ಮಂಗಳವಾರ, ಆಗಸ್ಟ್ 3, 2021
28 °C
ದಾಂದಲೆ, 40 ರಾಜ್ಯಗಳಲ್ಲಿ ಕರ್ಫ್ಯೂ

ಅಮೆರಿಕದಲ್ಲಿ ಪ್ರತಿಭಟನೆ ತೀವ್ರ: ಸಾವಿರಾರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಆಫ್ರಿಕಾ ಮೂಲದ ಅಮೆರಿಕನ್‌ ಪ್ರಜೆ, ಜಾರ್ಜ್‌ ಫ್ಲಾಯ್ಡ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿ ಸತ್ತಿರುವುದನ್ನು ಖಂಡಿಸಿ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ.

‘ಅಮೆರಿಕದ 140ಕ್ಕೂ ಹೆಚ್ಚು ನಗರಗಳಿಗೆ ಪ್ರತಿಭಟನೆ ಹಬ್ಬಿದೆ. ಹಿಂಸಾಚಾರದಲ್ಲಿ ಕನಿಷ್ಠ ಐದು ಮಂದಿ ಸತ್ತಿದ್ದಾರೆ. ಪ್ರತಿಭಟನೆಯು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ’ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಅಮೆರಿಕದ 40ಕ್ಕೂ ಹೆಚ್ಚು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. 2,500ಕ್ಕೂ ಹೆಚ್ಚು  ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಐದನೇ ಒಂದರಷ್ಟು ಮಂದಿ ಲಾಸ್‌ ಏಂಜಲೀಸ್‌ ನಗರದವರಾಗಿದ್ದಾರೆ.

ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್‌ ಫ್ಲಾಯ್ಡ್‌ (46) ಎಂಬುವರನ್ನು ಮಿನಿಯಾಪೊಲೀಸ್‌ ನಗರದ ಶ್ವೇತವರ್ಣೀಯ ಪೊಲೀಸ್‌ ಅಧಿಕಾರಿಯೊಬ್ಬರು ನೆಲಕ್ಕೆ ಉರುಳಿಸಿ, ಅವರ ಕತ್ತಿನ ಮೇಲೆ ಮಂಡಿಯನ್ನಿಟ್ಟಿದ್ದರು. ಇದರಿಂದಾಗಿ ಫ್ಲಾಯ್ಡ್‌ ಉಸಿರುಗಟ್ಟಿ ಪ್ರಾಣಬಿಟ್ಟಿದ್ದರು. ಈ ಘಟನೆಯನ್ನು ಜನಾಂಗೀಯ ದೌರ್ಜನ್ಯ ಎಂದು
ಬಣ್ಣಿಸಲಾಗುತ್ತಿದೆ.

ಘಟನೆಯ ನಂತರ, ಮಿನಿಯಾಪೊಲೀಸ್‌ ನಗರದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಅದು ಈಗ ಅಮೆರಿಕದಾದ್ಯಂತಹಬ್ಬಿದೆ. ಲಾಸ್‌ಏಂಜಲೀಸ್‌, ಷಿಕಾಗೊ,ನ್ಯೂಯಾರ್ಕ್‌, ಹ್ಯೂಸ್ಟನ್‌, ಫಿಲಡೆಲ್ಫಿಯಾ ಹಾಗೂ ವಾಷಿಂಗ್ಟನ್‌ ಡಿಸಿ ನಗರಗಳಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರತಿಭಟನಕಾರರು ಒಕ್ಕೂಟ ವ್ಯವಸ್ಥೆಯ ಸ್ಮಾರಕವೊಂದನ್ನು ಉರುಳಿಸುವ ಪ್ರಯತ್ನ ನಡೆಸಿದ್ದಾರೆ. ಬಾಸ್ಟನ್‌ನಲ್ಲಿ ಪೊಲೀಸ್‌ ವಾಹನ ಉರುಳಿಸಿ, ಬೆಂಕಿ ಹಚ್ಚಿದ್ದಾರೆ. ಫಿಲಡೆಲ್ಫಿಯಾದಲ್ಲಿ ಗಲಭೆಕೋರರನ್ನು ಚದುರಿಸಲು ಪೊಲೀಸರು ಪೆಪ್ಪರ್‌ಸ್ಪ್ರೇ ಬಳಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಬೃಹತ್‌ ರ್‍ಯಾಲಿ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಪೂರ್ತಿಯಾಗಿ ಅಸ್ತವ್ಯಸ್ತಗೊಂಡಿತು. ಪ್ರತಿಭಟನಕಾರರು ಕಸದ ರಾಶಿಗೆ ಬೆಂಕಿ ಹಚ್ಚಿದ್ದರಿಂದ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು. 1968ರಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಜೂ. ಅವರ ಹತ್ಯೆಯಾದ ನಂತರ ಇದೇ ಮೊದಲ ಬಾರಿಗೆ ಈ ಸ್ವರೂಪದ ಪ್ರತಿಭಟನೆ ಅಮೆರಿಕದಲ್ಲಿ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.

ಖಂಡನೆ: ಜಾರ್ಜ್‌ ಫ್ಲಾಯ್ಡ್‌ ಸಾವಿಗೀಡಾದ ಪ್ರಕರಣವನ್ನು ಯುವ ವಿದೇಶಿ ಫುಟ್‌ಬಾಲ್‌ ಆಟಗಾರರು ಖಂಡಿಸಿದ್ದಾರೆ. ಇಂಗ್ಲೆಂಡ್‌ನ ಮಿಡ್‌ಫೀಲ್ಡರ್‌ ಜಡೊನ್‌ ಸ್ಯಾಂಚೊ, ಮೊರಾಕೊದ ಅಚ್ರಫ್‌ ಹಕಿಮಿ ಮತ್ತು ಮಾರ್ಕಸ್‌ ತುರಮ್‌ ಅವರು ಕ್ರೀಡಾಂಗಣದಲ್ಲೇ ಈ ಬಗ್ಗೆ ಅಸಮಾಧಾನ ಪ್ರದರ್ಶಿಸಿದ್ದಾರೆ.

ಮಾಧ್ಯಮಗಳ ವಿರುದ್ಧ ಟ್ರಂಪ್‌ ಕಿಡಿ
ಪ್ರತಿಭಟನೆ ತೀವ್ರ ಸ್ವರೂಪ ಪಡೆದ ನಂತರ ಟ್ರಂಪ್‌ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ, ಸರಣಿ ಟ್ವೀಟ್‌ಗಳ ಮೂಲಕ ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.

‘ಮಾಧ್ಯಮಗಳು ದ್ವೇಷ ಮತ್ತು ಅರಾಜಕತೆಯನ್ನು ಸೃಷ್ಟಿಸಲು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡುತ್ತಿವೆ’ ಎಂದು ಟ್ರಂಪ್‌ ಆರೋಪಿಸಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ವಹಿಸಿರುವ ಎಡಪಂಥೀಯ ‘ಆ್ಯಂಟಿಫಾ’ ಸಂಘಟನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವುದಾಗಿ ಟ್ರಂಪ್‌ ಹೇಳಿದ್ದಾರೆ. ‘ಪ್ರತಿಭಟನೆ ಒಮ್ಮೆಲೇ ತೀವ್ರಗೊಳ್ಳಲು ಈ ಸಂಘಟನೆ ಕಾರಣ. ಹಿಂಸಾಚಾರದ ಮೂಲಕ ತಮ್ಮ ರಾಜಕೀಯ ಉದ್ದೇಶ ಸಾಧನೆಗೆ ಈ ಸಂಘಟನೆ ಮುಂದಾಗಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ಪ್ರತಿಭಟನೆಯ ವರದಿ ಮಾಡಲು ಹೋಗಿದ್ದ ಅನೇಕ ಪತ್ರಕರ್ತರಿಗೆ ಕಿರುಕುಳ ನೀಡಲಾಗಿದೆ, ಹಲವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಆರೋಪಿಸಿದೆ.

ಬಂಕರ್‌ನಲ್ಲಿ ರಕ್ಷಣೆ
ನೂರಾರು ಪ್ರತಿಭಟನಕಾರರು ಭಾನುವಾರ ರಾತ್ರಿ ಶ್ವೇತಭವನದ ಸಮೀಪ ಹಿಂಸಾಚಾರಕ್ಕೆ ಇಳಿದಿ ದ್ದರು. ಹಲವು ಕಟ್ಟಡಗಳ ಕಿಟಕಿ ಗಾಜುಗಳನ್ನು ಒಡೆದಿದ್ದಲ್ಲದೆ ವಾಹನಗಳಿಗೂ ಬೆಂಕಿ ಹಚ್ಚಿದರು ಇವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಪ್ರತಿಭಟನೆಯ ತೀವ್ರತೆಯನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ಅಧ್ಯಕ್ಷ ಟ್ರಂಪ್‌, ಅವರ ಪತ್ನಿ ಮೆಲಾನಿಯಾ ಟ್ರಂಪ್‌ ಹಾಗೂ ಪುತ್ರ ಬ್ಯಾರನ್‌ ಅವರನ್ನು ಸ್ವಲ್ಪ ಸಮಯದವರೆಗೆ ಶ್ವೇತಭವನದೊಳಗಿನ ಭೂಗತ ಬಂಕರ್‌ನಲ್ಲಿ ಇರಿಸಿದ್ದರು ಎಂದು ಸಿಎನ್‌ಎನ್‌ ವರದಿಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು