ಬುಧವಾರ, ನವೆಂಬರ್ 30, 2022
17 °C

ಹೆದರಿಕೆಯಿಂದ ಅಡಗಿಕೊಂಡಿದ್ದಾರೆಯೇ ಕಿಮ್‌ ಜಾಂಗ್‌ ಉನ್‌? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಹೆದರಿಕೆಯಿಂದ ಅಡಗಿ ಕುಳಿತಿದ್ದಾರೆಯೇ? 

ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದಿಂದ ಬೇಸತ್ತು, ಅಲ್ಲಿಂದ ತಪ್ಪಿಸಿಕೊಂಡು ಸದ್ಯ ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ಮಾನವಹಕ್ಕುಗಳ ಹೋರಾಟಗಾರ್ತಿ, ಬರಹಗಾರ್ತಿ ಪಾರ್ಕ್‌ ಯೋನ್‌ ಮಿ, ಕಿಮ್‌ ಜಾಂಗ್‌ ಉನ್‌ ಅವರ ಸುತ್ತಲೂ ಹಬ್ಬಿರುವ ಊಹಾಪೋಹಗಳ ಬಗ್ಗೆ ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: 

‘ಅತಿದೊಡ್ಡ ಹೇಡಿ ಮತ್ತು ಸ್ವಾರ್ಥಿ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸತ್ತಿಲ್ಲ. ಅಥವಾ ಅನಾರೋಗ್ಯಕ್ಕೂ ಈಡಾಗಿಲ್ಲ ಎಂದು ನನ್ನ ಮೂಲಗಳು ತಿಳಿಸಿವೆ. ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೊನಾ ವೈರಸ್‌ ಇಲ್ಲ ಎಂದು ಜಗತ್ತಿಗೆ ಸುಳ್ಳು ಹೇಳಲಾಗಿದೆ. ಆದರೆ, ಅಲ್ಲಿ ವೈರಸ್‌ ವ್ಯಾಪಕವಾಗಿ ಹಬ್ಬಿದೆ. ವೈರಸ್‌ ತನಗೆಲ್ಲಿ ತಗುಲುತ್ತದೆಯೋ ಎಂಬ ಭಯದಲ್ಲಿ ಆತ ಅಡಗಿ ಕುಳಿತಿದ್ದಾನೆ,’ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ​

‘ಅವರ ಪೂರ್ವಿಕರು ನಾಗರಿಕರನ್ನು ಲೆಕ್ಕಿಸದೇ ಸಾಯಲು ಬಿಟ್ಟು, ತಮ್ಮನ್ನು ಮಾತ್ರ ರಕ್ಷಿಸಿಕೊಂಡಂತೆ ಕಿಮ್‌ ಜಾಂಗ್‌ ಉನ್‌ ಕೂಡ ಜನರನ್ನು ಸಾಯಲು ಬಿಟ್ಟು ತಾನು ಸುರಕ್ಷಿತವಾಗಿದ್ದಾನೆ. ಉತ್ತರ ಕೊರಿಯಾವನ್ನು ಅಂದಾಜಿಸಲು ಜಗತ್ತಿನ ಮಾಧ್ಯಮಗಳು ಹೇಗೆ ವಿಫಲವಾಗಿವೆ ಎಂದು ಸಾಬೀತು ಮಾಡಲು ಕಿಮ್‌ ಜಾಂಗ್‌ ಉನ್‌ಗೆ ಅವಕಾಶ ನೀಡಬೇಡಿ,’ ಎಂದು ಪಾರ್ಕ್‌ ಯೋನ್‌ ಮಿ ಅವರು ಟ್ವೀಟ್‌ ಮಾಡಿದ್ದಾರೆ. 

ಇದಕ್ಕೂ ಹಿಂದೆ ಭಾನುವಾರ ಟ್ವೀಟ್‌ ಮಾಡಿದ್ದ ಪಾರ್ಕ್‌ ಯೋನ್‌ ಮಿ, ‘ಉತ್ತರ ಕೊರಿಯಾದಿಂದಲೇ ಅಧಿಕೃತ ಮಾಹಿತಿ ಬರುವವರೆಗೆ ಕಿಮ್‌ ಜಾಂಗ್‌ ಉನ್‌ಗೆ ಏನಾಗಿದೆ ಎಂದು ಹೇಳಲು ಕಷ್ಟ. ಅದರೆ, ಉತ್ತರ ಕೊರಿಯಾದ ಜನರನ್ನು ದೇವರು ಸರ್ವಾಧಿಕಾರದಿಂದ ಪಾರು ಮಾಡಲಿ ಎಂದು ಪ್ರಾರ್ಥಿಸೋಣ,’ ಎಂದಿದ್ದರು. 

ಆದರೆ ಸೋಮವಾರ ತಮ್ಮ ಮೂಲಗಳ ಮಾಹಿತಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಪಾರ್ಕ್‌, ‘ಕಿಮ್‌ ಜಾಂಗ್‌ ಉನ್‌ಗೆ ಏನೂ ಆಗಿಲ್ಲ,’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. 

ಇದನ್ನೂ ಓದಿ: ​ 

ಯಾರು ಈ ಪಾರ್ಕ್‌ ಯೋನ್‌ ಮಿ

ಮೂಲತಃ ಉತ್ತರ ಕೊರಿಯಾದವರಾದ ಪಾರ್ಕ್‌ ಯೋನ್‌ ಮಿ (26) ಚೀನಾಕ್ಕೆ ಪಲಾಯನಗೊಂಡು ನಂತರ 2009ರಿಂದ ದಕ್ಷಿಣ ಕೊರಿಯಾದಲ್ಲಿ ನೆಲೆಸಿದ್ದಾರೆ. ಸುಶಿಕ್ಷಿತ, ಉತ್ತರ ಕೊರಿಯಾದ ರಾಜಕೀಯದೊಂದಿಗೆ ನಂಟು ಹೊಂದಿದ್ದ ಕುಟುಂಬದವರು. ಪಾರ್ಕ್‌ ಅವರ ತಂದೆ. 1990ರಲ್ಲಿ ಉತ್ತರ ಕೊರಿಯಾದ ಆರ್ಥಿಕತೆ ಪಥನಾ ನಂತರ ಕಪ್ಪು ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸುತ್ತಾರೆ. ಇದನ್ನು ತಿಳಿದ ಉತ್ತರ ಕೊರಿಯಾ ಸರ್ಕಾರ ಅವರನ್ನು ಕಳ್ಳಸಾಗಣೆ ಆರೋಪದ ಮೇಲೆ ಶಿಕ್ಷೆ ನೀಡಿ ಲೇಬರ್‌ ಕ್ಯಾಂಪ್‌ಗೆ ರವಾನಿಸುತ್ತದೆ. ಕುಟುಂಬ ತೀವ್ರ ಕಷ್ಟಕ್ಕೆ ಸಿಲುಕುತ್ತದೆ. ಪಾರ್ಕ್‌ ಮತ್ತು ತಾಯಿ ಉತ್ತರ ಕೊರಿಯಾದಿಂದ ಚೀನಾಕ್ಕೆ ಪಲಾಯನಗೊಳ್ಳುತ್ತಾರೆ. ಆದರೆ, ಅಲ್ಲಿ ಮಾನವ ಕಳ್ಳ ಸಾಗಣೆ ಜಾಲಕ್ಕೆ ಸಿಲುಕುತ್ತಾರೆ. ನಂತರ ಅವರಿಂದಲೂ ತಪ್ಪಿಸಿಕೊಂಡು ಮಂಗೋಲಿಯಾ ಸೇರುತ್ತಾರೆ. ಮಾನವ ಕಳ್ಳ ಸಾಗಣೆ ಜಾಲದ ಸಂತ್ರಸ್ಥೆಯೂ ಆಗಿರುವ ಪಾರ್ಕ್‌ ಈಗ ವಕೀಲರು. ಅಲ್ಲದೆ, ಉತ್ತರ ಕೊರಿಯಾ ಮತ್ತು ವಿಶ್ವದ ಜನರ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು