ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಸಮುದಾಯಕ್ಕೆ ಹಬ್ಬಲು ಬಿಜೆಪಿ ಕಾರಣ: ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್‌ ಆರೋಪ

Last Updated 15 ಜುಲೈ 2020, 16:19 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ಸಮುದಾಯಕ್ಕೆ ಹಬ್ಬಿದ್ದು, ಆಡಳಿತರೂಢ ಬಿಜೆಪಿಯ ದುರ್ಬಲ ನಾಯಕತ್ವವೇ ಇದಕ್ಕೆ ಕಾರಣ ಎಂದು ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್‌ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸೋಂಕು ಸಮುದಾಯಕ್ಕೆ ಹಬ್ಬದಂತೆ ತಡೆಯಲು ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈಗ ತೇಪೆ ಹಚ್ಚುವುದಕ್ಕಾಗಿ ಕಡಿಮೆ ಅವಧಿಯ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಇಂತಹ ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಈಗ ಆಗಿರುವ ಲೋಪಗಳ ಹೊಣೆಯನ್ನು ಬಿಜೆಪಿ ಹೊತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಬಂಟ್ವಾಳದ ಕಸಬಾ ಗ್ರಾಮದ ಮಹಿಳೆಗೆ ಕೋವಿಡ್‌ ಸೋಂಕು ತಗುಲಿದ್ದು ಯಾವ ಮೂಲದಿಂದ ಎಂಬುದರ ಕುರಿತು ಜಿಲ್ಲಾಡಳಿತ ಸರಿಯಾಗಿ ತನಿಖೆ ನಡೆಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸೋಂಕಿನ ಮೂಲ ಪತ್ತೆಗೆ ತನಿಖೆಗೆ ಆದೇಶಿಸಿ, ಮೌನಕ್ಕೆ ಜಾರಿದರು. ಎರಡು ತಿಂಗಳಾದರೂ ತನಿಖೆಯ ವರದಿ ಬರಲಿಲ್ಲ. ಸೋಂಕಿನ ಸರಪಳಿಯನ್ನು ತುಂಡರಿಸಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇಂತಹ ಲೋಪಗಳೇ ಸೋಂಕು ಸಮುದಾಯಕ್ಕೆ ವ್ಯಾಪಿಸಲು ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ತುರ್ತು ಸಿದ್ಧತೆಗೆ ಆಗ್ರಹ

‘ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಮೂರನೇ ಹಂತ ತಲುಪಿದೆ. ಆದರೆ, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಸೋಂಕಿತರ ಚಿಕಿತ್ಸೆ ಮತ್ತು ಸಂಪರ್ಕಿತರ ಕ್ವಾರಂಟೈನ್‌ಗೆ ಈಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಬೇಕು’ ಎಂದು ಮೋಹನ್‌ ಆಗ್ರಹಿಸಿದ್ದಾರೆ.

ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರಧಾನ ಮಂತ್ರಿಯವರ ಪರಿಹಾರ ನಿಧಿ, ಪಿಎಂ ಕೇರ್ಸ್‌ ನಿಧಿ, ಮುಖ್ಯಮಂತ್ರಿಯವರ ಪರಿಹಾರ ನಿಧಿಯ ಹಣವನ್ನು ಬಳಸಿಕೊಳ್ಳಬೇಕು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಹೆಚ್ಚಿನ ಹಣ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT