ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಚಿ ವಿಮಾನ ಅಪಘಾತ: ಎಚ್ಚರಿಕೆ ಕಡೆಗಣಿಸಿದ್ದ ಪೈಲಟ್‌

ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಂತೆ ಸೂಚಿಸಿದ್ದ ಎಟಿಸಿ
Last Updated 25 ಮೇ 2020, 16:57 IST
ಅಕ್ಷರ ಗಾತ್ರ

ಕರಾಚಿ: ಇಲ್ಲಿನ ಜನವಸತಿ ಪ್ರದೇಶದಲ್ಲಿ ಪತನವಾದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌(ಪಿಐಎ) ವಿಮಾನದ ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೊಲ್‌ (ಎಟಿಸಿ) ನೀಡಿದ್ದ ಎಚ್ಚರಿಕೆಗಳನ್ನು ಕಡೆಗಣಿಸಿದ್ದರು ಎನ್ನುವುದು ಗೊತ್ತಾಗಿದೆ.

ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 97 ಮಂದಿ ಸಾವಿಗೀಡಾಗಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ವರದಿ ಸಿದ್ಧಪಡಿಸಿದೆ.

ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 15 ನಾಟಿಕಲ್‌ ಮೈಲಿಗಳಷ್ಟು ದೂರದಲ್ಲಿದ್ದಾಗ 10 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು. ಇದನ್ನು ಕಡಿಮೆ ಮಾಡಿ 7 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವಂತೆ ಎಟಿಸಿ ಸೂಚಿಸಿತ್ತು. ಆದರೆ, ಪೈಲಟ್‌ ಈ ಸೂಚನೆಯನ್ನು ನಿರ್ಲಕ್ಷಿಸಿದರು. ವಿಮಾನ ನಿಲ್ದಾಣ ಕೇವಲ 10 ನಾಟಿಕಲ್‌ ಮೈಲುಗಳಿದ್ದಾಗಷ್ಟೇ 7 ಸಾವಿರ ಅಡಿ ಎತ್ತರಕ್ಕೆ ಇಳಿಸಿದ. ಆದರೆ, ಆಗ 3 ಸಾವಿರ ಅಡಿಗೆ ಇಳಿಸಬೇಕಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎತ್ತರ ಕಡಿಮೆ ಮಾಡುವಂತೆ ಮತ್ತೊಮ್ಮೆ ಪೈಲಟ್‌ಗೆ ಎಚ್ಚರಿಕೆ ನೀಡಲಾಗಿತ್ತು. ಆ ಸಂದರ್ಭದಲ್ಲಿಯೂ ಪೈಲಟ್‌ ನಿರ್ಲಕ್ಷ್ಯವಹಿಸಿದರು. ಪರಿಸ್ಥಿತಿಯನ್ನು ನಿಭಾಯಿಸುವುದಾಗಿ ತಿಳಿಸಿದರು. ಬಳಿಕ, ವಿಮಾನವನ್ನು ಕೆಳಗಿಳಿಸಲು ಸಿದ್ಧವಿರುವುದಾಗಿ ಮಾಹಿತಿ ನೀಡಿದ್ದ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಿಮಾನದಲ್ಲಿ ಸಾಕಷ್ಟು ಇಂಧನವಿತ್ತು. ಇನ್ನೂ 2 ಗಂಟೆ 34 ನಿಮಿಷ ಹಾರಾಟ ನಡೆಸಬಹುದಿತ್ತು. ಅಲ್ಲಿಯವರೆಗೆ ಅದು ಕೇವಲ 1 ಗಂಟೆ 33 ನಿಮಿಷಗಳ ಮಾತ್ರ ಹಾರಾಟ ನಡೆಸಿತ್ತು ಎಂದು ತಿಳಿಸಿದೆ.

ಪೈಲಟ್‌ ತಪ್ಪಿನಿಂದಾಗಿ ಈ ವಿಮಾನ ಅಪಘಾತ ಸಂಭವಿಸಿದೆಯೇ ಅಥವಾ ತಾಂತ್ರಿಕ ಸಮಸ್ಯೆಯಿಂದ ಈ ಘಟನೆ ನಡೆದಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮೊದಲ ಬಾರಿ ವಿಮಾನವನ್ನು ಕೆಳಗಿಳಿಸಲು ಪ್ರಯತ್ನಿಸಿದಾಗ ರನ್‌ವೇನಲ್ಲಿ ಘರ್ಷಣೆಯಾಗಿ ಎಂಜಿನ್‌ ಮತ್ತು ತೈಲ ಟ್ಯಾಂಕ್‌ಗೆ ಹಾನಿಯಾಗಿದೆ. ಸುರಕ್ಷಿತವಾಗಿ ವಿಮಾನವನ್ನು ಮೊದಲ ಯತ್ನದಲ್ಲಿ ಇಳಿಸಲು ವಿಫಲವಾದಾಗ ಸುತ್ತಮುತ್ತಲ ಪ್ರದೇಶದಲ್ಲಿ ಹಾರಾಟ ನಡೆಸುವ ಸ್ವಯಂ ನಿರ್ಧಾರವನ್ನು ಪೈಲಟ್‌ ಕೈಗೊಂಡಿದ್ದಾರೆ. ಆಗ ಲ್ಯಾಂಡಿಂಗ್‌ ಗೇರ್‌ ವಿಫಲವಾಗಿರುವುದನ್ನು ಎಟಿಸಿ ಗಮನಕ್ಕೆ ತರಲಾಗಿದೆ ಎಂದು ವರದಿ ತಿಳಿಸಿದೆ.

ಎಂಜಿನ್‌ಗಳ ವೈಫಲ್ಯದಿಂದಲೇ ಆಯಾ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟ ಎತ್ತರದಲ್ಲಿ ಹಾರಾಟ ನಡೆಸುವಂತೆ ಸೂಚಿಸಿದ್ದನ್ನು ಪಾಲಿಸಲು ಪೈಲಟ್‌ಗೆ ಸಾಧ್ಯವಾಗಿಲ್ಲ. ಹೀಗಾಗಿಯೇ ವಿಮಾನ ಅಪಘಾತ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT