ಭಾನುವಾರ, ಆಗಸ್ಟ್ 1, 2021
27 °C

ರಾಜ್ಯದ ಎರಡನೇ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯ 5ರಿಂದ ಸಾರ್ವಜನಿಕರಿಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕದ ಎರಡನೇ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯ ಆ. 5ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಇನ್ನೊಂದು ಮೈಸೂರಿನಲ್ಲಿದೆ. ಭಾರತದಲ್ಲಿ ಒಟ್ಟು 11 ಈ ರೀತಿಯ ವಸ್ತು ಸಂಗ್ರಹಾಲಯಗಳಿವೆ.

ಮೊದಲ ಐದು ದಿನ ಮಧ್ಯಾಹ್ನ 4 ಗಂಟೆಯಿಂದ ಸಂಜೆ 7ರ ತನಕ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದೆ. 11ರಿಂದ ಮಂಗಳವಾರದಿಂದ ಶುಕ್ರವಾರದ ತನಕ ಮಧ್ಯಾಹ್ನ 12ರಿಂದ ಸಂಜೆ 7ರ ತನಕ ವಸ್ತು ಸಂಗ್ರಹಾಲಯ ತೆರೆದಿರುತ್ತದೆ. ವಾರಾಂತ್ಯ ಮತ್ತು ಸಾರ್ವಜನಿಕ ರಜಾ ದಿನಗಳಂದು ಮಧ್ಯಾಹ್ನ 12ರಿಂದ ರಾತ್ರಿ 8ರ ತನಕ ಪ್ರವೇಶವಿರುತ್ತದೆ. ಪ್ರತಿ ಸೋಮವಾರ ರಜಾ ದಿನವಿದ್ದು, 12 ವರ್ಷ ಮೇಲಿನವರಿಗೆ ₹20, 5ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ₹10 ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

167 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆ ಇಲಾಖೆಯು ತನ್ನ ಬೆಳವಣಿಗೆಯ ಹಾದಿಯಲ್ಲಿ ಹಂತಹಂತವಾಗಿ ಮಾಡಿಕೊಂಡ ಬದಲಾವಣೆಗಳು ಹಾಗೂ ಹೊಸತನಗಳ ಪರಿಚಯ ಈ ವಸ್ತು ಸಂಗ್ರಹಾಲಯದಲ್ಲಿದೆ. ಹೊಗೆ ಉಗುಳುವ ಎಂಜಿನ್‌ನಿಂದ ಹಿಡಿದು ಎಲೆಕ್ಟ್ರಾನಿಕ್‌ ಚಾಲಿತ ಎಂಜಿನ್‌ಗಳವರೆಗೆ ಸಮಗ್ರ ಇತಿಹಾಸದ ಪರಿಚಯವಾಗುತ್ತದೆ. ರೈಲ್ವೆಯಲ್ಲಿ ಆದ ತಾಂತ್ರಿಕ ಹಾಗೂ ತಾಂತ್ರಿಕೇತರ ಬದಲಾವಣೆಗಳು, ಸ್ಟೇಷನ್‌ ಮಾಸ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದ ರೀತಿ, ಸಿಗ್ನಲ್‌ ತೋರಿಸುವ ಹಿಂದಿನ ವಿಧಾನಗಳು, ಲೋಕೊ ಪೈಲಟ್‌ಗಳು ಕೆಲಸ ಮಾಡುತ್ತಿದ್ದ ರೀತಿ ಸಂ‍ಪೂರ್ಣ ಚಿತ್ರಣ ಸಿಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.


ಹುಬ್ಬಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರೈಲ್ವೆ ವಸ್ಗು ಸಂಗ್ರಹಾಲಯದ ನೋಟ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಗದುಗಿಗೆ ಹೋಗುವ ಮಾರ್ಗದಲ್ಲಿ ಬರುವ ರೈಲ್ವೆ ಆಸ್ಪತ್ರೆ ಎದುರಿನ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಮಕ್ಕಳು ರೈಲಿನಲ್ಲಿ ಆಟವಾಡಲು ಪ್ರತ್ಯೇಕ ಸೌಲಭ್ಯ, ಟಿಕೆಟ್‌ ಮುದ್ರಿಸುವ ಹಳೆಕಾಲದ ಯಂತ್ರ, ಮನರಂಜನಾ ರೈಲು, ಥೇಟರ್‌ ಬೋಗಿ, ಪೇಂಟಿಂಗ್‌ಗಳು, ಸರಕುಗಳನ್ನು ತೂಕ ಮಾಡಲು ಬಳಸುತ್ತಿದ್ದ ಯಂತ್ರಗಳು ಇವೆ.

ಕೊರೊನಾ ಸೋಂಕಿನ ಭೀತಿ ಇರುವ ಕಾರಣ ವಸ್ತು ಸಂಗ್ರಹಾಲಯ ನೋಡಲು ಒಂದು ಬಾರಿಗೆ ಗರಿಷ್ಠ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಉಪಯೋಗಿಸಿ ಒಳಗೆ ಬರಬೇಕು. ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ತಿಳಿಸಿದ್ದಾರೆ. ಸೋಂಕಿನ ಹಾವಳಿ ಮುಗಿಯುವ ತನಕ ವಸ್ತು ಸಂಗ್ರಹಾಲಯದ ಒಳಗಡೆ ಇರುವ ಕಿರು ಸಿನಿಮಾ ಮಂದಿರ ತೆರೆಯುವುದಿಲ್ಲ ಎಂದಿದ್ದಾರೆ.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ವಸ್ತು ಸಂಗ್ರಹಾಲಯದ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರವಾಸಿ ತಾಣವಾಗಿ ರೂಪಿಸುವ ಗುರಿಯಿದೆ ಎಂದು ವಿಜಯಾ ಹೇಳಿದ್ದಾರೆ.


ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ಸುಜಾತಾ ಸಿಂಗ್ ವಸ್ತು ಸಂಗ್ರಹಾಲಯ ವೀಕ್ಷಿಸಿದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು