ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 6 ಸಂಭಾವ್ಯ ಔಷಧ ಸಂಯುಕ್ತ ಪತ್ತೆ

Last Updated 10 ಏಪ್ರಿಲ್ 2020, 21:37 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಕೋವಿಡ್–19 ರೋಗ ಗುಣಪಡಿಸಬಲ್ಲ ಸಾಮರ್ಥ್ಯವುಳ್ಳ ಆರು ಸಂಭಾವ್ಯ ಔಷಧ ಸಂಯುಕ್ತಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ‘ನೇಚರ್’ ಪತ್ರಿಕೆಯಲ್ಲಿ ಈ ಕುರಿತ ಸಂಶೋಧನಾ ಬರಹ ಪ್ರಕಟವಾಗಿದೆ.

ಔಷಧ ಸಂಯುಕ್ತಗಳ ಸಾಮರ್ಥ್ಯವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ (ಕ್ಲಿನಿಕ‌ಲ್ ಟ್ರಯಲ್) ಒಳಪಡಿಸಲಾಗಿದೆ.‘ಕೊರೊನಾ ವೈರಸ್‌ ಗುಣಪಡಿಸಲು ಸದ್ಯ ಪರಿಣಾಮಕಾರಿ ಔಷಧ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಔಷಧ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲೂಕ್ ಗಡಟ್ ಅವರು ಹೇಳಿದ್ದಾರೆ.

‘ಪ್ರಯೋಗಾಲಯದ ಬಳಕೆಗೆ ಪ್ರಮುಖ ಸಂಯುಕ್ತಗಳನ್ನು ಅತಿವೇಗವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಉನ್ನತ ಮಟ್ಟದ ಔಷಧ ಪರೀಕ್ಷಾ ಯೋಜನೆ ಆರಂಭಿಸಲಾಗಿದೆ. ವೈರಸ್‌ಗೆ ಇವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರಿಯಲು ಪ್ರಯೋಗಾಲಯ ಹಾಗೂ ಆಧುನಿಕ ಕಂಪ್ಯೂಟರ್ ಸಾಫ್ಟ್‌ವೇರ್‌ ಮೂಲಕ ಯತ್ನಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‌ವೈರಸ್‌ನ ಕಿಣ್ವವನ್ನು (ಎಂಪ್ರೊ) ಗುರಿಯಾಗಿಸಿ ಸಂಶೋಧನೆ ನಡೆಯುತ್ತಿದೆ. ಈ ಕಿಣ್ವಗಳ ಮೇಲೆ ಔಷಧದ ಅಂಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು’ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕಿಣ್ವಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ವೈರಸ್‌ಗಳನ್ನು ಸಾಯಿಸಲು ಎಷ್ಟು ಸಂಯುಕ್ತಗಳ ಅಗತ್ಯವಿದೆ ಎಂಬುದನ್ನು ತಿಳಿದು
ಕೊಳ್ಳುವ ಸಲುವಾಗಿ ಕಿಣ್ವ ಹಾಗೂ ಕೃತಕ ಕೋಶಗಳ ಮೇಲೆ ನೇರವಾಗಿ ಈ ಔಷಧಗಳನ್ನು ಪ್ರಯೋಗಿಸಲಾಗಿದೆ. ಕಡಿಮೆ ಸಂಖ್ಯೆಯ ಔಷಧ ಸಂಯುಕ್ತಗಳೇ ಪರಿಣಾಮಕಾರಿ ಎಂದು ತಿಳಿದುಬಂದರೆ, ಮುಂದಿನ ಅಧ್ಯಯನಕ್ಕೆ ದಾರಿ ಸಿಕ್ಕಂತಾಗುತ್ತದೆ’ ಎಂದು ಗಡಟ್ ಹೇಳಿದ್ದಾರೆ.

ಸಾವಿರಾರು ಔಷಧ ಸಂಯುಕ್ತಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ 6 ಸಂಯುಕ್ತಗಳು ಕೊರೊನಾ ವೈರಸ್‌ನ ಕಿಣ್ವವನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿವೆ ಎಂಬ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈಗಾಗಲೇ ಔಷಧಿಗಳ ಸಂಶೋಧನೆಯಲ್ಲಿ ಬಳಕೆಯಾಗಿರುವ ಸುಮಾರು 10 ಸಾವಿರ ಸಂಯುಕ್ತಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದಲ್ಲಿ, ಹೊಸ ಸಂಯುಕ್ತಗಳು ಸಹ ಕೋವಿಡ್ ನಿಯಂತ್ರಣ ಔಷಧ ಅಭಿವೃದ್ಧಿಗೆ ನೆರವಾಗುವ ಆಶಾಭಾವವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT