ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರಿಂದ ಅಂತರ್ಜಾಲ ದುರ್ಬಳಕೆ: ಭಾರತ ಕಳವಳ

‘2018ನೇ ವರ್ಷದಲ್ಲಿ ಭಯೋತ್ಪಾದನೆ’ ವರದಿಯಲ್ಲಿ ಉಲ್ಲೇಖ
Last Updated 2 ನವೆಂಬರ್ 2019, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಗ್ರ ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಅಂತರ್ಜಾಲವನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್ಆ್ಯಪ್‌ ಅನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಮೆರಿಕ ಸರ್ಕಾರದ ಇಲಾಖೆಯು ತನ್ನ ವಾರ್ಷಿಕ ವರದಿಯಲ್ಲಿ ‘2018ನೇ ವರ್ಷದಲ್ಲಿ ಭಯೋತ್ಪಾದನೆ’ ಶೀರ್ಷಿಕೆಯ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ. ಅಮೆರಿಕ ಸಂಸತ್‌ ನಿರ್ದೇಶನದಂತೆ ಶುಕ್ರವಾರ ವರದಿ ಬಿಡುಗಡೆಯಾಗಿದೆ.

ವಾಟ್ಸ್ಆ್ಯಪ್‌ನಿಂದ ಮಾಹಿತಿ ಸೋರಿಕೆ ಪ್ರಕರಣ ಗುರುವಾರವಷ್ಟೇ ಬೆಳಕಿಗೆ ಬಂದಿತ್ತು. ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್ಆ್ಯಪ್‌ ಗುರುವಾರ, ‘ಇಸ್ರೇಲ್‌ ಮೂಲದ ಸ್ಪೈವೇರ್ ಪಿಗಾಸಸ್‌ ಬಳಸಿ ಭಾರತದ ಪತ್ರಕರ್ತರು, ಮಾನವಹಕ್ಕು ಹೋರಾಟಗಾರರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಪ್ರಕಟಿಸಿತ್ತು.

ನೇಮಕಾತಿ ಸೇರಿ ವಿವಿಧ ಚಟುವಟಿಕೆ ನಡೆಸಲು, ಧರ್ಮಗಳ ನಡುವೆ ಧ್ವೇಷ, ಉದ್ವಿಗ್ನ ಸ್ಥಿತಿ ಮೂಡಿಸಲು ವಾಟ್ಸ್‌ಆ್ಯಪ್‌ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳು ಬಳಕೆ ಆಗುತ್ತಿರುವ ಕುರಿತು ಭಾರತ ಸರ್ಕಾರದ ಅಧಿಕಾರಿಗಳು ಆತಂಕ ಹೊಂದಿದ್ದಾರೆ ಗೃಹ ಇಲಾಖೆ ಮತ್ತು ಇತರೆ ಹಿರಿಯ ಅಧಿಕಾರಿಗಳು ಜಾಗತಿಕವಾದ ಸಾಮಾಜಿಕ ಜಾಲತಾಣಗಳ ಕಂಪನಿಗಳನ್ನು ಭೇಟಿ ಮಾಡಿ ನಿಯಂತ್ರಣ ಕ್ರಮಗಳನ್ನು ಕುರಿತು ಚರ್ಚಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಭಯೋತ್ಪಾತಕ ಕೃತ್ಯಗಳಿಗೆ ಆನ್‌ಲೈನ್‌ ಮೂಲಕ ಜನರನ್ನು ಒಗ್ಗೂಡಿಸುವ ಕೃತ್ಯ ದಕ್ಷಿಣ ಭಾರತದಲ್ಲಿ ವರ್ಷವಿಡೀ ವರದಿ ಆಗುತ್ತಿದೆ. ಕೆಲವರನ್ನು ಅಫ್ಗಾನಿಸ್ತಾನದ ಐಎಸ್‌ ಶಿಬಿರಗಳಿಗೆ ರವಾನಿಸಿರುವ ವರದಿಯೂ ಇದೆ.

ಪಾಕಿಸ್ತಾನ ಮೂಲದ ಉಗ್ರರು ಮತ್ತು ಮಾವೋವಾದಿ ಸಂಘಟನೆಗಳಿಂದ ದಾಳಿ ಪ್ರಕರಣಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ದಾಳಿಗೆ ಪಾಕಿಸ್ತಾನದ ವಿರುದ್ಧ ಭಾರತ ಆರೋಪಿಸುತ್ತಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಉಗ್ರರ ಚಟುವಟಿಕೆ ಹತ್ತಿಕ್ಕಲು ಪಾಕ್ ವಿಫಲ’
ಭಯೋತ್ಪಾದಕ ಸಂಘಟನೆಗಳು ತನ್ನ ನೆಲದಿಂದ ಕಾರ್ಯನಿರ್ವಹಿಸುವುದನ್ನು ಹತ್ತಿಕ್ಕಲು, ಸಂಪನ್ಮೂಲ ಕ್ರೋಡೀಕರಿಸುವುದನ್ನು ತಡೆಯಲು ಪಾಕಿಸ್ತಾನ ವಿಫಲವಾಗಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ಲಷ್ಕರ್‌ ಎ ತಯಬಾ, ಜೈಷ್‌ ಎ ಮೊಹಮ್ಮದ್ ಸಂಘಟನೆಗಳಿಂದ ಸಂಪನ್ಮೂಲ ಕ್ರೋಡೀಕರಣ ಮತ್ತು ನೇಮಕ ಪ್ರಕ್ರಿಯೆ ನಡೆದಿದೆ. ಪಾಕಿಸ್ತಾನದ ಹೊರಗಡೆ ದಾಳಿ ನಡೆಸುವ ಗುರಿಯುಳ್ಳ ಇನ್ನೂ ಅನೇಕ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನೆಲದಲ್ಲಿ 2018ರಲ್ಲಿ ಕಾರ್ಯ ನಿರ್ವಹಿಸಿದ್ದವು ಎಂದೂ ವರದಿ ಉಲ್ಲೇಖಿಸಿದೆ.

ಪಾಕಿಸ್ತಾದ ರಾಷ್ಟ್ರೀಯ ಕ್ರಿಯಾಯೋಜನೆಯು ದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಹೇಳಿದ್ದರೂ ಹಖ್ಖಾನಿ ನೆಟ್‌ವರ್ಕ್‌, ಲಷ್ಕರ್ ಎ ತಯಬಾ, ಜೈಷ್‌ ಎ ಮೊಹಮ್ಮದ್ ಅಂಥ ಸಂಘಟನೆಗಳು ಕಾರ್ಯತತ್ಪರವಾಗಿವೆ. ದೇಶ ಉಗ್ರರಿಗೆ ಸುರಕ್ಷಿತ ತಾಣವಾಗುವಂತೆ ಸರ್ಕಾರ ಮತ್ತು ಸೇನಾ ಕೂಡಾ ವರ್ತಿಸಿದೆ ಎಂದೂ ವರದಿ ಹೇಳಿದೆ.

ದೇಶದ ಹೊರಗಡೆ ದಾಳಿ ನಡೆಸುವ ಗುರಿಯುಳ್ಳ ಈ ಸಂಘಟನೆಗಳಲ್ಲಿ ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ್ (ಟಿಟಿಪಿ), ಜಮಾತ್‌ ಉಲ್‌ ಅಹ್‌ರರ್‌ (ಜೆಯುಎ), ಇಸ್ಲಾಮಿಕ್‌ ಸ್ಟೇಟ್‌ನ ಖೊರಸನ್‌ ಪ್ರಾವಿನ್ಸ್‌ (ಐಎಸ್‌–ಕೆ) ಮತ್ತು ಲಷ್ಕರ್‌ ಎ ಜಾಂಗ್ವಿ ಅಲ್‌ ಅಲಾಮಿ (ಎಲ್‌ಜೆಎ) ಸಂಘಟನೆಗಳು ಪಾಕಿಸ್ತಾನವನ್ನು ತನ್ನ ನೆಲೆಯಾಗಿಸಿಕೊಂಡಿವೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT