ಭಾನುವಾರ, ಜುಲೈ 25, 2021
22 °C

ಪಾಕಿಸ್ತಾನ ವಶಕ್ಕೆ ಪಡೆದಿದ್ದ ಹೈಕಮಿಷನ್‌ ಅಧಿಕಾರಿಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳನ್ನು ಸೋಮವಾರ ಬೆಳಗ್ಗೆ ವಶಕ್ಕೆ ಪಡೆದಿದ್ದ ಅಲ್ಲಿನ ಪೊಲೀಸರು ಸಂಜೆಯ ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. 

ಅಧಿಕಾರಿಗಳನ್ನು ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಮುಖ್ಯಸ್ಥ (ಪ್ರಭಾರ) ಸಯ್ಯದ್‌ ಹೈದರ್‌ ಶಾ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ ಪ್ರತಿಭಟನೆ ದಾಖಲಿಸಲಾಗಿತ್ತು. 

ಈ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬಾರದು ಮತ್ತು ಕಿರುಕುಳ ನೀಡಬಾರದು. ಅಧಿಕೃತ ಕಾರಿನ ಜತೆಗೆ ಅವರನ್ನು ಹೈಕಮಿಷನ್‌ ಕಚೇರಿಗೆ ತಕ್ಷಣ ಕಳುಹಿಸಬೇಕು. ಹೈಕಮಿಷನ್‌ ಅಧಿಕಾರಿಗಳ ಸುರಕ್ಷತೆಯು ಪಾಕಿಸ್ತಾನ ಸರ್ಕಾರದ ಹೊಣೆಗಾರಿಕೆ ಎಂದು ಪಾಕಿಸ್ತಾನದ ಪ್ರತಿನಿಧಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. 

ಸೆಲ್ವದಾಸ್‌ ಪಿ. ಮತ್ತು ಡಿ.ಬ್ರಹ್ಮ ಅವರೇ ಪೊಲೀಸರು ವಶಕ್ಕೆ ಪಡೆದ ಅಧಿಕಾರಿಗಳು ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳಲ್ಲಿ ಗುರುತಿಸಲಾಗಿದೆ. ಈ ಇಬ್ಬರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದು ಆತ ಗಾಯಗೊಂಡ. ತಕ್ಷಣವೇ ಈ ಅಧಿಕಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ವರದಿಗಳಲ್ಲಿ ಹೇಳಲಾಗಿದೆ. 

ಶಾ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದ ಕೆಲವೇ ತಾಸುಗಳಲ್ಲಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. 

ಕಿರುಕುಳ ಯತ್ನ

ಭಾರತದ ಹೈಕಮಿಷನ್‌ ಅಧಿಕಾರಿಗಳಿಗೆ ಕಿರುಕುಳ ನೀಡುವ ಯತ್ನ ಪಾಕಿಸ್ತಾನದಲ್ಲಿ ಆಗಾಗ ನಡೆಯುತ್ತಿದೆ. ಭಾರತದ ಹೈಕಮಿಷನ್‌ ಕಚೇರಿ ಮುಖ್ಯಸ್ಥ ಗೌರವ್‌ ಅಹ್ಲುವಾಲಿಯಾ ಅವರನ್ನು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐನ ಏಜೆಂಟರು ಬೈಕ್‌ಗಳಲ್ಲಿ ಹಿಂಬಾಲಿಸಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಜೂನ್‌ 4ರಂದು ದೂರು ದಾಖಲಿಸಲಾಗಿತ್ತು. ಭಾರತದ ಅಧಿಕಾರಿಗಳ ನಿವಾಸಗಳಿರುವ ಸಂಕೀರ್ಣವನ್ನು ಐಎಸ್‌ಐ ಏಜೆಂಟರು ಸುತ್ತುವರಿದ ಘಟನೆಯೂ ನಡೆದಿದೆ. ಅಧಿಕಾರಿಗಳ ಸ್ಥೈರ್ಯ ಕುಂದಿಸಲು ಹೀಗೆ ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ. 

ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿಗಳಾದ ಆಬಿದ್‌ ಹುಸೇನ್‌ ಮತ್ತು ಮುಹಮ್ಮದ್‌ ತಾಹಿರ್‌ ಅವರನ್ನು ಎರಡು ವಾರ ಹಿಂದೆ ಭಾರತ ಹಿಂದಕ್ಕೆ ಕಳುಹಿಸಿತ್ತು. ಭಾರತದ ಸೇನಾ ತುಕಡಿಗಳ ಚಲನೆಯ ಬಗೆಗಿನ ಮಾಹಿತಿಯನ್ನು ವ್ಯಕ್ತಿಯೊಬ್ಬನಿಂದ ಇವರು ಪಡೆದುಕೊಂಡದ್ದು ದೃಢಪಟ್ಟ ಬಳಿಕ ಅವರನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಾದ ಬಳಿಕ, ಭಾರತದ ಹೈಕಮಿಷನ್‌ ಅಧಿಕಾರಿಗಳಿಗೆ ಪಾಕಿಸ್ತಾನವು ಕಿರುಕುಳ ನೀಡಲು ಆರಂಭಿಸಿದೆ. 

ಪಾಕಿಸ್ತಾನದ ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದಾಗಲೆಲ್ಲ ಆ ದೇಶವು ಅದಕ್ಕೆ ಪ್ರತೀಕಾರವಾಗಿ ಭಾರತದ ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಿದ ನಿದರ್ಶನಗಳು ಇವೆ. ಹಾಗಾಗಿ, ಈಗ ಗೂಢಚರ್ಯೆ ಆರೋಪದಲ್ಲಿ ಇಬ್ಬರನ್ನು ಹಿಂದಕ್ಕೆ ಕಳುಹಿಸಿದ್ದಕ್ಕೆ ಪ್ರತಿಯಾಗಿ ಭಾರತದ ಅಧಿಕಾರಿಗಳನ್ನು ಹಿಂದಿರುಗಲು ಹೇಳಬಹುದು ಎಂಬ ನಿರೀಕ್ಷೆ ಇತ್ತು. 

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ನಿರ್ಧಾರದ ಬಳಿಕ ಭಾರತದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನೇ ಪಾಕಿಸ್ತಾನವು ಕೆಳಮಟ್ಟಕ್ಕೆ ಇಳಿಸಿತ್ತು. ಹೈಕಮಿಷನರ್‌ರನ್ನು ವಾಪಸ್‌ ಕರೆಸಿಕೊಂಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು