ಬುಧವಾರ, ಆಗಸ್ಟ್ 4, 2021
26 °C
ಒಂದೇ ದಿನ 2,496 ಮಂದಿಗೆ ಸೋಂಕು l 1,142 ಮಂದಿ ಗುಣಮುಖ

ಕೋವಿಡ್–19 | 14 ದಿನಗಳಲ್ಲಿ 596 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19ನಿಂದ ಬಳಲುತ್ತಿದ್ದವರಲ್ಲಿ ಮತ್ತೆ 87 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಹೊಸದಾಗಿ 2,496 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 44,077ಕ್ಕೆ ಏರಿಕೆಯಾಗಿದೆ. 

ಕಳೆದ ಕೇವಲ 14 ದಿನಗಳಲ್ಲಿ 28,830 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 596 ಮಂದಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 842ಕ್ಕೆ ತಲುಪಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಿದ ಪರಿಣಾಮ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಮಂಗಳವಾರ ಒಂದೇ ದಿನ 23,674 ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಇನ್ನೂ 1,580 ಮಂದಿಯ ವರದಿ ಬರಬೇಕಿದೆ. 

ಪ್ರಕರಣಗಳು ಹೆಚ್ಚಿದಂತೆ ಚೇತರಿಸಿಕೊಂಡು ಮನೆಗೆ ಹೋಗುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ 664 ಸೇರಿದಂತೆ ರಾಜ್ಯದಲ್ಲಿ 1,142 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಸೋಂಕಿತರಲ್ಲಿ 17,390 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 317 ಸೇರಿದಂತೆ 540 ರೋಗಿಗಳ ಸ್ಥಿತಿ ಗಂಭೀರವಾಗಿದೆ. 

ಬೆಂಗಳೂರಿನಲ್ಲಿ ಗರಿಷ್ಠ: ಬೆಂಗಳೂರಿನಲ್ಲಿ ಹೊಸದಾಗಿ 1,267 ಮಂದಿಗೆ ಸೋಂಕು ತಗುಲಿದೆ. 56 ಮಂದಿ ಸೋಂಕಿನಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಮೈಸೂರು (125), ಕಲಬುರ್ಗಿ (121), ಧಾರವಾಡ (100), ಬಳ್ಳಾರಿ (99), ಕೊ‍ಪ್ಪಳ (98), ದಕ್ಷಿಣ ಕನ್ನಡದಲ್ಲಿ  (91) ಕೂಡ ಅಧಿಕ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 5 ಮಂದಿ, ಮೈಸೂರು, ದಕ್ಷಿಣ ಕನ್ನಡ ಹಾಗೂ ಬಾಗಲಕೋಟೆಯಲ್ಲಿ ತಲಾ 4 ಮಂದಿ, ವಿಜಯಪುರ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 3 ಮಂದಿ, ರಾಯಚೂರು ಹಾಗೂ ಚಾಮರಾಜನಗರದಲ್ಲಿ ತಲಾ ಇಬ್ಬರು, ಕಲಬುರ್ಗಿ, ಧಾರವಾಡ, ದಾವಣಗೆರೆ ಹಾಗೂ ಹಾಸನದಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿರುವುದು ಮಂಗಳವಾರ ಖಚಿತವಾಗಿದೆ.

ಆರೋಗ್ಯ ಸಿಬ್ಬಂದಿಗೆ ಕ್ವಾರಂಟೈನ್
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಪರಿಣಾಮ ಆಸ್ಪತ್ರೆಗಳು ಹಾಗೂ ಸಮುದಾಯದ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ 7 ದಿನಗಳು ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಲು ಸೂಚಿಸಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸಿಬ್ಬಂದಿಗೆ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಲು ಸೂಕ್ತ ವ್ಯವಸ್ಥೆ ಇಲ್ಲದಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಗಳೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇಂದಿನಿಂದ ಬೀದರ್, ಯಾದಗಿರಿ  ಲಾಕ್‌ಡೌನ್‌
ಕಲಬುರ್ಗಿ‌:
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆಯ ವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ.

‘ಅಂತರ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಇಲ್ಲ. ಆದರೆ, ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಇಲ್ಲ. ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಕಾರ್ಯಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ’ ಎಂದು ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಜು.15ರಿಂದ 22ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಉಡುಪಿ: ಲಾಕ್‌ಡೌನ್‌ ಬದಲು ಗಡಿ ಸೀಲ್‌ಡೌನ್‌
ಇದೇ 15ರಿಂದ 29ರವರೆಗೆ ಜಿಲ್ಲಾ ಗಡಿಗಳನ್ನು ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಮಂಗಳವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ‘ತಜ್ಞ ವೈದ್ಯರ ಸಲಹೆಯಂತೆ ಜಿಲ್ಲೆಯಲ್ಲಿ ಲಾಕ್‌ಡೌನ್ ಬದಲು ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಹೊರ ಜಿಲ್ಲೆಗಳಿಂದ ಯಾರೂ ಬರುವಂತಿಲ್ಲ, ಜಿಲ್ಲೆಯವರು ಹೊರಗೆ ಹೋಗುವಂತಿಲ್ಲ. ತುರ್ತು ವೈದ್ಯಕೀಯ ಅಗತ್ಯಗಳಿಗೆ ಮಾತ್ರ ಜಿಲ್ಲೆಯನ್ನು ಪ್ರವೇಶಿಸಬಹುದು’ ಎಂದರು.

‘ಜಿಲ್ಲೆಯಿಂದ ಹೊರ ಹೋಗುವವರಿಗೆ ಹಾಗೂ ಬರುವವರಿಗೆ ಇದೇ ಬುಧವಾರ ರಾತ್ರಿ 8ರವರೆಗೆ ಕಾಲಾವಕಾಶ ಇದೆ. ನಂತರ ಜಿಲ್ಲೆಯ ಎಲ್ಲ ಗಡಿಗಳು ಬಂದ್ ಆಗಲಿವೆ. ಸಾರ್ವಜನಿಕ ಸಾರಿಗೆ ಸಹ ಇರುವುದಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು