ಸೋಮವಾರ, ಆಗಸ್ಟ್ 3, 2020
27 °C
ಕನ್ನಡ ಅಧ್ಯಯನ ಪೀಠಕ್ಕೆ ಬೀಗ ಬೀಳುವ ಸಾಧ್ಯತೆ

ಜೆಎನ್‌ಯು: ಪ್ರಾಧ್ಯಾಪಕರ ನೇಮಕಕ್ಕೆ ಆಗ್ರಹ | ನೇಮಕಾತಿಗೆ ಇದೇ 20ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆ ಹೆಚ್ಚಿಸಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಭಾರತೀಯ ಭಾಷಾ ಕೇಂದ್ರದ ಕನ್ನಡ ಅಧ್ಯಯನ ಪೀಠ ಸಹ ಇತಿಹಾಸದ ಪುಟಗಳನ್ನು ಸೇರುವ ಆತಂಕ ಎದುರಿಸುತ್ತಿದೆ.

ಜೆಎನ್‌ಯುನ ಕನ್ನಡ ಪೀಠಕ್ಕೆ ಕೂಡಲೇ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು, ಇಲ್ಲವೇ ಕೇಂದ್ರ ಧನಸಹಾಯ ಆಯೋಗಕ್ಕೆ (ಯುಜಿಸಿ) ಹಸ್ತಾಂತರಿಸಬೇಕು ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ. 

ಜೆಎನ್‌ಯುನಲ್ಲಿ ದೇಶ–ವಿದೇಶದ ಸುಮಾರು 8 ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.  2015ರಲ್ಲಿ ಅಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ಪೀಠವು ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ರಾಜ್ಯ ಸರ್ಕಾರ ನೀಡಿದ ₹ 5 ಕೋಟಿ ಅನುದಾನವನ್ನು ಪೀಠವು ಇಡುಗಂಟಾಗಿ ಇರಿಸಿದೆ. ಸದ್ಯ ಸೇವೆ ಸಲ್ಲಿಸುತ್ತಿರುವ ಏಕಮಾತ್ರ ಪ್ರಾಧ್ಯಾಪಕರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಆ.20ರಂದು ನಿವೃತ್ತರಾಗಲಿದ್ದಾರೆ. ಈ ಅವಧಿಯಲ್ಲಿ ಬೇರೆ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯ ನೇಮಕ ಮಾಡದಿದ್ದಲ್ಲಿ ಕನ್ನಡದ ಪೀಠಕ್ಕೆ ಬೀಗ ಬೀಳುವ ಸಾಧ್ಯತೆಯಿದೆ.  

ಬಿಳಿಮಲೆ ಅವರು ಕಳೆದ ಡಿಸೆಂಬರ್‌ನಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದರು. ಆದರೆ, ಈ ಬಗ್ಗೆ ಇಲಾಖೆ ಗಮನಹರಿಸದ ಪರಿಣಾಮ ಈಗ ಪೀಠವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದೆಹಲಿ ವಿಶ್ವವಿದ್ಯಾಲಯ, ಬನಾರಸ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಕನ್ನಡಪೀಠಕ್ಕೆ ಬೀಗ ಬಿದ್ದಿದೆ. ಅದೇ ಹಾದಿಯಲ್ಲಿ ಈ ಪೀಠವನ್ನೂ ಕಳೆದುಕೊಳ್ಳುತ್ತೇವೆಯೇ ಎಂಬ ಕಳವಳವನ್ನು ಸಾಹಿತಿ
ಗಳು ಹಾಗೂ ಕನ್ನಡ ಪರ ಹೋರಾಟಗಾರರು ವ್ಯಕ್ತಪಡಿಸಲಾರಂಭಿಸಿದ್ದಾರೆ.

ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಜೂನ್ 25ರಂದು ಜೆಎನ್‌ಯು ಉಪಕುಲಪತಿ ಪ್ರೊ.ಜಗದೀಶ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದು, ಪ‍್ರಾಧ್ಯಾಪಕರ ನೇಮಕಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಯುಜಿಸಿಗೆ ಹಸ್ತಾಂತರಿಸಬೇಕು: ‘ಕನ್ನಡ ಅಧ್ಯಯನ ಪೀಠ ಶಾಶ್ವತವಾಗಿ ಉಳಿಯಬೇಕಾದರೆ ಅದನ್ನು ನಿಯಮದ ಅನುಸಾರ ಯುಜಿಸಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿಗೆ ಕೂಡ ನಾನು ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಇಲ್ಲವಾದಲ್ಲಿ ಇದೇ ರೀತಿ ಮೂರು ಅಥವಾ ಐದು ವರ್ಷದ ಬಳಿಕ ಸಮಸ್ಯೆ ಉಂಟಾಗಲಿದೆ’ ಎಂದು ‍ಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು. 

‘ಈಗಾಗಲೇ ಹಲವು ಪೀಠಗಳು ಪ್ರಾಧ್ಯಾಪಕರಿಲ್ಲದೆಯೇ ಮುಚ್ಚಿವೆ. ಇಲ್ಲಿನ ಪೀಠದಲ್ಲಿ ಹಲವರು ಕನ್ನಡವನ್ನು ಕಲಿತಿದ್ದಾರೆ. ನಿರಂತರವಾಗಿ ಕನ್ನಡದ ಕೆಲಸಗಳು ನಡೆಯುತ್ತಿವೆ. ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಯುಜಿಸಿಗೆ ಹಸ್ತಾಂತರಿಸಿದಲ್ಲಿ ಪೀಠವು ಕನ್ನಡ ವಿಭಾಗವಾಗಿ ಪರಿವರ್ತನೆಯಾಗಿ,
ಇನ್ನಷ್ಟು ಮಹತ್ವ ಪಡೆಯಲಿದೆ’ ಎಂದರು. 

*****

ಜೆಎನ್‌ಯು ಕನ್ನಡ ಅಧ್ಯಯನ ಪೀಠವನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ. ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಆತಂಕಪಡಬೇಕಾದ ಅಗತ್ಯವಿಲ್ಲ
-ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

****

ನಾವು ಕೂಡ ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದೇವೆ. ನಿಗದಿತ ಅವಧಿಯೊಳಗೆ ಪ್ರಾಧ್ಯಾಪಕರ ನೇಮಕಾತಿ ಬಗ್ಗೆ ಭರವಸೆ ಸಿಕ್ಕಿದೆ
-ಟಿ.ಎಸ್. ನಾಗಾಭರಣ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಪಕುಲಪತಿಗೆ ಪತ್ರ ಬರೆದಿದ್ದೇವೆ. ಪೀಠಕ್ಕೆ ಬೀಗ ಹಾಕಲು ಅವಕಾಶ ನೀಡುವುದಿಲ್ಲ. ಮುಂದಿನ ವಾರ ನೇಮಕಾತಿ ನಡೆಯಲಿದೆ

-ಎಸ್. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

 

***

ಅಧ್ಯಯನ ಪೀಠದ ಚಟುವಟಿಕೆಗಳು

* ಕನ್ನಡ ತರಗತಿಗಳನ್ನು ನಡೆಸುವುದು

* ನಿಯಮಿತವಾಗಿ ವಿಚಾರಸಂಕಿರಣ ಹಾಗೂ ಕನ್ನಡಪರ ಕಾರ್ಯಕ್ರಮಗಳ ಆಯೋಜನೆ

* ಜಾಲತಾಣದ ಮೂಲಕ ಕನ್ನಡ ಕಲಿಕೆ 

* ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ

* ವಿವಿಧ ವಿಷಯಗಳ ಮೇಲೆ ಕಮ್ಮಟಗಳ ಆಯೋಜನೆ

* ‘ಕವಿರಾಜಮಾರ್ಗ’, ‘ಗದಾಯುದ್ಧ’ ಸೇರಿದಂತೆ ಹಲವು ಪುಸ್ತಕಗಳು ಆಂಗ್ಲ ಭಾಷೆಯಲ್ಲಿ ಪ್ರಕಟಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು