲಭ್ಯವಾಗುತ್ತವೆ. ವಿಶ್ವಸಂಸ್ಥೆಯ ಮಾನ್ಯತೆ ಇರುವ ದೇಶದ ಕರೆನ್ಸಿ ಮಾತ್ರ  ಸಿಕ್ಕರೆ ಮಾತ್ರ ಅದು ಇತರ ದೇಶಗಳ ಜೊತೆಗೆ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ವಿಶ್ವಸಂಸ್ಥೆಯ ಕೆಲ ಸದಸ್ಯ ದೇಶಗಳು ವೈಯಕ್ತಿಕವಾಗಿ ಹೊಸ ದೇಶಕ್ಕೆ ಮಾನ್ಯತೆ ಕೊಡಬಹುದು. ಆದರೆ ಇಂಥ ಹಲವು ದೇಶಗಳ ಸದಸ್ಯತ್ವ ಹೊಂದಿರುವ ವಿಶ್ವಸಂಸ್ಥೆಯು ಒಂದು ಸಂಘಟನೆಯಾಗಿ ಹೊಸ ದೇಶಕ್ಕೆ ಮಾನ್ಯತೆ ನೀಡದಿರಬಹುದು.

ಇಂಥ ಬೆಳವಣಿಗೆಗಳು ಸಿಡಿಯುವ ಮೊದಲು ಭಾಗವಾಗಿದ್ದ ದೇಶದ ಕೋಪವನ್ನು ಹೊಸ ದೇಶ ಎದುರಿಸಬೇಕಾದ ಸಂದಿಗ್ಧಕ್ಕೆ ದೂಡುತ್ತದೆ. ಮಾತ್ರವಲ್ಲ, ವಿಶ್ವ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೂ ಸಾಕಷ್ಟು ತೊಡಕುಗಳನ್ನು ಉಂಟು ಮಾಡುತ್ತೆ.

ದೊಡ್ಡಣ್ಣಂದಿರ ಬೆಂಬಲ ಮುಖ್ಯ

ವಿಶ್ವದ ದೊಡ್ಡ ಆರ್ಥಿಕ ಶಕ್ತಿಗಳು ಯಾರ ಬೆನ್ನಿಗಿವೆ ಎನ್ನುವುದರ ಮೇಲೆ ನೂತನ ಪ್ರಾಂತ್ರ್ಯದ ಸ್ವಾತಂತ್ರ್ಯ ಘೋಷಣೆಯ ಹಣೆಬರಹ ನಿರ್ಧಾರವಾಗುತ್ತೆ. ಪೊರ್ಚುಗೀಸ್‌ ದೇಶದ ವಸಾಹತಾಗಿದ್ದ ಪೂರ್ವ ತೈಮೋರ್‌ ಮೇಲೆ ಇಂಡೋನೇಶಿಯಾ 1960ರಲ್ಲಿ ಆಕ್ರಮಣ ಮಾಡಿತು. ಆಗ ಪಶ್ಚಿಮ ದೇಶಗಳಿಗೆ ರಷ್ಯಾ ಎದುರಿಸಲು ಇಂಡೋನೇಶಿಯಾದ ನೆರವು ಬೇಕಿತ್ತು. ಹೀಗಾಗಿ ಪೂರ್ವ ತೈಮೋರ್‌ನ ನೋವುಗಳಿಗೆ ಯಾರೂ ಅಂಥ ಗಮನ ಕೊಡಲಿಲ್ಲ. 1990ರ ಹೊತ್ತಿಗೆ ವಿಶ್ವದಲ್ಲಿ ಶಕ್ತಿಪಲ್ಲಟವಾಯಿತು. 1999ರ ಹೊತ್ತಿಗೆ ಪೂರ್ವ ತೈಮೋರ್‌ ಜನಮತಗಣನೆ ನಡೆಸಬೇಕು ಎಂದು ಒತ್ತಾಯಿಸಿತು. 2002ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಹೊತ್ತಿಗೆ ವಿಶ್ವದ ಬಲಾಢ್ಯ ದೇಶಗಳಿಗೆ ಇಂಡೋನೇಶಿಯಾದ ನೆರವು ಮೊದಲಿನಷ್ಟು ಅಗತ್ಯವಿರಲಿಲ್ಲ.

(ಮಾಹಿತಿ ವಿವಿಧ ವೆಬ್‌ಸೈಟ್‌ಗಳು. ಬರಹ: ಡಿ.ಎಂ.ಘನಶ್ಯಾಮ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು