ಶುಕ್ರವಾರ, ಜೂನ್ 18, 2021
21 °C
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ

ನಾಗರಪಂಚಮಿ | ಕುಕ್ಕೆ ದೇಗುಲಕ್ಕೆ ಬಂದ ‘ನಾಗರಾಜ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಂಗಣಕ್ಕೆ ನಾಗರಪಂಚಮಿಯ ಶನಿವಾರವೇ ನಾಗರಹಾವು ಬಂದಿದೆ.

ಭಾರತದಲ್ಲೇ ನಾಗ ಆರಾಧನೆಯ ಪ್ರಮುಖ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದ ನಾಗ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಅಭಿಷೇಕ ನೆರವೇರಿಸಿ, ಪೂಜೆ ಮಾಡುವ ವೇಳೆಯಲ್ಲಿ ಗರ್ಭಗುಡಿಯ ಹೊರಾಂಗಣದಲ್ಲಿ ನಾಗರ ಹಾವು ಕಂಡುಬಂದಿದೆ. ತಕ್ಷಣವೇ ಅರ್ಚರು ಹಾವಿಗೆ ಹಾಲನ್ನು ನೀಡಿದರು. ಬಳಿಕ ನಾಗರ ಹಾವು ಹೋಗಿದೆ.

‘ಸುಬ್ರಹ್ಮಣ್ಯ ದೇಗುಲದ ಪ್ರಮುಖ ಗರ್ಭಗುಡಿಯ ಹಿಂಭಾಗದಲ್ಲೇ ಹುತ್ತವಿದ್ದು, ವರ್ಷಕ್ಕೊಮ್ಮೆ ಇಲ್ಲಿಂದ ಮೂಲ ಮೃತ್ತಿಕಾ ಪ್ರಸಾದ (ಮೂರು ಹಿಡಿ ಹುತ್ತದ ಮಣ್ಣು) ತೆಗೆಯಲಾಗುತ್ತದೆ. ಇದು ಪ್ರಮುಖ ಪ್ರಸಾದವಾಗಿದೆ. ಇಲ್ಲಿನ ಆದಿ ಸುಬ್ರಹ್ಮಣ್ಯ ಹಾಗೂ ಮುಖ್ಯ ದೇಗುಲದಲ್ಲೂ ಆಗಾಗ್ಗೆ ನಾಗರ ಹಾವು ಬಂದು ಹೋಗುತ್ತದೆ. ಆದರೆ, ಈ ಬಾರಿ ನಾಗರ ಪಂಚಮಿಯಂದೇ ಬಂದಿರುವುದು ವಿಶೇಷವಾಗಿದೆ’ ಎಂದು ದೇಗುಲದ ಸಿಬ್ಬಂದಿ ಧನ್ಯತೆ ವ್ಯಕ್ತಪಡಿಸಿದರು.

ವರ್ಷಂಪ್ರತಿ ನಾಗರ ಪಂಚಮಿಯಂದು ಸುಬ್ರಹ್ಮಣ್ಯದಲ್ಲಿ ಭಕ್ತರು ಕಿಕ್ಕಿರಿದು ತುಂಬಿರುತ್ತಿದ್ದರು. ಸೀಯಾಳ, ಹಾಲು, ಹಿಂಗಾರ, ಅರಶಿಣ ಇತ್ಯಾದಿಗಳನ್ನು ಸಮರ್ಪಿಸಿ ಆರಾಧಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣ ದೇಗುಲದ ಸಿಬ್ಬಂದಿ ಮತ್ತು ಅರ್ಚಕರಿಗೆ ಮಾತ್ರ ಪ್ರವೇಶವಿದ್ದು, ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು.

ಇಲ್ಲಿನ ನಾಗನ ಆರಾಧನೆಗೆ ಸಂಬಂಧಿಸಿದಂತೆ ನಾಗದೋಷ ಪರಿಹಾರ, ನಾಗಮಂಡಲ, ಆಶ್ಲೇಷ ಬಲಿ, ನಾಗ ತಂಬಿಲ, ಅಭಿಷೇಕಗಳು ನಡೆಯುತ್ತವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು