ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಗೆಲ್ಲಲು ಷಿ ಸಹಾಯ ಕೇಳಿದ್ದ ಡೊನಾಲ್ಡ್ ಟ್ರಂಪ್

ಅಮೆರಿಕದ ಮಾಜಿ ಭದ್ರತಾ ಸಲಹೆಗಾರ ಬಾಲ್ಟನ್ ಅವರ ಹೊಸ ಪುಸ್ತಕದಲ್ಲಿ ಉಲ್ಲೇಖ
Last Updated 18 ಜೂನ್ 2020, 7:00 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮರು ಆಯ್ಕೆಗೆ ಸಹಾಯ ಮಾಡುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದರು’ ಎಂದು ಮಾಜಿ ಭ‌ದ್ರತಾ ಸಲಹೆಗಾರ ಜಾನ್ ಬಾಲ್ಟನ್ ಅವರು ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ಬಾಲ್ಟನ್ ಅವರ ಹೊಸ ಪುಸ್ತಕದಲ್ಲಿರುವ ಮಾಹಿತಿಯು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದ್ದು, ಅಮೆರಿಕದ ನ್ಯಾಯಾಂಗ ಇಲಾಖೆಯು ಪುಸ್ತಕದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿದೆ’ ಎಂದು ಶ್ವೇತಭವನ ತಿಳಿಸಿದೆ.

‘ದಿ ರೂಮ್ ವೇರ್ ಇಟ್ ಹ್ಯಾಪೆನ್ಡ್: ಎ ವೈಟ್ ಹೌಸ್ ಮೆಮೊಯಿರ್’ ಪುಸ್ತಕದ ಆಯ್ದ ಭಾಗಗಳನ್ನು ದಿ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಹಾಗೂ ವಾಲ್‌ಸ್ಟ್ರೀಟ್ ಜರ್ನಲ್‌ ಪತ್ರಿಕೆಗಳು ಪ್ರಕಟಿಸಿವೆ.

ಬಾಲ್ಟನ್ ಅವರನ್ನು ಕಳೆದ ವರ್ಷ ಟ್ರಂಪ್ ಅವರು ಕೆಲಸದಿಂದ ವಜಾಗೊಳಿಸಿದ್ದರು. ಸಿಮನ್ ಅಂಡ್ ಶುಸ್ಟರ್ ಸಂಸ್ಥೆ ಪ್ರಕಟಿಸಿರುವ ಪುಸ್ತಕವು ಇದೇ 23ರಂದು ಮಾರಾಟಕ್ಕೆ ಲಭ್ಯವಿತ್ತು.

‘ಬಾಲ್ಟನ್ ಅವರು ಪುಸ್ತಕದಲ್ಲಿ ಉಲ್ಲೇಖಿಸಿರುವ ಅಂಶಗಳು ಅಮೆರಿಕ ಸರ್ಕಾರದ ಆಂತರಿಕ ವರ್ಗೀಕೃತ ಮಾಹಿತಿಯಾಗಿದ್ದು, ಪರಿಶೀಲನೆಗೆ ಒಳಪಟ್ಟಿಲ್ಲ. ಪುಸ್ತಕದ ಅಂಶಗಳನ್ನು ಒಪ್ಪಲಾಗದು’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಮೆಕ್ ಎನಾನಿ ಅವರು ಹೇಳಿದ್ದಾರೆ.

2019ರ ಜೂನ್ 29ರಂದು ಒಸಾಕಾದಲ್ಲಿ ನಡೆದ ಜಿ–20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಮಾತುಕತೆಯಲ್ಲಿ ಟ್ರಂಪ್ ಅವರು ಷಿ ಸಹಾಯ ಕೋರಿದ್ದರು ಎಂದು ಬಾಲ್ಟನ್ ಆರೋಪಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯ ದಿನಾಂಕದವರೆಗೂ ಟ್ರಂಪ್ ಅವರು ಚೀನಾ ಬಗ್ಗೆ ತೆಗೆದುಕೊಂಡಿರುವ ನಿಲುವು ಹಾಗೆಯೇ ಉಳಿಯುತ್ತವೆಯೇ ಎಂಬ ಬಗ್ಗೆ ಬಾಲ್ಟನ್ ಸಂಶಯ ವ್ಯಕ್ತಪಡಿಸಿದ್ದಾರೆ. ‘ಟ್ರಂಪ್ ಅಧ್ಯಕ್ಷ ಸ್ಥಾನವು ಯಾವುದೇ ತತ್ವ, ಸಿದ್ಧಾಂತ ಅಥವಾ ನೀತಿಗಳನ್ನು ಆಧರಿಸಿಲ್ಲ. ಬದಲಾಗಿ ಅದು ಟ್ರಂಪ್‌ ಅವರಲ್ಲಿ ನೆಲೆಗೊಂಡಿದೆ. ಎರಡನೇ ಅವಧಿಯಲ್ಲಿ ಟ್ರಂಪ್ ಏನು ಮಾಡುತ್ತಾರೆಂಬುದನ್ನು ಚೀನಾದ ವಾಸ್ತವವಾದಿಗಳು ಅರ್ಥಮಾಡಿಕೊಳ್ಳಬೇಕು’ ಎಂದು ಪುಸ್ತಕ ಉಲ್ಲೇಖಿಸಿದೆ.

’ಚೀನಾದ ಜೊತೆ ಹೊಸ ಶೀತಲ ಸಮರ ಆರಂಭ ಕುರಿತು ತಪ್ಪು ಹೇಳಿಕೆಗಳನ್ನು ಅಮೆರಿಕದ ಪ್ರಮುಖ ರಾಜಕಾರಣಿಗಳು ನೀಡುತ್ತಿದ್ದಾರೆ ಎಂದು ಷಿ, ಟ್ರಂಪ್ ಎದುರು ಆರೋಪ ಇಟ್ಟರು. ಆದರೆ ಅ ರಾಜಕಾರಣಿಗಳು ಯಾರು ಎಂದು ಹೇಳಲಿಲ್ಲ. ಷಿ ಅವರು ಹೇಳಿದ್ದು ಡೆಮಾಕ್ರಟಿಕ್ ಪಕ್ಷದವರ ಬಗ್ಗೆಯೇ ಅಥವಾ ಎದುರುಗಡೆ ಸಾಲಿನಲ್ಲಿ ಕುಳಿತಿದ್ದ ನಮ್ಮ ಬಗ್ಗೆಯೇ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಷಿ ಆರೋಪವನ್ನು ಒಪ್ಪಿದ ಟ್ರಂಪ್, ಡೆಮಾಕ್ರಟಿಕ್ ಪಕ್ಷದವರಿಗೆ ಚೀನಾದ ಬಗ್ಗೆ ದ್ವೇಷವಿದೆ ಎಂದು ಹೇಳಿದರು’ – ಎಂಬುದಾಗಿ ಬಾಲ್ಟನ್ ಬರೆದಿದ್ದಾರೆ. ಈ ಮಾತುಕತೆಯು ಅಮೆರಿಕದ ಅಧ್ಯಕ್ಷೀಯ ಚುನಾವಣೆಯತ್ತ ತಿರುಗಿತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT