ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಬಿಎ ತಾರೆ ಬ್ರಯಾಂಟ್‌ ಸಾವು

ಹೆಲಿಕಾಪ್ಟರ್‌ ಪತನ: ಪುತ್ರಿ, ಪೈಲಟ್‌ ಸೇರಿ 9 ಮಂದಿ ಮೃತ
Last Updated 27 ಜನವರಿ 2020, 19:53 IST
ಅಕ್ಷರ ಗಾತ್ರ

ಲಾಸ್‌ ಏಂಜಲಿಸ್‌: ಅಮೆರಿಕದನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ) ನಿವೃತ್ತ ತಾರೆ ಕೋಬಿಬ್ರಯಾಂಟ್‌ (41) ಮತ್ತು ಅವರ ಪುತ್ರಿ ಜಿಯಾನಾ (13) ಭಾನುವಾರ ಇಲ್ಲಿನ ಕಾಲಿಫೋರ್ನಿಯಾದ ಕ್ಯಾಲಬಾಸಸ್‌ ಬಳಿ ಹೆಲಿಕಾಪ್ಟರ್‌ ಪತನಗೊಂಡು ಮೃತಪಟ್ಟಿದ್ದಾರೆ.

‘ಪೈಲಟ್‌ ಸೇರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 9 ಮಂದಿ ಮೃತಪಟ್ಟಿದ್ದಾರೆ’ ಎಂದು ಲಾಸ್‌ ಏಂಜೆಲಿಸ್‌ ಕೌಂಟಿ ಶೆರಿಫ್‌ ಅಲೆಕ್ಸ್‌ ವಿಲ್ಲಾನುಯೆವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಡಿದಾದ ಪ್ರದೇಶದಲ್ಲಿ ಈ ಅವಘಡ ನಡೆದಿರುವ ಕಾರಣ ಮೃತದೇಹಗಳ ಹುಡುಕಾಟಕ್ಕೆ ಕೆಲದಿನಗಳು ಹಿಡಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಸ್‌ ಏಂಜಲಿಸ್‌ಲೇಕರ್ಸ್‌ ತಂಡಕ್ಕೆ ಆಡುತ್ತಿದ್ದ ಬ್ರಯಾಂಟ್‌ 2016ರಲ್ಲಿ ನಿವೃತ್ತರಾಗಿದ್ದರು. ವೃತ್ತಿ ಜೀವನದ 20 ವರ್ಷವೂ ಒಂದೇ ತಂಡಕ್ಕೆ ಆಡಿದ್ದರು. ಅವರು ಗಳಿಸಿದ್ದು 33,643 ಪಾಯಿಂಟ್ಸ್‌!

ಹೆಲಿಕಾಪ್ಟರ್‌, ಆರೆಂಜ್‌ ಕೌಂಟಿಯಿಂದ ಮಂಬಾ ಸ್ಪೋರ್ಟ್ಸ್‌ ಅಕಾಡೆಮಿಯಿರುವ ತೌಝಂಡ್‌ ಓಕ್ಸ್‌ (ಕ್ಯಾಲಿಫೋರ್ನಿಯಾ)ಕ್ಕೆ ಹೊರಟಿದ್ದಾಗ ಈ ದುರ್ಘಟನೆ (ಸ್ಥಳೀಯ ಕಾಲಮಾನ ಬೆಳಿಗ್ಗೆ 9.47) ನಡೆದಿದೆ. ಮಂಜು ಮುಸುಕಿದ್ದುದೂ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿರುವ ಪುತ್ರಿಯನ್ನು ಮಂಬಾದಲ್ಲಿ ನಡೆಯಬೇಕಿದ್ದ ಯುವ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಅವರು ಕರೆದೊಯ್ಯುತ್ತಿದ್ದರು.

ಎನ್‌ಬಿಎ ಶೋಕ: ಬ್ರಯಾಂಟ್‌ ಹಠಾತ್‌ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಎನ್‌ಬಿಎ ಶೋಕದ ಮಡುವಿನಲ್ಲಿದೆ. ಡೆನ್ವರ್‌ನಲ್ಲಿ ಹ್ಯೂಸ್ಟನ್‌ ರಾಕೆಟ್ಸ್‌ ಮತ್ತು ನಜೆಟ್ಸ್‌ ನಡುವೆ ನಡೆದ ಪಂದ್ಯದ ವೇಳೆ ಮೌನಾಚರಣೆ ನಡೆಯಿತು. ಡಲ್ಲಾಸ್‌ ಮಾವೆರಿಕ್ಸ್‌ ತಂಡ. ‘24’ ಸಂಖ್ಯೆಗೆ ನಿವೃತ್ತಿ ನೀಡುವುದಾಗಿ ಪ್ರಕಟಿಸಿದೆ. ಇತರ ತಂಡಗಳೂ ಇದೇ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಬ್ರಯಾಂಟ್‌ ಈ ನಂಬರ್‌ ಇರುವ ಜೆರ್ಸಿ ತೊಡುತ್ತಿದ್ದರು.ಸುದ್ದಿ ಕೇಳಿದ ನಂತರದಿಂದ ಮೈದಾನಕ್ಕಿಳಿಯಲು ಕಷ್ಟವಾಗುತ್ತಿದೆ ಎಂದು ಎನ್‌ಬಿಎಯ ಹಲವು ಸ್ಟಾರ್‌ ಆಟಗಾರರು ವ್ಯಥೆ ಪಟ್ಟಿದ್ದಾರೆ.

‘ಇದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನನ್ನ ಕುಟುಂಬ ಸದಸ್ಯರು ಇಡೀ ದಿನ ಕೋಬಿ ಕುರಿತಾದ ವಿಷಯವನ್ನೇ ಹಂಚಿಕೊಂಡರು. ಇದೊಂದು ದುಃಸ್ವಪ್ನ’ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ಮಿಯಾಮಿ ಹೀಟ್‌ ಆಟಗಾರ ಡ್ವೇಯ್ನ್‌ ವೇಡ್‌ ಹೇಳಿದರು. ‘ಅಂಕಣದಲ್ಲಿ ಅವರು ಮೂಡಿಸಿದ್ದ ಛಾಪನ್ನು ವಿವರಿಸಲು ಪದಗಳೇ ನಿಲುಕುತ್ತಿಲ್ಲ’ ಎಂದು ಲಾಸ್‌ ಏಂಜಲಿಸ್‌ ಕ್ಲಿಪರ್ಸ್‌ನ ಲಿಯೊನಾರ್ಡ್‌
ಹೇಳಿದರು.‌ ಅವರ ಅವಧಿಯಲ್ಲಿ ತಂಡ 18 ಬಾರಿ ಆಲ್‌ಸ್ಟಾರ್‌ ಮತ್ತು ಐದು ಬಾರಿ ಎನ್‌ಬಿಎ ಚಾಂಪಿಯನ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT