ಬುಧವಾರ, ಜೂನ್ 3, 2020
27 °C

ಕೊರೊನಾ ವೈರಸ್‌ ಪರಿಣಾಮ: ಜಗತ್ತಿಗೆ ಕಾಂಡೋಮ್‌ ಕ್ಷಾಮ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿಗೆ ಕಾಂಡೋಮ್‌ ಕ್ಷಾಮ ತಲೆದೋರಲಿದೆ. ಬೇಡಿಕೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಪೂರೈಕೆ ಶೇ. 50ರಷ್ಟು ಕುಸಿದಿದೆ. ಇನ್ನು ನಮ್ಮ ಬಳಿ ಇರುವ ದಾಸ್ತಾನು ಎರಡು ತಿಂಗಳಲ್ಲಿ ಬರಿದಾಗಲಿದೆ ಎಂದು ಜಗತ್ತಿಗೆ ದೊಡ್ಡ ಪ್ರಮಾಣದಲ್ಲಿ ಕಾಂಡೋಮ್‌ ಪೂರೈಕೆ ಮಾಡುವ ಸಂಸ್ಥೆ ಕಾರೆಕ್ಸ್‌ ಹೇಳಿದೆ. 

ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಲೇಷಿಯಾ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಹೀಗಾಗಿ ದೀರ್ಘಾವದಿಗೆ ಉತ್ಪಾದನೆ ನಿಲ್ಲಿಸಿದ್ದ ಕೊರೊಕ್ಸೆ ಶುಕ್ರವಾರವಷ್ಟೇ ಮತ್ತೆ ಕಾರ್ಯಾರಂಭ ಮಾಡಿದೆ. ಅದೂ ಅರ್ಧ ಸಿಬ್ಬಂದಿಯ ಲಭ್ಯತೆಯೊಂದಿಗೆ. 

‘ಚೀನಾ ಮತ್ತು ಭಾರತ ಅತಿ ಹೆಚ್ಚು ಪ್ರಮಾಣದಲ್ಲಿ ಕಾಂಡೋಮ್‌ ಉತ್ಪಾದಿಸುತ್ತವೆ. ಆದರೆ, ಅಲ್ಲಿ ಕೊರೊನಾ ವೈರಸ್‌ ತೀವ್ರವಾಗಿ ಬಾದಿಸುತ್ತಿದೆ,’ ಎಂದು ಸಂಸ್ಥೆ ಹೇಳಿದೆ. 

‘ಜಗತ್ತಿನ ಹಲವು ರಾಷ್ಟ್ರಗಳು ಕೊರೊನಾ ವೈರಸ್‌ ಸೋಂಕು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿವೆ. ಜನರನ್ನು ಮನೆಗಳಲ್ಲೇ ಇರುವಂತೆ ಸೂಚಿಸಿದೆ. ಅದೂ ಅಲ್ಲದೆ, ಭವಿಷ್ಯದ ಅನಿಶ್ಚಿತತೆ ಹಿನ್ನೆಲೆಯಲ್ಲಿ ದಂಪತಿ ಮಗು ಪಡೆಯುವ ಉದ್ದೇಶದಿಂದ ದೂರ ಉಳಿದಿದ್ದಾರೆ,’ ಎಂದಿರುವ ಕಾರೆಕ್ಸ್‌ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಗೋಹ್‌ ಮೈಹ್‌ ಕೇತ್‌, ಕಾಂಡೋಮ್‌ಗೆ ಸೃಷ್ಟಿಯಾಗಿರುವ ಬೇಡಿಕೆಯನ್ನು ಪರೋಕ್ಷವಾಗಿ ವಿವರಿಸಿದ್ದಾರೆ.  

ಕಾರೆಕ್ಸ್‌ ಸಂಸ್ಥೆ ವರ್ಷಕ್ಕೆ 5 ಬಿಲಿಯನ್‌ಗೂ ಹೆಚ್ಚು ಕಾಂಡೋಮ್‌ಗಳನ್ನು ಉತ್ಪಾದಿಸುತ್ತದೆ. ಅಲ್ಲದೆ, 140 ರಾಷ್ಟ್ರಗಳಿಗೆ ಕಾಂಡೋಮ್‌ ಅನ್ನು ರಫ್ತು ಮಾಡುತ್ತದೆ. ಆದರೆ, ವಿಶ್ವದ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಿರುವುದರಿಂದ ಪೂರೈಕೆಯೂ ದುಸ್ತರವಾಗಿದೆ ಎಂದು ಕಂಪನಿ ತಿಳಿಸಿದೆ. 

ಇದು ಜಗತ್ತಿನ ಅತ್ಯಂತ ಸಂದಿಗ್ಧ ಕಾಲ. ಇಂಥ ಪರಿಸ್ಥಿತಿಯನ್ನು ನಾವು ಎಂದೂ ನೋಡಿರಲಿಲ್ಲ ಎಂದು ಗೋಹ್‌ ಮೈಹ್‌ ಕೇತ್‌ ಹೇಳಿದ್ದಾರೆ. 

ಬೇಡಿಕೆ ಹೆಚ್ಚುತ್ತಿರುವ, ಪೂರೈಕೆ ಕುಸಿಯುತ್ತಿರುವ ಈ ಕಾಲದಲ್ಲಿ ಕಾಂಡೋಮ್‌ ಬೆಲೆ ಗಗನಕ್ಕೇರಲಿದೆ. ಉತ್ಪಾದನೆ ಹೆಚ್ಚಿಸುವ ಸಲುವಾಗಿ ನಾವು ನಮ್ಮ ಸಿಬ್ಬಂದಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ನೀಡಿ ಕೆಲಸಕ್ಕೆ ಕರೆಯುತ್ತಿದ್ದೇವೆ. ಆದರೆ, ನಮ್ಮ ಇಡೀ ಸಿಬ್ಬಂದಿಯ ಅರ್ಧದಷ್ಟು ಜನ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ನಮ್ಮ ಉತ್ಪಾದನೆಯೂ ಕುಸಿಯಲಿದೆ. ಬೆಲೆ ಏರಲಿದೆ ಎಂದೂ ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು