ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಮಾಡಬೇಕಿದ್ದರೆ ಭಾರತಕ್ಕೆ ಬನ್ನಿ: ಉದ್ಯಮಿಗಳಿಗೆ ಮೋದಿ ಆಹ್ವಾನ 

Last Updated 25 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವಿರೇ... ಹಾಗಿದ್ದರೆ ಭಾರತಕ್ಕೆ ಬನ್ನಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಉದ್ಯಮಿಗಳಿಗೆ ಬುಧವಾರ ಆಹ್ವಾನ ನೀಡಿದರು.

ಇಲ್ಲಿ ಆಯೋಜಿಸಿದ್ದ ಬ್ಲೂಮ್‌ಬರ್ಗ್‌ ಜಾಗತಿಕ ವ್ಯಾಪಾರ ವೇದಿಕೆಯಲ್ಲಿ ಮಾತನಾಡುತ್ತಾ ಭಾರತದಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಉದ್ಯಮಿಗಳ ಗಮನ ಸೆಳೆದರು. ‘ಭಾರತವು ಈಚೆಗಷ್ಟೇ ಕಾರ್ಪೊರೇಟ್‌ ತೆರಿಗೆಗಳಲ್ಲಿ ಐತಿಹಾಸಿಕ ಕಡಿತ ಮಾಡಿದೆ. ದೇಶದಲ್ಲಿ ವ್ಯಾಪಾರದ ವಾತಾವರಣವನ್ನು ಉತ್ತಮಪಡಿಸಲು ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆ. ಭಾರತದಲ್ಲಿ ಹೂಡಿಕೆ ಮಾಡುವವರಿಗೆ ಇದು ಸುವರ್ಣಾವಕಾಶ’ ಎಂದರು.

‘ನೀವು ನವೋದ್ಯಮ ಆರಂಭಿಸಲು ಇಚ್ಛಿಸುವುದಿದ್ದರೆ, ಮೂಲಸೌಲಭ್ಯ ಕ್ಷೇತ್ರದ ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ, ನಗರೀಕರಣದತ್ತ ಸಾಗುತ್ತಿರುವ ದೇಶದಲ್ಲಿ ಹೂಡಿಕೆ ಮಾಡಲು ಇಚ್ಛಿಸುವಿರಾದರೆ ಭಾರತಕ್ಕೆ ಬನ್ನಿ ಎಂದು ಮೋದಿ ಉದ್ಯಮಿಗಳನ್ನು ಆಹ್ವಾನಿಸಿದರು.

‘ಭಾರತವು ತನ್ನ ನಗರಗಳಿಗೆ ಆಧುನಿಕ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲೂ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಭಾರತದಲ್ಲೀಗ ವ್ಯಾಪಾರ ಜಗತ್ತನ್ನು ಮತ್ತು ಸಂಪತ್ತನ್ನು ವೃದ್ಧಿಸುವವರನ್ನು ಗೌರವಿಸುವ ಸರ್ಕಾರವಿದೆ. ಹೊಸ ಸರ್ಕಾರವು ಈಗತಾನೇ ಮೂರು– ನಾಲ್ಕು ತಿಂಗಳುಗಳನ್ನು ಪೂರೈಸಿದೆ. ಇದು ಆರಂಭವಷ್ಟೇ, ಇನ್ನೂ ಸಾಕಷ್ಟು ದೂರ ಸಾಗುವುದಿದೆ. ಈ ಪ್ರಯಾಣದಲ್ಲಿ ಜಾಗತಿಕ ಉದ್ಯಮಿಗಳನ್ನು ಸೇರಿಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ’ ಎಂದರು.

ಗಾಂಧಿ ನೆನಪಿನ ಶಾಂತಿ ಉದ್ಯಾನ, ಸೌರ ಪಾರ್ಕ್‌ : ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ನಿರ್ಮಿ
ಸಲಾಗಿರುವ ಸೌರ ಪಾರ್ಕ್‌ ಹಾಗೂ ಗಾಂಧಿ ಶಾಂತಿ ಉದ್ಯಾನವನ್ನು ಪ್ರಧಾನಿ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು. ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹಾಗೂ ಜಗತ್ತಿನ ಇತರ ಕೆಲವು
ನಾಯಕರು ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು.

ಗಾಂಧೀಜಿಯ 150ನೇ ಜನ್ಮದಿನದ ಅಂಗವಾಗಿ ‘ಸಮಕಾಲೀನ ಜಗತ್ತಿನಲ್ಲಿ ಗಾಂಧಿಯ ಪ್ರಸ್ತುತತೆ’ ಕುರಿತ ವಿಶೇಷ ಕಾರ್ಯಕ್ರಮವನ್ನು ಭಾರತವು ಇಲ್ಲಿ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಗಾಂಧೀಜಿಯ 150ನೇ ಜನ್ಮದಿನದ ಸ್ಮರಣಾರ್ಥ ವಿಶ್ವಸಂಸ್ಥೆ ಹೊರತಂದಿರುವ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಯಿತು.

ಹವಾಮಾನ ಬದಲಾವಣೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಭಾರತದ ಬದ್ಧತೆಯ ಪ್ರತೀಕವಾಗಿ ಇಲ್ಲಿ ಭಾರತವು ಸೌರ ಪಾರ್ಕ್‌ ಸ್ಥಾಪಿಸಿದೆ. 10 ಲಕ್ಷ ಡಾಲರ್‌ (ಸುಮಾರು ₹ 7.10 ಕೋಟಿ) ವೆಚ್ಚದಲ್ಲಿ ವಿಶ್ವಸಂಸ್ಥೆಯ ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ಫಲಕ ಎಂಬಂತೆ ಒಟ್ಟಾರೆ 193 ಸೌರ ಫಲಕಗಳನ್ನು ವಿಶ್ವಸಂಸ್ಥೆಯ ಕಚೇರಿ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ.

ಈ ಸೌರ ಫಲಕಗಳು 50ಕಿಲೊ ವಾಟ್‌ ವಿದ್ಯುತ್‌ ಉತ್ಪಾದಿಸಲಿವೆ. ಇದು 30,000 ಕೆ.ಜಿ. ಕಲ್ಲಿದ್ದಲಿನಿಂದ ಉತ್ಪಾದಿಸಬಹುದಾದ ವಿದ್ಯುತ್ತಿಗೆ ಸಮನಾದುದು.

ಗಾಂಧಿ ಶಾಂತಿ ಉದ್ಯಾನವು ಒಂದು ವಿನೂತನ ಪ್ರಯೋಗವಾಗಿದೆ. ಗಾಂಧೀಜಿಯ 150ನೇ ಜನ್ಮದಿನಾಚರಣೆಯ ಅಂಗವಾಗಿ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಸುಮಾರು 600 ಎಕರೆ ವಿಸ್ತಾರದ ಕ್ಯಾಂಪಸ್‌ನಲ್ಲಿ 150 ಗಿಡಗಳನ್ನು ನೆಡಲಾಗುವುದು. ಈ ಗಿಡಗಳನ್ನು ಸ್ಥಳೀಯರು ತಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ದತ್ತು ತೆಗೆದುಕೊಳ್ಳಬಹುದಾಗಿದೆ.

ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಗೆ ಸಾಲ

ಸೌರ ವಿದ್ಯುತ್‌ ಉತ್ಪಾದನೆ ಮತ್ತು ಹವಾಮಾನ ಸಂಬಂಧಿತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಗೆ 15 ಕೋಟಿ ಡಾಲರ್‌ (₹ 1,065 ಕೋಟಿ) ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದರು.

ಇಲ್ಲಿ ಆಯೋಜಿಸಿದ್ದ ಭಾರತ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪೆಸಿಫಿಕ್‌ ದ್ವೀಪ ರಾಷ್ಟ್ರಗಳ (ಪಿಎಸ್‌ಐಡಿಎಸ್‌) ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಹೆಚ್ಚಿನ ಪರಿಣಾಮ ಉಂಟುಮಾಡುವ, ತಮ್ಮ ಆಯ್ಕೆಯ ಅಭಿವೃದ್ದಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಸದಸ್ಯ ರಾಷ್ಟ್ರಗಳಿಗೆ ತಲಾ 10 ಲಕ್ಷ ಡಾಲರ್‌ನಂತೆ ಒಟ್ಟಾರೆ 1.20 ಕೋಟಿ ಡಾಲರ್‌ (₹ 85 ಕೋಟಿ) ಅನುದಾನ ನೀಡುವುದಾಗಿಯೂ ಘೋಷಿಸಿದರು.

‘ಪೆಸಿಫಿಕ್‌ ದ್ವೀಪರಾಷ್ಟ್ರಗಳಿಗೆ 15 ಕೋಟಿ ಡಾಲರ್‌ ಸಾಲ ಘೋಷಿಸ ಲಾಗಿದ್ದು, ಪಿಎಸ್‌ಐಡಿಎಸ್‌ ಸದಸ್ಯ ರಾಷ್ಟ್ರಗಳು ನವೀಕರಿಸಬಹುದಾದ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮತ್ತು ಹವಾಮಾನ ವೈಪ‍ರೀತ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯಕ್ಕೆ ಅನುಸಾರವಾಗಿ ಈ ಸಾಲವನ್ನು ಬಳಸಿಕೊಳ್ಳಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಮೋದಿ ಪಿತಾಮಹ– ಟ್ರಂಪ್‌ ಮಾತು ಬೆಂಬಲಿಸದವರು ಭಾರತೀಯರಲ್ಲ’

ನವದೆಹಲಿ: ‘ಮೋದಿ ಅವರು ಭಾರತದ ಪಿತಾಮಹ ಎಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತನ್ನು ಒಪ್ಪದವರು ತಾವು ಭಾರತೀಯರು ಎಂದು ಭಾವಿಸಿಲ್ಲ’ ಎಂದು ಕೆಂದ್ರದ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮಂಗಳವಾರ ಮೋದಿ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಮೋದಿಯನ್ನು ‘ಭಾರತದ ಪಿತಾಮಹ’ ಎಂದು ಬಣ್ಣಿಸಿದ್ದರು.

‘ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹಿಂದೆಂದೂ ಲಭಿಸದಂಥ ಗೌರವ ಲಭಿಸುತ್ತಿದೆ. ವಿದೇಶದಲ್ಲಿ ನೆಲೆಸುತ್ತಿರುವ ಭಾರತೀಯರೂ ಇಂದು ತಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ. ಇದಕ್ಕೆ ಮೋದಿ ಅವರ ವ್ಯಕ್ತಿತ್ವ ಮತ್ತು ಅವರ ವೈಯಕ್ತಿಕ ಪ್ರಭಾವವೇ ಕಾರಣ. ಈ ಹಿಂದೆ ಅಮೆರಿಕದ ಯಾವುದೇ ಅಧ್ಯಕ್ಷ ಭಾರತದ ಯಾವುದೇ ಪ್ರಧಾನಿಯ ಬಗ್ಗೆ ಇಂಥ ಮಾತುಗಳನ್ನು ಆಡಿದ್ದನ್ನು ನಾನು ಕೇಳಿಲ್ಲ. ಈ ಮಾತುಗಳ ಬಗ್ಗೆ ಯಾರಿಗಾದರೂ ಹೆಮ್ಮೆ ಎನಿಸುವುದಿಲ್ಲ ಎಂದಾದರೆ ಅವರು ತಮ್ಮನ್ನು ತಾವು ಭಾರತೀಯ ಎಂದು ಪರಿಗಣಿಸದೇ ಇರಬಹುದು’ ಎಂದು ಅವರು ಹೇಳಿದ್ದಾರೆ.

‘ಭಾರತಕ್ಕೆ ಒಬ್ಬರೇ ರಾಷ್ಟ್ರಪಿತ ಎಂದು ಕಾಂಗ್ರೆಸ್‌ ಹೇಳಿದೆಯಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅದನ್ನು ಅವರು ಟ್ರಂಪ್‌ ಜೊತೆಗೇ ಚರ್ಚಿಸಬೇಕು’ ಎಂದರು.

ಟ್ರಂಪ್‌ ಸಲಹೆ ಬೇಕಿಲ್ಲ: ಕಾಂಗ್ರೆಸ್‌

ಟ್ರಂಪ್‌ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಈ ಹೊಗಳಿಕೆಯಿಂದ ಖಂಡಿತವಾಗಿಯೂ ನನಗೆ ಹೆಮ್ಮೆಯಾಗಿಲ್ಲ. ಇದು ಮಹಾತ್ಮ ಗಾಂಧಿಗೆ ಮಾಡಿದ ಅಪಮಾನ ಎಂದು ನಾನು ಭಾವಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸಚಿವ ಜಿತೇಂದ್ರ ಸಿಂಗ್‌ ಅವರಿಗೆ ಪ್ರತ್ಯುತ್ತರ ನೀಡಿರುವ ರಮೇಶ್‌, ‘ಸಿಂಗ್‌ ಅವರೇ ನಿಮ್ಮ ಮಾನದಂಡದ ಪ್ರಕಾರ ನಾನು ಭಾರತೀಯನಲ್ಲ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ತಮ್ಮ ರಾಷ್ಟ್ರಪಿತ ಯಾರು ಎಂಬುದನ್ನು ವಿದೇಶದ ನಾಯಕನೊಬ್ಬ ಭಾರತೀಯರಿಗೆ ತಿಳಿಹೇಳುವ ಅಗತ್ಯವಿಲ್ಲ. ಅದನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಭಾರತೀಯರಿಗಿದೆ’ ಎಂದು ಕಾಂಗ್ರೆಸ್‌ ವಕ್ತಾರ ರಾಜೀವ್‌ ತ್ಯಾಗಿ ಹೇಳಿದ್ದಾರೆ.

***

ಟ್ರಂಪ್‌ ಅವರು ಮೋದಿಯನ್ನು ‘ಭಾರತದ ಪಿತಾಮಹ’ ಎಂದು ಬಣ್ಣಿಸಿದ್ದು ಅತಿಶಯೋಕ್ತಿ ಮತ್ತು ಪೊಳ್ಳು ಮಾತು. ಅದನ್ನು ಗಂಭೀರವಾಗಿ ಪರಿಗಣಿಸಬಾರದು

-ಡಿ. ರಾಜಾ, ಸಿಪಿಐ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT