ಭಾನುವಾರ, ಮಾರ್ಚ್ 29, 2020
19 °C
ಅಮೆರಿಕದ ವಿಜ್ಞಾನಿಗಳ ಅಧ್ಯಯನ ವರದಿಯಲ್ಲಿ ಬಹಿರಂಗ

ಕೊರೊನಾ ವೈರಸ್‌ ಮಾನವ ನಿರ್ಮಿತ ಅಲ್ಲ: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಸ್ ಏಂಜಲೀಸ್‌: ಕೋವಿಡ್–19 ಜಾಗತಿಕ ಪಿಡುಗಿಗೆ ಕಾರಣವಾಗಿರುವ ‘ಸಾರ್ಸ್‌–ಕೋವ್–2’ ಕೊರೊನಾ ವೈರಸ್‌, ನೈಸರ್ಗಿಕವಾಗಿ ವಿಕಾಸವಾಗಿದೆ. ಅದನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ನೇಚರ್‌ ಮೆಡಿಸನ್ ನಿಯತಕಾಲಿಕದಲ್ಲಿ ಇದಕ್ಕೆ ಸಂಬಂಧಿಸಿದ ವರದಿ ಪ್ರಕಟವಾಗಿದೆ. ಅಮೆರಿಕದ ಸ್ಕ್ರಿಪ್ಸ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ‘ಸಾರ್ಸ್‌–ಕೋವಿಡ್‌–2’ ಮತ್ತು ಇದೇ ಸ್ವರೂಪದ ಕೊರೊನಾ ವೈರಸ್‌ ಮೇಲೆ ಅಧ್ಯಯನ ನಡೆಸಿ, ಈ ವರದಿ ಸಿದ್ಧಪಡಿಸಿದ್ದಾರೆ.

ಕೋವಿಡ್–19 ಪಿಡುಗಿಗೆ ಕಾರಣವಾಗಿರುವ ‘ಸಾರ್ಸ್‌ ಕೋವ್‌–2’ ಸೋಂಕು ಮೊದಲು ಒಬ್ಬ ವ್ಯಕ್ತಿಗೆ ಬಂದಿದೆ. ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡಿದೆ ಎಂಬುದನ್ನು ಚೀನಾ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸೋಂಕನ್ನು ಕೃತಕವಾಗಿ ಅಭಿವೃದ್ಧಿಪಡಿಸಿದ್ದಿದ್ದರೆ ಸೋಂಕಿನ ಮೂಲದಲ್ಲಿ, ಈಗಾಗಲೇ ಇಂತಹ ಪಿಡುಗನ್ನು ಹರಡಲು ಶಕ್ತವಾಗಿರುವ ವೈರಸ್‌ನ ಮೂಲ ಕಣಗಳು ದೊರೆಯಬೇಕಿತ್ತು. ಸಾರ್ಸ್‌–ಕೋವ್‌–2 ಕೊರೊನಾ ಸೋಂಕಿನಲ್ಲಿ ಅಂತಹ ಯಾವುದೇ ಸೋಂಕಿನ ಸುಳಿವು ಇಲ್ಲ.  ಹೀಗಾಗಿ ಇದು ನೈಸರ್ಗಿಕವಾಗಿಯೇ ವಿಕಾಸವಾಗಿರುವ ಸೋಂಕು ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಸಾರ್ಸ್‌–ಕೋವ್‌–2 ಕೊರೊನಾ ವೈರಸ್‌ನ ರಚನೆ ವಿಶಿಷ್ಟವಾಗಿದೆ. ವೈರಸ್‌ ಹೊರಭಾಗದಲ್ಲಿರುವ ಚಾಚಿಕೆಗಳು, ಕಚ್ಚಿಕೊಳ್ಳುವ ಮುಳ್ಳುಗಳ ರೀತಿಯಲ್ಲಿವೆ. ಇವು ಮನುಷ್ಯನ ಜೀವಕೋಶಕ್ಕೆ ಬಲವಾಗಿ ಕಚ್ಚಿಕೊಳ್ಳಲು ಶಕ್ತವಾಗಿವೆ. ಹೀಗೆ ಕಚ್ಚಿಕೊಂಡ ನಂತರ, ಬಿರುಕಿನಂತಹ ರಚನೆಯ ಮೂಲಕ ಮಾನವ ಜೀವಕೋಶಕ್ಕೆ ರವಾನೆಯಾಗುತ್ತದೆ. ವೈರಸ್‌ನ ಹೊರಭಾಗದ ಮುಳ್ಳುಗಳು ನೈಸರ್ಗಿಕವಾಗಿ ಅಭಿವೃದ್ಧಿಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಕೊರೊನಾ ವೈರಸ್‌ ಇರುವ ಪ್ರಾಣಿಗಳಿಂದ ಬಂದಿದೆ ಎಂಬುದಂತೂ ನಿಜ. ಬಾವಲಿಯಲ್ಲಿರುವ ಕೊರೊನಾ ವೈರಸ್‌ಗೆ, ಮನುಷ್ಯನಲ್ಲಿ ಕಂಡು ಬಂದಿರುವ ಕೊರೊನಾ ವೈರಸ್‌ ತೀರಾ ಹತ್ತಿರವಾಗಿದೆ. ಆದರೆ, ಇದು ಬಾವಲಿಯಿಂದ ಮಾನವನಿಗೆ ನೇರವಾಗಿ ಹರಡಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಬಾವಲಿಯಿಂದ ಬೇರೊಂದು ಮಾಧ್ಯಮದ ಮೂಲಕ ಮನುಷ್ಯನಿಗೆ ಹರಡಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಬಿರುಕಿನ ರಚನೆಯ ಮೂಲಕ ವೈರಸ್‌ ಜೀವಕೋಶದೊಳಕ್ಕೆ ನುಗ್ಗುವ ಪ್ರಕ್ರಿಯೆಯು, ಮಾನವನಿಗೆ ಹರಡಿದ ನಂತರ ವಿಕಾಸವಾಗಿರಬಹುದು. ಮಾನವನಿಗೆ ಮೊದಲು ತಗುಲಿದ ಸೋಂಕಿನಲ್ಲಿ ಇಂತಹ ರಚನೆ ಇಲ್ಲದೇ ಇದ್ದಿರಬಹುದು. ಒಬ್ಬ ಮನುಷ್ಯನಿಂದ ಹಲವರಿಗೆ ಇದೇ ಸ್ವರೂಪದಲ್ಲಿ ಅದು ಹರಡಿರಬಹುದು. ಈ ಹಂತದಲ್ಲಿ ಅದು, ಜೀವಕೋಶದೊಳಗೆ ನುಗ್ಗುವ ಶಕ್ತಿಯನ್ನು ಗಳಿಸಿಕೊಂಡಿರಬಹುದು. ಇದು ಮಾನವನಲ್ಲಿ ವಿಕಾಸವಾಗಿರುವ ಕಾರಣದಿಂದಲೇ ಅದು ಕ್ಷಿಪ್ರವಾಗಿ ಹರಡಲು ಶಕ್ತವಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು