ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಗಜಾನನ ಬಾಲೆಗೆ 663ನೇ ರ್‍ಯಾಂಕ್‌

5ನೇ ಬಾರಿಗೆ ಕ್ಲಿಯರ್‌ ಮಾಡಿದ ಕುಡಚಿಯ ಯುವಕ
Last Updated 4 ಆಗಸ್ಟ್ 2020, 9:41 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು 2019ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಜಿಲ್ಲೆಯ ರಾಯಬಾಗ ತಾಲ್ಲೂಕು ಕುಡಚಿಯ ಗಜಾನನ ಬಾಲೆ 663ನೇ ರ‍್ಯಾಂಕ್‌ ಗಳಿಸಿ ಸಾಧನೆ ತೋರಿದ್ದಾರೆ.

ನಾಲ್ಕು ಬಾರಿ ವಿಫಲವಾಗಿದ್ದ ಅವರು, ಛಲ ಬಿಡದೆ 5ನೇ ಬಾರಿಗೆ ಸಫಲರಾಗಿದ್ದಾರೆ.

ಎಂಜಿನಿಯರಿಂಗ್ ಪದವೀಧರರಾದ 28 ವರ್ಷದ ಗಜಾನನ ‘ಕನ್ನಡ’ವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

‘ಪ್ರಜಾವಾಣಿ’ ಓದುತ್ತಿದ್ದೆ:‘ಈ ಬಾರಿ ಮೇನ್ಸ್‌ನಲ್ಲಿ ಚೆನ್ನಾಗಿ ಮಾಡಿದ್ದೆ. ಹೀಗಾಗಿ, ಕ್ಲಿಯರ್ ಆಗುತ್ತದೆ ಎನ್ನುವ ವಿಶ್ವಾಸವಿತ್ತು. ನಿತ್ಯ 8 ತಾಸು ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ದಿನಪತ್ರಿಕೆಗಳನ್ನು ಓದುತ್ತಿದ್ದೆ. ಇಂಗ್ಲಿಷ್ ಪತ್ರಿಕೆಯೊಂದಿಗೆ ‘ಪ್ರಜಾವಾಣಿ’ಯನ್ನು ನಿಯಮಿತವಾಗಿ ಓದುತ್ತಿದ್ದೆ. ಇದರಿಂದ ಪರೀಕ್ಷೆಯಲ್ಲಿ ಬಹಳ ಸಹಾಯವಾಯಿತು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದೆಹಲಿಯಲ್ಲಿ ಮೇನ್ಸ್‌ಗೆ ಕೋಚಿಂಗ್ ಪಡೆಯುತ್ತಿದ್ದ ವೇಳೆ ಅಲ್ಲಿನ ಖರ್ಚುಗಳಿಗಾಗಿ ಖಾಸಗಿ ಕಂಪನಿಯೊಂದರಲ್ಲಿ ಕಂಟೆಂಟ್ ಡಿಸೈನರ್‌ ಆಗಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದೆ. ವಾಜಿರಾಮ್‌ ಕೋಚಿಂಗ್ ಸೆಂಟರ್‌, ಬೆಂಗಳೂರಿನ ಅನರ್ಘ್ಯ ಐಎಎಸ್‌ ಅಕಾಡೆಮಿ ಹಾಗೂ ಧಾರವಾಡದಲ್ಲೂ ಕೋಚಿಂಗ್‌ ಪಡೆದಿದ್ದೇನೆ. ನವದೆಹಲಿಯಿಂದ ಜುಲೈ 25ಕ್ಕೆ ಕುಡಚಿಗೆ ವಾಪಸಾಗಿದ್ದೆ. ಹೀಗಾಗಿ, ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಕ್ವಾರಂಟೈನ್ ಅವಧಿ ಇನ್ನೂ ಎರಡು ದಿನಗಳವರೆಗೆ ಇದೆ’ ಎಂದು ಮಾಹಿತಿ ನೀಡಿದರು.

ಕನ್ನಡ ಮಾಧ್ಯಮದಲ್ಲಿ:ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ಅವರು ಗ್ರಾಮೀಣ ವಿದ್ಯಾರ್ಥಿಯೂ ಹೌದು. ತಂದೆ ಶಂಕರ್‌ ಉಗಾರ ಶುಗರ್ಸ್‌ ಸಕ್ಕರೆ ಕಾರ್ಖಾನೆಯಲ್ಲಿ ಎಲೆಕ್ಟ್ರೀಷಿಯನ್‌ ಆಗಿದ್ದಾರೆ. ತಾಯಿ ಸುಜಾತಾ ಗೃಹಿಣಿ. ಉಗಾರಖುರ್ದ್‌ನ ಶ್ರೀಹರಿ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ, ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ (ಇ ಅಂಡ್ ಸಿ ವಿಭಾಗ) ಪದವಿ ಪಡೆದಿದ್ದಾರೆ. ಎಲ್ಲ ಪರೀಕ್ಷೆಗಳಲ್ಲೂ ಡಿಸ್ಟಿಂಕ್ಷನ್‌ನಲ್ಲಿ ಅವರು ತೇರ್ಗಡೆಯಾಗಿದ್ದಾರೆ. 2013ರಲ್ಲಿ ಬಿಇ ಮುಗಿಸಿದ್ದ ಅವರು ಯು‍ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

‘ಪರೀಕ್ಷೆ ಕ್ಲಿಯರ್ ಮಾಡಿದ್ದಕ್ಕೆ ಬಹಳ ಖುಷಿಯಾಗಿದೆ. ನಾವು ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲ. ತಂದೆ–ತಾಯಿ ನನ್ನನ್ನು ಕಷ್ಟಪಟ್ಟು ಬೆಳೆಸಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲ ತಂದುಕೊಟ್ಟ ತೃಪ್ತಿ ಇದೆ. ಅವರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ’ ಎಂದು ಗಜಾನನ ಹೇಳಿದರು.

ರವಿ ಚನ್ನಣ್ಣವರ, ಅಣ್ಣಾಮಲೈ ನೋಡಿದಾಗ:‘ಎಂಜಿನಿಯರಿಂಗ್‌ ಸೇರಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಬಂತು. ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ಪರೀಕ್ಷೆ ವೇಳೆ ಸಹಕಾರಿಯಾಯಿತು. ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣವರ, ಹಿಂದೆ ಐಪಿಎಸ್‌ ಆಗಿದ್ದ ಅಣ್ಣಾಮಲೈ ಅಂಥವರನ್ನು ನೋಡಿದಾಗ ನಾನೂ ಹೀಗಾಗಬೇಕು ಎಂದುಕೊಳ್ಳುತ್ತಿದ್ದೆ. ನನ್ನ ಛಲವೇ ನನಗೆ ಹೆಚ್ಚು ಸ್ಫೂರ್ತಿ ನೀಡಿತು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದುಕೊಳ್ಳುತ್ತಿದ್ದೆ. ಈಗ, ನಾನು ಪಡೆದಿರುವ ರ‍್ಯಾಂಕ್‌ಗೆ ಐಪಿಎಸ್‌ ಸಿಕ್ಕರೆ ಹೆಚ್ಚು ಖುಷಿಯಾಗುತ್ತದೆ’ ಎಂದು ಸಂತಸ ಹಂಚಿಕೊಂಡರು.

‘ಕೈಲಾದಷ್ಟು ಸಮಾಜ ಸೇವೆ ಮಾಡಬೇಕು. ಬಡವರಿಗೆ ಸಾಧ್ಯವಾದಷ್ಟು ನೆರವಾಗಬೇಕು ಎನ್ನುವ ಕನಸಿದೆ. ಸರ್ಕಾರದ ಯೋಜನೆಗಳ ಲಾಭವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು. ಫಲಾನುಭವಿಗಳಿಗೆ ತಲುಪಿಸಬೇಕು ಎಂಬ ಆಸೆ ಇದೆ. ಬದ್ಧತೆಯಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಫೇಸ್‌ಬುಕ್‌ ಅಕೌಂಟ್ ಇದೆಯಾದರೂ ಹೆಚ್ಚು ಬಳಸುತ್ತಿರಲಿಲ್ಲ. ಹೆಚ್ಚಿನ ಸಮಯ ಓದುವುದಕ್ಕೆ ಮೀಸಲಿಟ್ಟಿದ್ದೆ’ ಎಂದರು.

‘ಯುಪಿಎಸ್‌ಸಿ ಪರೀಕ್ಷೆ ಕ್ಲಿಯರ್ ಮಾಡಲು ಬದ್ಧತೆಯಿಂದ ಓದಬೇಕು. ಹೆಚ್ಚು ಶ್ರಮ ಪಡಬೇಕು. ಸಹನೆ ಮುಖ್ಯವಾಗಿ ಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

‘ಮಗ ಯುಪಿಎಸ್‌ಸಿಯಲ್ಲಿ ಒಳ್ಳೆಯ ಅಂಕ ಗಳಿಸಿರುವುದಕ್ಕೆ ಖುಷಿಯಾಗಿದೆ. ಆತ ಅಧಿಕಾರಿಯಾಗಿ ಜನ ಸೇವೆ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ’ ಎಂದು ತಂದೆ ಶಂಕರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT