ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ₹2 ಸಾವಿರ ಕೋಟಿ ಸಚಿವರ ಜೇಬಿಗೆ: ಸಿದ್ದರಾಮಯ್ಯ

ನ್ಯಾಯಮೂರ್ತಿ ನೇತೃತ್ಚದಲ್ಲಿ ನ್ಯಾಯಾಂಗ ತನಿಖೆ: ಸಿದ್ದರಾಮಯ್ಯ ಪಟ್ಟು
Last Updated 23 ಜುಲೈ 2020, 7:36 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ 4,167 ಕೋಟಿ ಖರ್ಚು ಮಾಡಿದೆ. ಅದರಲ್ಲಿ ಎರಡು ಸಾವಿರ ಕೋಟಿ ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೆ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, 'ರಾಜ್ಯ ಸರ್ಕಾರ ಮಾಡಿರುವ ಪ್ರತಿ ಪೈಸೆ ಖರ್ಚಿಗೂ ಲೆಕ್ಕ ಕೊಡಬೇಕು. ಲೆಕ್ಕ ಕೇಳುವುದು ನಮ್ಮ ಹಕ್ಕು. ಇಲ್ಲದಿದ್ದರೆ ಜನರಿಗೆ ದ್ರೋಹ ಮಾಡಿದಂತೆ ಆಗುತ್ತದೆ'ಎಂದರು. 'ಈ ಅವ್ಯವಹಾರದ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು'ಎಂದು ಅವರು ಆಗ್ರಹಿಸಿದರು.

'ಕೋವಿಡ್‌ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಹಿಂದೆಂದೂ ನೋಡಿರಲಿಲ್ಲ'ಎಂದು ಅವರು ಛೇಡಿಸಿದರು.

'ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಮಾಡಿರುವ ಖರೀದಿ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಜೂನ್‌ನಿಂದ ಪತ್ರ ಬರೆಯುತ್ತಾ ಇದ್ದೇನೆ. ಎಲ್ಲ ಇಲಾಖೆಗಳ ಲೆಕ್ಕ ಕೊಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜುಲೈ 10ರಂದು ಪತ್ರ ಬರೆದಿದ್ದೇನೆ. ನಾನು ಬರೆದ 20 ಪತ್ರಗಳ ಪೈಕಿ ಒಂದಕ್ಕೆ ಮಾತ್ರ ಅಪೂರ್ಣ ಉತ್ತರ ನೀಡಿದೆ. 24 ಗಂಟೆಗಳಲ್ಲಿ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಇನ್ನೂ ಉತ್ತರ ನೀಡಿಲ್ಲ. ಇದು ಭ್ರಷ್ಟಾಚಾರವನ್ನು ಮುಚ್ಚಿಡುವುದು ಅಲ್ಲವೇ'ಎಂದು ಅವರು ಪ್ರಶ್ನಿಸಿದರು.

ವೈದ್ಯಕೀಯ ಉಪಕರಣಗಳ ಖರೀದಿಗೆ ₹324 ಕೋಟಿಯಷ್ಟೇ ಖರ್ಚು ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ₹33 ಕೋಟಿಯಷ್ಟೇ ಖರ್ಚು ಮಾಡಿದ್ದೇವೆ ಎಂದು ಇನ್ನೊಬ್ಬ ಸಚಿವರು ಹೇಳಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ, ಆರೊಗ್ಯ ಇಲಾಖೆಯೇ ₹700 ಕೋಟಿ ಖರ್ಚು ಮಾಡಿದೆ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳು ₹200 ಕೋಟಿ, ಜಿಲ್ಲಾಡಳಿತಗಳು ₹742 ಕೋಟಿ, ಕಾರ್ಮಿಕ ಇಲಾಖೆ ₹1 ಸಾವಿರ ಕೋಟಿ. ವೈದ್ಯಕೀಯ ಶಿಕ್ಷಣ ಇಲಾಖೆ ₹815 ಕೋಟಿ, ಸಮಾಜ ಕಲ್ಯಾಣ, ಶಿಕ್ಷಣ, ಪೊಲೀಸ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ₹500 ಕೋಟಿ ಖರ್ಚು ಮಾಡಿವೆ. ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಹಾಸಿಗೆ ದಿಂಬು ಖರೀದಿಗೆ ಕೇಂದ್ರ ಸರ್ಕಾರ ₹160 ಕೋಟಿ ನೀಡಿದೆ. ಒಟ್ಟು ₹4,167 ಕೋಟಿ ಖರ್ಚು ಮಾಡಿದೆ. ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ದರ ನೀಡಿ ಉಪಕರಣಗಳ ಖರೀದಿ ಮಾಡಿದೆ‘ ಎಂದು ಅವರು ಆರೋಪಿಸಿದರು.

ದೇಶದಲ್ಲಿ 564 ಸೋಂಕಿತರು ಇದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಘೋಷಣೆ ಮಾಡಿದರು. ಆಗ ರಾಜ್ಯದಲ್ಲಿ ಬೆರಳೆಣಿಕೆಯ ಪ್ರಕರಣಗಳು ಇದ್ದವು. ಈಗ ದೇಶದಲ್ಲಿ 12 ಲಕ್ಷ ಸೋಂಕಿತರು ಇದ್ದಾರೆ. 29 ಸಾವಿರ ರೋಗಿಗಳು ಸತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 75 ಸಾವಿರದ ಗಡಿ ದಾಡಿದೆ. 1500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ವೇಳೆಯಲ್ಲೇ ರಾಜ್ಯ ಸರ್ಕಾರ ವ್ಯಾಪಕ ಅವ್ಯವಹಾರ ಮಾಡಿದ್ದಾರೆ. ಇದನ್ನು ನಾವು ಪ್ರಶ್ನಿಸಬಾರದು ಎಂದು ಹೇಳುತ್ತಿದ್ದಾರೆ. ಇದು ಚುನಾಯಿತ ಸರ್ಕಾರ ಆಡುವ ಮಾತೇ‘ ಎಂದು ಪ್ರಶ್ನಿಸಿದರು.

ಪ್ರತಿ ವೆಂಟಿಲೇಟರ್‌ಗೆ ₹18 ಲಕ್ಷ: ಕೇಂದ್ರ ಸರ್ಕಾರ ಪಿಎಂ ಕೇರ್‌ ಫಂಡ್‌ ಅಡಿಯಲ್ಲಿ ಇಡೀ ದೇಶಕ್ಕೆ 50 ಸಾವಿರ ವೆಂಟಿಲೇಟರ್‌ಗಳನ್ನು ನೀಡುತ್ತಿದೆ. ಅವುಗಳ ಖರೀದಿಗೆ ₹2 ಸಾವಿರ ಕೋಟಿ ಖರ್ಚು ಮಾಡಿದೆ. ಅಂದರೆ ಪ್ರತಿ ವೆಂಟಿಲೇಟರ್‌ ಅನ್ನು ₹4 ಲಕ್ಷಕ್ಕೆ ಕೊಂಡುಕೊಂಡಿದೆ. ತಮಿಳುನಾಡಿನವರು ಪ್ರತಿ ವೆಂಟಿಲೇಟರ್‌ಗೆ ₹4.78 ಲಕ್ಷ ವೆಚ್ಚ ಮಾಡಿದ್ದಾರೆ. ರಾಜ್ಯ ಸರ್ಕಾರ ಮಾರ್ಚ್‌ 22ರಂದು ₹5.60 ಲಕ್ಷಕ್ಕೆ, ಮತ್ತೊಮ್ಮೆ ₹12.30 ಲಕ್ಷಕ್ಕೆ ಹಾಗೂ ಮಾರ್ಚ್‌ 24ರಂದು ₹18.20 ಲಕ್ಷ ಕೊಟ್ಟು ಖರೀದಿಸಿತು. ಪಾರದರ್ಶಕವಾಗಿ ವ್ಯವಹಾರ ನಡೆದಿದೆ ಎಂದು ಹೇಳಬೇಕಾ. ಅಂತಹ ವಿಶೇಷ ಏನಿದೆ ಈ ವೆಂಟಿಲೇಟರ್‌ಗಳಲ್ಲಿ‘ ಎಂದು ಸಿದ್ದರಾಮಯ್ಯ ಕೇಳಿದರು. ಇದರಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿಲ್ಲ ಎನ್ನದೆ ಭ್ರಷ್ಟಾಚಾರದ ಸುವಾಸನೆ ಬರುತ್ತಿದೆ ಎಂಬುದಾಗಿ ಕೇಳಬೇಕಿತ್ತ‘ ಎಂದು ವ್ಯಂಗ್ಯವಾಡಿದರು.

'ರಾಜ್ಯ ಸರ್ಕಾರ 9.65 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ ಎಂದು ಆರೋಗ್ಯ ಸಚಿವರೇ ಹೇಳಿದ್ದಾರೆ. ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ ₹330 ಬೆಲೆ ಇದೆ. ರಾಜ್ಯ ಸರ್ಕಾರ ₹2117 ಕೊಟ್ಟು ಖರೀದಿ ಮಾಡಿದೆ. ಮಹಾರಾಷ್ಟ್ರದ ಕಂಪನಿಯಿಂದ 3.5 ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಿದರು. ಕಳಪೆ ಗುಣಮಟ್ಟದ್ದು ಎದು ವೈದ್ಯರು ಗಲಾಟೆ ಮಾಡಿದರು. ಬಳಿಕ 1 ಲಕ್ಷ ಕಿಟ್‌ಗಳನ್ನು ಮರಳಿಸಿದರು. ಚೀನಾದ ಕಂಪನಿಯಿಂದ 3 ಲಕ್ಷ ಕಿಟ್‌ಗಳನ್ನು (₹94.22 ಕೋಟಿ ಖರ್ಚು) ಕೊಂಡುಕೊಂಡರು. ಒಂದು ಕಡೆಯಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸಿ ಎನ್ನುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಚೀನಾದಿಂದಲೇ ಉತ್ಪನ್ನಗಳ ಖರೀದಿ ಮಾಡುತ್ತಿದ್ದಾರೆ. ಬಿಜೆಪಿಯವರ ದ್ವಂದ್ವ ನಿಲುವಿಗೆ ಇದು ಸಾಕ್ಷಿ'ಎಂದರು.

'ಆರೋಗ್ಯ ಇಲಾಖೆಯವರು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಿದೆ ಎಂದು ಬಿಜೆಪಿಯ ಡಾ.ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅವರು ವೈದ್ಯರು. ಅವರು ಸತ್ಯ ಹೇಳಿದ್ದಾರೆ. ಬಿಜೆಪಿಯವರು ಜನರಿಗೆ ಮಾಡುತ್ತಿರುವ ಮೋಸವನ್ನು ಅವರ ಪಕ್ಷದವರೇ ತೋರಿಸಿದ್ದಾರೆ'ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, 'ಕೊರೊನಾ ಹೆಣದ ಹೆಸರಿನಲ್ಲಿ ಬಿಜೆಪಿಯವರು ದುಡ್ಡು ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ'ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT