ಗುರುವಾರ , ಅಕ್ಟೋಬರ್ 17, 2019
24 °C

ಕರ್ಫ್ಯೂ ತೆಗೆದರೆ ರಕ್ತದೋಕುಳಿ: ಇಮ್ರಾನ್‌ ಎಚ್ಚರಿಕೆ

Published:
Updated:

ವಿಶ್ವಸಂಸ್ಥೆ: ಕರ್ಫ್ಯೂ ತೆಗೆದರೆ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯಲಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಭಾರತ–ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಅದರ ಪರಿಣಾಮ ಇತರ ದೇಶಗಳ ಮೇಲೂ ಆಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ. 

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅವರು ಮಾತನಾಡಿದರು. ‘ಎರಡು ದೇಶಗಳ ನಡುವೆ ಯುದ್ಧವಾದರೆ ಏನು ಬೇಕಿದ್ದರೂ ಆಗಬಹುದು. ನೆರೆಯ ದೇಶಕ್ಕಿಂತ ಏಳು ಪಟ್ಟು ಚಿಕ್ಕದಾಗಿರುವ ದೇಶಕ್ಕೆ ಶರಣಾಗತಿ ಅಥವಾ ಕೊನೆಯವರೆಗೆ ಹೋರಾಟದ ಆಯ್ಕೆಗಳು ಮಾತ್ರ ಇದ್ದರೆ ನೀವು ಏನು ಮಾಡುವಿರಿ? ಈ ‍ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಿದ್ದೇನೆ. ನಾವು ಹೋರಾಡುತ್ತೇವೆ. ಅಣ್ವಸ್ತ್ರ ಇರುವ ದೇಶವೊಂದು ಕೊನೆಯವರೆಗೆ ಹೋರಾಡಿದರೆ ಅದರ ಪರಿಣಾಮ ಗಡಿಗಳನ್ನು ಮೀರಿ ಸಾಗುತ್ತದೆ’ ಎಂದು ಇಮ್ರಾನ್‌ ಯುದ್ಧದ ಅನಾಹುತಗಳನ್ನು ವಿವರಿಸಿದ್ದಾರೆ. 

ಕಾಶ್ಮೀರದಲ್ಲಿ ಅಮಾನವೀಯ ಕರ್ಫ್ಯೂ ಇದೆ. ಅದನ್ನು ತೆಗೆಯಬೇಕು. ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ‘ನಾನು ಕಾಶ್ಮೀರದಲ್ಲಿ ಇದ್ದಂತೆ ಕಲ್ಪಿಸಿಕೊಳ್ಳುತ್ತಿದ್ದೇನೆ. 55 ದಿನಗಳವರೆಗೆ ನನ್ನನ್ನು ಕೂಡಿಡಲಾಗಿದೆ. ಅತ್ಯಾಚಾರಗಳು ನಡೆಯುತ್ತಿದೆ. ಭಾರತದ ಸೇನೆಯ ಯೋಧರು ಮನೆಗಳಿಗೆ ಪ್ರವೇಶಿಸುತ್ತಿದ್ದಾರೆ. ಇಂತಹ ಅವಮಾನದಲ್ಲಿ ಬದುಕಲು ನಾನು ಬಯಸುತ್ತೇನೆಯೇ? ಅಂತಹ ಸಂದರ್ಭದಲ್ಲಿ ನಾನು ಬಂದೂಕು ಕೈಗೆತ್ತಿಕೊಳ್ಳುತ್ತೇನೆ. ಜನರು ಉಗ್ರವಾದದತ್ತ ಸಾಗುವಂತೆ ನೀವೇ ಬಲವಂತ ಮಾಡುತ್ತಿದ್ದೀರಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿಭಾರತದ ಕೊಡುಗೆ ಯುದ್ಧವಲ್ಲ, ಬುದ್ಧ: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಮ್ರಾನ್‌ ನೇರವಾಗಿಯೇ ಟೀಕಿಸಿದರು. ಅವರು ಆರ್‌ಎಸ್‌ಎಸ್‌ನ ಆಜೀವ ಸದಸ್ಯ. ಈ ಸಂಘಟನೆಯು ಮುಸ್ಲಿಂ ಸಮುದಾಯವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದರು.  

ಇಮ್ರಾನ್‌ ಭಾಷಣಕ್ಕೆ ಮೊದಲೇ ಮೋದಿ ಅವರು ಮಹಾಧಿವೇಶನದಲ್ಲಿ ಮಾತನಾಡಿದ್ದರು. ಮೋದಿ ಅವರು ಶಾಂತಿಯ ಮಹತ್ವವನ್ನು ಪ್ರತಿಪಾದಿಸಿದ್ದರು. ಆದರೆ, ಇಮ್ರಾನ್‌ ಮಾತು ಅದಕ್ಕೆ ವ್ಯತಿರಿಕ್ತವಾಗಿತ್ತು. 

Post Comments (+)