ಶುಕ್ರವಾರ, ಜುಲೈ 30, 2021
23 °C
1,645 ಮಂದಿ ಮೇಲೆ ಎಫ್‌ಐಆರ್

ಕೋವಿಡ್ | 14 ದಿನ ಮನೆಯೊಳಗಿರದ ಮಂದಿ: ಕ್ವಾರಂಟೈನ್‌ ನಿಯಮ ಮುರಿದ 2.25 ಲಕ್ಷ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಕಾರಣಕ್ಕೆ 14 ದಿನಗಳ ಮನೆ ಕ್ವಾರಂಟೈನ್ ಇರಬೇಕಾಗಿದ್ದ 2.25 ಲಕ್ಷ ಮಂದಿ ನಿಯಮ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದಿದ್ದಾರೆ. ಅವರಲ್ಲಿ 1,645 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು. ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಮನೆ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ.

ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು. ಒಂದು ವೇಳೆ ಈ ಅವಧಿಯಲ್ಲಿ ಮನೆಯಿಂದ ಹೊರಬಂದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಇಷ್ಟಾಗಿಯೂ ಕೆಲವರು ನಿಯಮವನ್ನು ಗಾಳಿಗೆ ತೂರಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ. 

ಬೆಂಗಳೂರಿನಲ್ಲಿ ಗರಿಷ್ಠ: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಸದ್ಯ ರಾಜ್ಯದಲ್ಲಿ 1.54 ಲಕ್ಷ ಮಂದಿ ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಪ್ರತಿ ನಿತ್ಯ ಸಾವಿರಾರು ಮಂದಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಪದೇ ಪದೇ  ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ 1.51 ಲಕ್ಷ ಮಂದಿ ನಿಯಮ ಉಲ್ಲಂಘಿಸಿದ್ದು, ಅದರಲ್ಲಿ 570 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿ (124), ಬೆಂಗಳೂರು ಗ್ರಾಮಾಂತರ (104), ಕಲಬುರ್ಗಿ (106), ವಿಜಯಪುರ (91), ರಾಯಚೂರು (73), ಬೀದರ್‌ (71) ಜಿಲ್ಲೆಯಲ್ಲಿಯೂ ಅಧಿಕ ಮಂದಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

‘ಮನೆ ಕ್ವಾರಂಟೈನ್‌ಗೆ ಒಳಗಾದವರ ಕೈಗಳಿಗೆ ಮುದ್ರೆಗಳನ್ನು ಹಾಕಲಾಗುತ್ತದೆ. ಅದೇ ರೀತಿ, ಮನೆಯ ಹೊರ ಗೋಡೆಯ ಮೇಲೆ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಅವರ ಚಲನವಲನದ ಮೇಲೆ ಅಕ್ಕಪಕ್ಕದ ನಿವಾಸಿಗಳು ನಿಗಾ ಇಡಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗಡೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಅಂಕಿ–ಅಂಶಗಳು
1,54,909: 
ಸದ್ಯ ಮನೆ ಕ್ವಾರಂಟೈನ್‌ನಲ್ಲಿ ಇರುವವರು
2,205: ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರವಾದವರು
‌2,25,908: ಎಚ್ಚರಿಕೆ ನೀಡಿ ಮನೆಗೆ ಕಳುಹಿಸಲ್ಪಟ್ಟವರು

ನಿಯಮ ಉಲ್ಲಂಘನೆ ಪ್ರಕರಣ ಅಧಿಕ ವರದಿಯಾದ ಜಿಲ್ಲೆಗಳು

ಜಿಲ್ಲೆ ನಿಯಮ ಉಲ್ಲಂಘನೆಎಫ್‌ಐಆರ್

ಬೆಂಗಳೂರು

1,51,987570

ಕಲಬುರ್ಗಿ

8,002106

ಬಳ್ಳಾರಿ

7,53700

ರಾಯಚೂರು

7,47873

ಬೆಳಗಾವಿ

6,294124

ಮೈಸೂರು

5,60244

ಧಾರವಾಡ

5,08164

ಹಾಸನ

4,61216

ಗದಗ

4,06629
ರಾಮನಗರ3,02608

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು