ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಹೀಗಿದೆ ವುಹಾನ್ | ಸರ್ಕಾರ ನಮ್ಮ ಕೈಬಿಡಲಿಲ್ಲ: ಜನರಲ್ಲಿ ಆಡಳಿತದ ಕೃತಜ್ಞತೆ

Last Updated 31 ಮಾರ್ಚ್ 2020, 16:20 IST
ಅಕ್ಷರ ಗಾತ್ರ
ADVERTISEMENT
""
""
""
""

ಕೊರೊನಾ ವೈರಸ್‌ ಸೋಂಕಿನ ಕೇಂದ್ರ ಸ್ಥಾನವಾಗಿದ್ದ ವುಹಾನ್ ನಗರದಲ್ಲಿ ಚೀನಾ ಸರ್ಕಾರ ನಿರ್ಬಂಧಗಳನ್ನು ಸಡಿಲಿಸಿದೆ. ತಮ್ಮ ಮೇಲೆ ವಿಧಿಸಿದ್ದ ನಿರ್ಬಂಧಗಳ ಬಗ್ಗೆ ಅಲ್ಲಿನ ನಿವಾಸಿಗಳಲ್ಲಿ ಮಿಶ್ರಭಾವವಿದೆ. ಇದೀಗ ವುಹಾನ್‌ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗುವ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ.

'ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಿತು' ಎಂದು ಕೆಲವರು ಹೆಮ್ಮೆಯಿಂದ ಹೇಳಿದರೆ, ಕೆಲವರು ಲಾಕ್‌ಡೌನ್‌ ಉಂಟು ಮಾಡಿರುವ ಮತ್ತು ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಆರ್ಥಿಕ ಹೊಡೆತ ನೆನೆದು ಭೀತರಾಗುತ್ತಾರೆ.

ಕೊರೊನಾ ವೈರಸ್ ಸೋಂಕು ಮೊದಲ ಬಾರಿಗೆ ವರದಿಯಾದಾಗ ಚೀನಾದ ವುಹಾನ್ ನಗರದ ಜನಸಂಖ್ಯೆ 1.1 ಕೋಟಿಯಿತ್ತು. ಚೀನಾದಲ್ಲಿ ವರದಿಯಾದ ಒಟ್ಟು ಸೋಂಕು ಪ್ರಕರಣಗಳ (81,518) ಪೈಕಿ ವುಹಾನ್ ನಗರ ವಾಸಿಗಳು ಶೇ 60ರಷ್ಟು ಪ್ರಮಾಣದಲ್ಲಿದ್ದರು.

ವೈದ್ಯಕೀಯ ಸೇವೆ ಒದಗಿಸಲು ನೋಂದಣಿ ಮಾಡಿಸಿರುವ ಯುವ ಸ್ವಯಂ ಸೇವಕಿಯರು

ಬದುಕು ಹಾಳಾಯಿತು

ವುಹಾನ್ ಮಾರುಕಟ್ಟೆ ಇನ್ನೂ ವಹಿವಾಟಿಗೆ ಮುಕ್ತವಾಗಿಲ್ಲ. ನಗರದಲ್ಲಿಯೇ ಇರುವ ಹಣ್ಣಿನ ಮಾರುಕಟ್ಟೆಯೂ ಬಾಗಿಲು ಹಾಕಿದೆ. 1 ಲಕ್ಷ ಯನ್ ಮೌಲ್ಯದ ಮಾವು, ಕಲ್ಲಂಗಡಿ ಹಣ್ಣು ಮತ್ತಿತರ ಕೃಷಿ ಉತ್ಪನ್ನಗಳು ಕೊಳೆಯುತ್ತಿವೆ.

ಈ ಲಾಕ್‌ಡೌನ್‌ನಿಂದ ನನ್ನ ಬದುಕು ಹಾಳಾಯಿತು ಎಂದು ಫಾಂಗ್‌ ಮನೆಹೆಸರು ಇರುವ ಹಣ್ಣು ಮಾರಾಟ ಮಾಡುವ ಮಹಿಳೆಯೊಬ್ಬರು ಅಲವತ್ತುಕೊಂಡರು.

'ನನಗೆ ಖಂಡಿತ ಭಯವಾಗಿತ್ತು' ಎಂದು ಅವರು ಒಂದರ ಮೇಲೆ ಒಂದರಂತೆ ತಾವು ಹಾಕಿಕೊಂಡಿರುವ ಎರಡು ಮಾಸ್ಕ್‌ಗಳನ್ನು ತೋರಿಸಿದರು. ಸೇಬು ಹಣ್ಣುಗಳನ್ನು ಪ್ಯಾಕ್ ಮಾಡಿ ಜನವಸತಿ ಪ್ರದೇಶಗಳಲ್ಲಿ ಸಗಟು ದರದಲ್ಲಿ ಅವರು ಸೇಬುಗಳನ್ನು ಮಾರುತ್ತಾರೆ.

ಕಳೆದ ಮೂರು ತಿಂಗಳಿನಿಂದ ನಾನು ಸಾಕಷ್ಟು ಹಣ ಮಾಡಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವುಹಾನ್‌ ಜನರಲ್ಲಿ ಲಾಕ್‌ಡೌನ್ ಬಗ್ಗೆ ಒಂದೇ ಬಗೆಯ ಅಭಿಪ್ರಾಯವಿಲ್ಲ. ಕೆಲವರಿಗೆ ಸರ್ಕಾರದ ನಿರ್ಧಾರ ಮತ್ತು ಅದು ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಅತಿಯಾದ ಹೆಮ್ಮೆಯಿದೆ. ಕೆಲವರು, ನಾವು ಅನುಭವಿಸಿದ ನಷ್ಟ ಮತ್ತು ಕಷ್ಟಕ್ಕೆ ಹೋಲಿಸಿದರೆ ನಮಗೆ ಸಿಕ್ಕ ಸಹಾಯ ಏನೇನೂ ಸಾಲದು ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಲಾಕ್‌ಡೌನ್ ವಿಧಿಸಿದ ಕಾರಣ ನನ್ನ ತಾಯಿಯನ್ನು ನೀಡಲು ಆಗಲೇ ಇಲ್ಲ ಎಂದು ವುಹಾನ್ ನಗರದ ಬೀದಿಯಲ್ಲಿ ಮಾತಿಗೆ ಸಿಕ್ಕ ಡೈ ಜಿನ್‌ಫೆಂಗ್ ಕಣ್ಣೀರಿಟ್ಟರು.

ವುಹಾನ್‌ನ ಯಾಂಗಟ್ಜೆ ನದಿಯ ಸೇತುವೆ ಮೇಲೆ ಮಾಸ್ಕ್ ಧರಿಸಿ ನಿಂತ ಯುವ ದಂಪತಿಗಳು

ಸುಸ್ಥಿತಿಗೆ ತರಲು ಸರ್ಕಾರದ ಪ್ರತಿಜ್ಞೆ

ಕೆಲ ಕಾರ್ಖಾನೆಗಳು ಕೆಲಸ ಆರಂಭಿಸಿವೆ. ಏಪ್ರಿಲ್ 8ರ ನಂತರ ನಗರದಿಂದ ಹೊರಗೆ ಹೋಗಲು ಜನರಿಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಕೊರೊನಾ ವೈರಸ್‌ ಸೋಂಕಿನಿಂದಾಗಿ ಹಳಿತಪ್ಪಿರುವ ಅರ್ಥ ವ್ಯವಸ್ಥೆಯನ್ನು ಮತ್ತೆ ಸುಸ್ಥಿತಿಗೆ ತರಲು ಎಲ್ಲ ಕ್ರಮ ತೆಗೆದುಕೊಳ್ಳುವುದಾಗಿ ಚೀನಾ ಘೋಷಿಸಿದೆ. ವುಹಾನ್ ನಗರವು ಮತ್ತೆ ಮೊದಲಿನಿಂತೆ ಸ್ವಾವಲಂಬಿಯಾಗಲು ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದೆ.

ಜನವರಿಯಲ್ಲಿ ನಡೆಯುವ ಸೌರಮಾನ ಹೊಸ ವರ್ಷದ ನಂತರ ತನ್ನ ಮಕ್ಕಳನ್ನು ನೋಡಲು ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಮಾತು ಆರಂಭಿಸಿದಾಗ ಫಾಂಗ್‌ ಕಣ್ಣೀರಿಟ್ಟರು. ಲಾಕ್‌ಡೌನ್ ಅವಧಿ ಮುಗಿದರೂ ಮಕ್ಕಳನ್ನು ನೋಡಲು ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಈಗ ಹಣ್ಣು ಮಾರಿ, ಎರಡು ಕಾಸು ಕಾಣುವ ಉತ್ಸಾಹದಲ್ಲಿ ಅವರಿದ್ದಾರೆ.

ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಗ್ರಾಹಕರ ತಲೆಕೂದಲು ಕತ್ತರಿಸುತ್ತಿರುವ ವುಹಾನ್‌ ನಗರದ ಚಿಯಾಂಗ್ ಸ್ವಾಂಗ್

ಸರ್ಕಾರದ ಬಗ್ಗೆ ಹೆಮ್ಮೆಯಿದೆ

ವುಹಾನ್ ನಗರದ ತಮ್ಮ ಮನೆಯ ಕಾಂಪೌಂಡ್‌ನಲ್ಲಿ ಜೀವರಕ್ಷಕ ವಸ್ತುಗಳಿದ್ದ ಪೆಟ್ಟಿಗೆಯೊಂದನ್ನು ಹು ಯಾನ್‌ಫಂಗ್‌ ಬಿಚ್ಚುತ್ತಿದ್ದರು.

ತಮ್ಮ ಮನೆಯಿರುವ ಸ್ಥಳವೂ ಸೇರಿದಂತೆ ವುಹಾನ್ ನಗರದ ಹಲವು ಜನವಸತಿ ಪ್ರದೇಶಗಳಲ್ಲಿ ಸರ್ಕಾರ ನಿರ್ಬಂಧ ಸಡಿಲಿಸಿದೆ ಎಂದು ಹೇಳುವಾಗ ಅವರ ಮುಖದಲ್ಲಿ ಉತ್ಸಾಹ ಚಿಮ್ಮುತ್ತಿತ್ತು.

ಕಳೆದ ಎರಡು ತಿಂಗಳು ಹೇಗೆ ನಿರ್ವಹಿಸಿದೆವು ಎಂದು ನೆನಪಿಸಿಕೊಂಡಾಗ ಅವರು ಭಾವುಕರಾಗಿ ಗದ್ಗದಿತರಾದರು. ನಮಗೆ ಬೇಕಾಗುವಷ್ಟು ಪರಿಕರಗಳನ್ನು ಒದಗಿಸುವ ಮೂಲಕ ಸರ್ಕಾರ ನಮ್ಮ ಜೀವ ಉಳಿಸಿತು. ಮಾಸ್ಕ್‌ನಂಥ ಜೀವರಕ್ಷಕಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರ ಎಂದಿಗೂ ಚೌಕಾಸಿ ಮಾಡಲಿಲ್ಲ ಎಂದು ಹೆಮ್ಮೆಯಿಂದ ಹೇಳಿದರು.

'ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ನಮ್ಮನ್ನು ನಡೆಸಿಕೊಂಡ, ನಮ್ಮನ್ನು ಕಾಪಾಡಿಕೊಂಡ ರೀತಿ ನೆನೆಸಿಕೊಂಡರೆ ನಮ್ಮ ದೇಶ ಸುಭದ್ರವಾಗಿದೆ ಎಂಬ ಭಾವನೆ ಮೈದುಂಬುತ್ತದೆ. ಯೂರೋಪ್‌ನ ಅನುಭವ ನೋಡಿ ಹೇಗಾಗಿದೆ ಅಂತ' ಎಂದು ಅವರು ಇಟಲಿ ಮತ್ತು ಸ್ಪೇನ್‌ ಪರಿಸ್ಥಿತಿಯ ಜೊತೆಗೆ ತಮ್ಮ ದೇಶವನ್ನು ಹೋಲಿಸಿಕೊಂಡರು.

ಸರ್ಕಾರ ಇಂದಿಗೂ ವುಹಾನ್ ಜನರಿಗೆ ಆಹಾರ ಒದಗಿಸುತ್ತಿದೆ. ಸರ್ಕಾರ ಕಳಿಸಿದ್ದ ಆಹಾರದ ಪೊಟ್ಟಣವನ್ನು ಕೈಲಿ ಹಿಡಿದ ಮತ್ತೋರ್ವ ನಿವಾಸಿ ಯು ಟಿಯಾನ್‌ಹೊಂಗ್, 'ಸರ್ಕಾರದ ಮಾತಿಗೆ ಓಗೊಟ್ಟು ನಾವು ಮನೆಯಲ್ಲೇ ಉಳಿದೆವು. ನಮ್ಮನ್ನು ಸರ್ಕಾರ ಮರೆಯಲಿಲ್ಲ. ನಾನು ಕೇವಲ ಊಟ-ಹಣದ ವಿಚಾರವನ್ನು ಮಾತನಾಡುತ್ತಿಲ್ಲ. ಸರ್ಕಾರ ನಮ್ಮ ಅಗತ್ಯಗಳನ್ನು ಗಮನಿಸುತ್ತದೆ ಎಂಬ ಭಾವನೆಯೇ ನಮಗೆ ಖುಷಿಕೊಡುತ್ತದೆ' ಎಂದು ಖುಷಿಯಿಂದ ಹೇಳಿದರು.

ಜೀವ ರಕ್ಷಕ ಪರಿಕರ ಧರಿಸಿರುವ ಮಹಿಳೆ ಗ್ಲಾಸ್ ಸರಿಪಡಿಸಿಕೊಂಡ ಕ್ಷಣ

ಡ್ರ್ಯಾಗನ್‌ ನಾಡಿನಲ್ಲಿ ಕೊರೊನಾ ಪಿಡುಗು

ಚೀನಾದಲ್ಲಿ ಈವರೆಗೆ (ಮಾರ್ಚ್ 31) ಒಟ್ಟು81,470 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಈ ಪೈಕಿ 75,770 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 3304 ಮಂದಿ ಮೃತಪಟ್ಟಿದ್ದರೆ, 2396 ಮಂದಿ ಇಂದಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT