ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಳ್ಳಿಯಲ್ಲಿ ತುರ್ತು ಸ್ಪಂದನೆಗೆ ವಾಕಿ–ಟಾಕಿ ಬಳಕೆ

ನಂದಗಡ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಉಪಕ್ರಮ
Last Updated 2 ಆಗಸ್ಟ್ 2020, 22:43 IST
ಅಕ್ಷರ ಗಾತ್ರ
ADVERTISEMENT
""

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಸಣ್ಣ ಗ್ರಾಮ ನಂದಗಡದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವಾಕಿ– ಟಾಕಿಗಳನ್ನು ಕೊಡಿಸಲಾಗಿದೆ. ಹೀಗೆ ಅವುಗಳನ್ನು ಬಳಸುತ್ತಿರುವ ರಾಜ್ಯದ ಮೊದಲ ಹಳ್ಳಿ ಇದು ಎನ್ನಲಾಗುತ್ತಿದೆ.

ಗ್ರಾಮದಲ್ಲಿ 9,500 ಜನಸಂಖ್ಯೆ ಇದ್ದು, 23 ವಾರ್ಡ್‌ಗಳಿವೆ. ಮೊಬೈಲ್‌ ಫೋನ್‌ಗಳ ಬಳಕಗೆ ನೆಟ್‌ವರ್ಕ್‌ ಸಮಸ್ಯೆ ಇದೆ. ಇದರಿಂದ ಜನರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ತೊಡಕಾಗದಿರಲೆಂದು ವಾಕಿ–ಟಾಕಿಗಳನ್ನು ಖರೀದಿಸಲಾಗಿದೆ. ಪಂಚಾಯಿತಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು, ಜನರು ಆ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸುತ್ತಾರೆ. ಅದನ್ನು ಸಿಬ್ಬಂದಿಗೆ ತಿಳಿಸಿ ಸ್ಪಂದಿಸಲಾಗುತ್ತಿದೆ. ಇದಕ್ಕಾಗಿ ಕ್ಲರ್ಕ್‌, ಬಿಲ್‌ ಕ್ಲರ್ಕ್, ವಾಟರ್‌ಮನ್‌, ಘನ ತ್ಯಾಜ್ಯ ನಿರ್ವಹಣಾ ಘಟಕದ ಮೇಲ್ವಿಚಾರಕ ಹಾಗೂ ಪಿಡಿಒ ವಾಕಿ–ಟಾಕಿಗಳನ್ನು ಬಳಸುತ್ತಿದ್ದಾರೆ.

ಸ್ವಂತ ಅನುದಾನ:

ಗ್ರಾಮದ (2.5 ಕಿ.ಮೀ.) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವುಳ್ಳ ತಲಾ ₹ 10ಸಾವಿರದ ಐದು ವಾಕಿ–ಟಾಕಿಗಳನ್ನು ಪಂಚಾಯಿತಿಯ ಸ್ವಂತ ಸಂಪನ್ಮೂಲದಲ್ಲಿ ಖರೀದಿಸಲಾಗಿದೆ. ಏಕಕಾಲದಲ್ಲಿ ಎಲ್ಲರೊಂದಿಗೂ ಸಂವಹನ ಸಾಧಿಸಬಹುದಾಗಿದೆ.

‘ನೀರು ಪೂರೈಕೆ ಆಗದಿರುವುದು, ಕಸ ಸಂಗ್ರಹಿಸದಿರುವುದು, ಬೀದಿ ದೀಪಗಳ ಸಮಸ್ಯೆ ಮೊದಲಾದವುಗಳನ್ನು ಸಾರ್ವಜನಿಕರು ಪಂಚಾಯಿತಿಗೆ ಕರೆ ಮಾಡಿ ತಿಳಿಸುತ್ತಾರೆ. ಈ ಮಾಹಿತಿಯನ್ನು ವಾಕಿ–ಟಾಕಿಗಳ ಮೂಲಕ ಒಂದೇ ಸಮಯದಲ್ಲಿ ಎಲ್ಲ ಸಿಬ್ಬಂದಿಗೂ ತಿಳಿಸಬಹುದಾಗಿದೆ. ಸಂಬಂಧಿಸಿದವರು ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಹಿಂದೆ ಮೊಬೈಲ್‌ ಫೋನ್ ಬಳಸುತ್ತಿದ್ದಾಗ ಸಂವಹನಕ್ಕೆ ಪ್ರತ್ಯೇಕವಾಗಿ ಕರೆ ಮಾಡಬೇಕಾಗುತ್ತಿತ್ತು. ಈಗ ಆ ತಾಪತ್ರಯವಿಲ್ಲ. ತ್ವರಿತವಾಗಿ ಸಂಪರ್ಕಿ ಸಾಧಿಸಬಹುದು. ಜನರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಕಿ–ಟಾಕಿಗಳ ಬಳಕೆಯಿಂದ ಅನುಕೂಲವಾಗಿದೆ. ಸಮಯವೂ ಉಳಿತಾಯವಾಗುತ್ತಿದೆ’ ಎಂದು ಪಿಡಿಒ ಕೆ.ಎಸ್. ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಮ್‌ ಕಾರ್ಡ್‌ ಬೇಕಿಲ್ಲ. ಮೊಬೈಲ್‌ ಫೋನ್ ಸಿಗ್ನಲ್‌ ಸಿಗುತ್ತಿಲ್ಲ, ಕರೆನ್ಸಿ ಖಾಲಿಯಾಗಿದೆ ಎನ್ನುವ ನೆಪಗಳನ್ನು ಹೇಳುವಂತಿಲ್ಲ. ವಾಕಿ–ಟಾಕಿಗಳನ್ನು 4–5 ತಾಸು ಛಾರ್ಜ್‌ ಮಾಡಿದರೆ ವಾರದವರೆಗೆ ಬಳಸಬಹುದಾಗಿದೆ. ಸಿಬ್ಬಂದಿ ರಜೆ ಇದ್ದರೆ ಬೇರೆಯವರಿಗೆ ವರ್ಗಾಯಿಸಿ ಹೋಗುತ್ತಾರೆ. ಯಾವ ನೌಕರ ಯಾವ ಕೆಲಸದಲ್ಲಿ ತೊಡಗಿದ್ದಾರೆ ಎನ್ನುವುದು ತಕ್ಷಣ ಗೊತ್ತಾಗುತ್ತದೆ. ಅವರಿಗೆ ನಿರ್ದೇಶನ ಮತ್ತು ಮಾಹಿತಿ ವಿನಿಮಯ ಸುಲಭವಾಗಿದೆ. ಪಂಚಾಯಿತಿಯನ್ನು ಡಿಜಿಟಲ್‌ ಮಾಡುವಲ್ಲಿ ಇವು ನೆರವಾಗಿವೆ’ ಎನ್ನುತ್ತಾರೆ ಅವರು.

* ನಂದಗಡದ ಎರಡು ಪ್ರದೇಶಗಳಲ್ಲಿ ಈಚೆಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಸೀಲ್‌ಡೌನ್‌ ಮಾಡಬೇಕಾಯಿತು. ಆ ಸಂದರ್ಭದಲ್ಲಿ ನಿರ್ದೇಶನ ನೀಡಲು ವಾಕಿ–ಟಾಕಿಗಳ ಬಳಕೆಯಿಂದ ಬಹಳ ಅನುಕೂಲವಾಯಿತು

-ಕೆ.ಎಸ್. ಗಣೇಶ್, ಪಿಡಿಒ

*ವಾಕಿ–ಟಾಕಿಗಳ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕಕ್ಕೆ ಅವುಗಳಿಂದ ನೆರವಾಗಿದೆ. ಈ ಉಪಕ್ರಮವನ್ನು ಬೇರೆ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಿದ್ದು ನಾನು ನೋಡಿಲ್ಲ

-ಮೊಹಮ್ಮದ್ ಶಫಿ, ನಿಕಟಪೂರ್ವ ಅಧ್ಯಕ್ಷ, ನಂದಗಡ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT